Advertisement

ರಾಷ್ಟ್ರ ರಾಜಕಾರಣಕ್ಕೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ

07:10 AM Aug 07, 2017 | |

ಬೆಂಗಳೂರು: ಪಕ್ಷದ ಸಿದ್ಧಾಂತಗಳ ಹೊರತಾಗಿ ಎಲ್ಲ ಪಕ್ಷಗಳ ಮತ್ತು ರಾಜಕಾರಣಿಗಳ ಏಕೈಕ ಅಜೆಂಡಾ ದೇಶದ ಅಭಿವೃದ್ಧಿ ಆಗಿರಬೇಕು. “ಸರ್ವೆಜನಾಃ ಸುಖೀನೋ ಭವಂತು ಮತ್ತು ವಸುದೈವ ಕುಟುಂಬಕಂ’ ಅನ್ನುವುದು ರಾಜಕಾರಣಿಗಳ ಆದ್ಯತೆ ಆಗಬೇಕು ಎಂದು ನೂತನ ನಿಯೋಜಿತ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಹಾಗೂ ಪಿಇಎಸ್‌ ವಿವಿಯ ಕುಲಪತಿ ಡಾ.ಎಂ.ಆರ್‌.ದೊರೆಸ್ವಾಮಿ ನೇತೃತ್ವದ ಅಭಿನಂದನಾ ಸಮಿತಿ ಭಾನುವಾರ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Advertisement

ಭಾರತ ಅನ್ನುವುದು ಕೇವಲ ಭೌಗೋಳಿಕ ಅಥವಾ ಭೌತಿಕ ಛಾಯೆ ಅಲ್ಲ. ಇದೊಂದು ಬಲಿಷ್ಠ ನಾಗರಿಕತೆಯ ಪ್ರಬುದಟಛಿ ಪ್ರಜಾಪ್ರಭುತ್ವ ದೇಶ. ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ, ಪ್ರಜಾತಂತ್ರ ವ್ಯವಸ್ಥೆ, ಆರ್ಥಿಕ, ಸಾಮಾಜಿಕ, ರಾಜಕೀಯ ಚೌಕಟ್ಟುಗಳ ಅಸ್ಮಿತೆಯನ್ನು ಪ್ರಜ್ಞಾಪೂರ್ವಕವಾಗಿ ಮುನ್ನಡೆಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ. ಬಡವರು, ಅವಕಾಶ ವಂಚಿತರ ಬಗ್ಗೆ ಕಾಳಜಿ, ಆರ್ಥಿಕ ಅಸಮಾನತೆಯ ನಿವಾರಣೆ ಎಲ್ಲ ಹಂತದ ಚುನಾಯಿತ ಜನಪ್ರತಿನಿಧಿಗಳ ಆದ್ಯತೆ ಆಗಬೇಕು ಎಂದರು.

ರಾಜ್ಯಸಭೆಯ ಘನತೆ ಕಾಪಾಡುತ್ತೇನೆ: ದೇಶದ ರಾಜ್ಯಸಭೆಗೆ ತನ್ನದೇ ಆದ ಇತಿಹಾಸ ಮತ್ತು ಘನತೆ ಇದೆ. ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ಪಕ್ಷಗಳ ಸಹಕಾರದೊಂದಿಗೆ ರಾಜ್ಯಸಭೆಯಲ್ಲಿ ದೇಶದ ಜ್ವಲಂತ ಸವಾಲುಗಳು, ಬಡವರ ಮತ್ತು ರೈತರ ಸಮಸ್ಯೆಗಳ ಅರ್ಥಪೂರ್ಣ ಚರ್ಚೆಗಳು ಆಗುವಂತೆ ಪ್ರಯತ್ನಿಸುತ್ತೇನೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದ ಸಕಾರಾತ್ಮಕ ಸಹಕಾರ ಅಪೇಕ್ಷಿಸುತ್ತೇನೆ. ಮೊದಲಿಂದಲೂ ಎಲ್ಲಾ ಪಕ್ಷಗಳು ನನ್ನ ಬಗ್ಗೆ ಗೌರವ, ಅಭಿಮಾನ ಇಟ್ಟುಕೊಂಡಿರುವುದರಿಂದ ನನಗೆ ಪೂರ್ಣ ಪ್ರಮಾಣದ ಸಹಕಾರ ಸಿಗುತ್ತದೆಂಬ ವಿಶ್ವಾಸವಿದೆ ಎಂದು ವೆಂಕಯ್ಯನಾಯ್ಡು ಹೇಳಿದರು.

ಎಂವಿಆರ್‌ ನೈಜ ಕಾಂಗ್ರೆಸ್ಸಿಗ: ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್‌ ಕಾಂಗ್ರೆಸ್‌ ಪಕ್ಷದ ಅತ್ಯಂತ ಹಿರಿಯ ನಾಯಕ. ಆದರೆ, ಅವರೊಬ್ಬ ನೈಜ ಕಾಂಗ್ರೆಸ್ಸಿಗ ಎಂದು ಹೇಳುವ ಮೂಲಕ ನೂತನ ನಿಯೋಜಿತ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದರು.

ಅಭಿನಂದನಾ ಸಮಾರಂಭದ ವೇದಿಕೆಯಲ್ಲಿದ್ದ ಎಂ.ವಿ.ರಾಜಶೇಖರನ್‌ ಕುರಿತು ಅಭಿಮಾನದ ಮಾತುಗಳನ್ನಾಡಿದ ನಾಯ್ಡು, ಎಂ.ವಿ.ರಾಜಶೇಖರನ್‌ ಅವರ ಪಕ್ಷ ಬೇರೆ, ಅದರೂ ನನ್ನ ಮೇಲಿನ ಅಭಿಮಾನ ಮತ್ತು ಗೌರವಕ್ಕಾಗಿ ಇಂದು ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಿದ್ದಾರೆ. ಅವರು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ. ಆದರೆ, ಅವರೊಬ್ಬ ನೈಜ ಕಾಂಗ್ರೆಸಿಗ ಎಂದರು.

Advertisement

ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನಾನು ಕರ್ನಾಟಕದಿಂದ ಸ್ಪರ್ಧಿಸುವ ವಿಚಾರದಲ್ಲಿ ಕೆಲವೊಂದು ಆಕ್ಷೇಪಣೆಗಳು ಕೇಳಿ ಬಂದಾಗ ಎಂ.ವಿ.ರಾಜಶೇಖರನ್‌ ಅವರು ನನಗೆ ವೈಯಕ್ತಿಕವಾಗಿ ಸುದೀರ್ಘ‌ ಪತ್ರವೊಂದು ಬರೆದು, ಕರ್ನಾಟಕದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಬಳಿಕ ರಾಜಸ್ಥಾನದಿಂದ ನನ್ನ ಸ್ಪರ್ಧೆ ಖಚಿತ ಆದಾಗ, ಕರ್ನಾಟಕ ನಿಮ್ಮ ಸೇವೆಯಿಂದ ವಂಚಿತವಾಯಿತು ಎಂದು ತುಂಬಾ ಭಾವನಾತ್ಮಕ ಪತ್ರ ಬರೆದಿದ್ದರು ಎಂದು ವೆಂಕಯ್ಯ ನಾಯ್ಡು ಇದೇ ವೇಳೆ ನೆನಪಿಸಿಕೊಂಡರು.ಕೇಂದ್ರ ಸಚಿವರಾದ ಅನಂತಕುಮಾರ್‌,ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ,ಜಗದೀಶ್‌ ಶೆಟ್ಟರ್‌, ಶೋಭಾ ಕರಂದ್ಲಾಜೆ, ಆರ್‌.ಅಶೋಕ್‌, ಸಿ.ಎಂ.ಉದಾಸಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್‌.ಪಿ. ಖೀಂಚಾ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಜನತೆಗೆ ಧನ್ಯವಾದ ಹೇಳಿದ ನಾಯ್ಡು
“ಗೆಳೆಯರೇ, ಸ್ನೇಹಿತರೆ, ಬೆಂಗಳೂರು ನಾಗರಿಕರೆ ಮೂರು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಕಳಿಸಿದ ಜನತೆಗೆ ಧನ್ಯವಾದಗಳು’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು, ಸಾಮಾನ್ಯ ರೈತ ಕುಟುಂಬದಿಂದ ಬಂದ ನನ್ನನ್ನು ರಾಷ್ಟ್ರರಾಜಕಾರಣಕ್ಕೆ ವೇದಿಕೆ ಕಲ್ಪಿಸಿದ್ದು ಕರ್ನಾಟಕ ಎಂದು ವೆಂಕಯ್ಯ ನಾಯ್ಡು ತಮ್ಮ ಕರ್ನಾಟಕದ ರಾಜಕೀಯ ನಂಟನ್ನು ಸ್ಮರಿಸಿಕೊಂಡರು. ಉಪ ರಾಷ್ಟ್ರಪತಿಯಾಗಿ ಚುನಾಯಿತ ಆದ ಮೇಲೆ ಮೊದಲು ನನ್ನ ರಾಜಕೀಯ ಕರ್ಮಭೂಮಿ ಕರ್ನಾಟಕಕ್ಕೆ ಹೋಗಬೇಕು ಎಂದು ತೀರ್ಮಾನಿಸಿದೆ. ಹಾಗಾಗಿ ಇಲ್ಲಿ ಬಂದು ಸನ್ಮಾನ ಸ್ವೀಕರಿಸಿ ಜನತೆಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ನಾನು ರಾಜಕೀಯ ಕುಟುಂಬದಿಂದ ಬಂದವನಲ್ಲ. ಒಬ್ಬ ಸಾಮಾನ್ಯ ರೈತನ ಕುಟುಂಬದಿಂದ ಬಂದ ಮಣ್ಣಿನ ಮಗ. ವಾಜಪೇಯಿ, ಅಡ್ವಾಣಿ ಅವರ ಭಾಷಣ ಇದೆ ಎಂದು ರಿಕ್ಷಾದಲ್ಲಿ ಪ್ರಚಾರ ಮಾಡುತ್ತಿದ್ದೆ, ಗೋಡೆಗಳಿಗೆ ಪೋಸ್ಟರ್‌ ಅಂಟಿಸುತ್ತಿದ್ದ ಮತ್ತು ಲೈಟಿನ ಕಂಬಗಳಿಗೆ ಪಕ್ಷದ ಬಾವುಟಗಳನ್ನು ಕಟ್ಟುತ್ತಿದ್ದ ನಾನು ಇಂದು ಉಪರಾಷ್ಟ್ರಪತಿ ಹುದ್ದೆಗೆ ಏರಿದ್ದೇನೆಂದರೆ ಅದರಲ್ಲಿ ಕರ್ನಾಟಕದ ಪಾಲು ಬಹಳ ದೊಡ್ಡದಿದೆ. ದಶಕಗಳ ಹಿಂದೆ ಕರ್ನಾಟಕದ ಬಿ.ಡಿ.ಜತ್ತಿ ಉಪರಾಷ್ಟ್ರಪತಿ ಆಗಿದ್ದರು, ಇಂದು ನಾನು ಆ ಹುದ್ದೆ ಅಲಂಕರಿಸುತ್ತಿದ್ದೇನೆ ಎಂದು ವೆಂಕಯ್ಯ ನಾಯ್ಡು ಸ್ಮರಿಸಿಕೊಂಡರು.

ಸಾಮಾಜಿಕ ಹರಿಕಾರ ಬಸವಣ್ಣನ ವಚನಗಳ ಸಾರವನ್ನು ಎಂ.ವೆಂಕಯ್ಯ ನಾಯ್ಡು ಮೈಗೂಡಿಸಿಕೊಂಡಿದ್ದಾರೆ. ನನಗೆ ಅವರ ಮೇಲೆ ಅಪಾರ ಗೌರವವಿದೆ. ಉಪರಾಷ್ಟ್ರಪತಿ ಆಗಿ ಚುನಾಯಿತ ಆಗಿರುವುದಕ್ಕೆ ನನಗೆ ತುಂಬಾ ಸಂತೋಷ ತಂದಿದೆ. ನುಡಿ ಮತ್ತು ನಡೆಯಲ್ಲಿ ಒಂದೇ ಆಗಿರುವ ಅವರು ಉಪರಾಷ್ಟ್ರಪತಿ ಹುದ್ದೆಯ ಪಾವಿತ್ರ್ಯತೆ ಮತ್ತು ಘನತೆ ಕಾಪಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
– ಎಂ.ವಿ. ರಾಜಶೇಖರನ್‌,
ಕಾಂಗ್ರೆಸ್‌ ಹಿರಿಯ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next