ಬೆಂಗಳೂರು: ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಕೂಟ ಉಪಾಂತ್ಯ ತಲುಪಿದೆ. ಆತಿಥೇಯ ಕರ್ನಾಟಕ ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಛತ್ತೀಸ್‌ಗಢವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್ ಗುಜರಾತ್-ತಮಿಳುನಾಡು ನಡುವೆ ಸಾಗಲಿದೆ. ಸೋಮವಾರ ನಡೆಯಬೇಕಿದ್ದ ತಮಿಳು ನಾಡು- ಪಂಜಾಬ್ ಹಾಗೂ ಛತ್ತೀಸ್‌ಗಢ-ಮುಂಬಯಿ ನಡುವಿನ ಎರಡೂ ಕ್ವಾರ್ಟರ್ ಫೈನಲ್ ಪಂದ್ಯಗಳು ಮಳೆಯಿಂದ ರದ್ದುಗೊಂಡವು.
ಸೆಮಿಫೈನಲ್ ಆಯ್ಕೆ ಹೇಗೆ?
ಕ್ವಾರ್ಟರ್ ಫೈನಲ್ 3ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು 39 ಓವರ್‌ಗಳಲ್ಲಿ 6 ವಿಕೆಟ್‌ಗೆ 174 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್ 12.2 ಓವರ್‌ಗಳಲ್ಲಿ 52ಕ್ಕೆ 2 ವಿಕೆಟ್ ಕಳೆದುಕೊಂಡಾಗ ಮಳೆ ಸುರಿಯಲಾರಂಭಿಸಿತು. ಪಂದ್ಯ ರದ್ದುಗೊಂಡಿತು. ಲೀಗ್ ಹಂತದಲ್ಲಿ ಪಂಜಾಬ್‌ಗಿಂತ ಹೆಚ್ಚು ಜಯ ಸಾಧಿಸಿದ ತಮಿಳುನಾಡು (9) ಸೆಮಿಫೈನಲ್ ಪ್ರವೇಶಿಸಿತು. ಪಂಜಾಬ್ ಕೇವಲ 5 ಜಯ ಸಾಧಿಸಿತ್ತು.
ಕ್ವಾರ್ಟರ್ ಫೈನಲ್ 4ರಲ್ಲೂ ಮಳೆಯೇ ಆಟವಾಡಿತು. ಹೀಗಾಗಿ ಮುಂಬಯಿ-ಛತ್ತೀಸ್‌ಗಢ ಪಂದ್ಯ ಕೂಡ ರದ್ದುಗೊಂಡಿತು. ಲೀಗ್‌ನಲ್ಲಿ ಮುಂಬಯಿಗಿಂತ (4 ಜಯ) ಹೆಚ್ಚು ಜಯ ಸಾಧಿಸಿದ್ದ ಛತ್ತೀಸ್‌ಗಢ (5 ಜಯ) ಸೆಮಿಫೈನಲ್ ಪ್ರವೇಶಿಸಿತು.
ಛತ್ತೀಸ್‌ಗಢ ಮೊದಲು ಬ್ಯಾಟಿಂಗ್ ನಡೆಸಿ 45.4 ಓವರ್‌ಗಳಲ್ಲಿ 6 ವಿಕೆಟ್‌ಗೆ 190 ರನ್ ಗಳಿಸಿದರೆ, ಮುಂಬಯಿ 11.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಮಾಡಿತ್ತು. ಇಲ್ಲಿ ಗೆಲುವಿನ ಅವಕಾಶ ಮುಂಬಯಿ ಪಾಲಿಗೆ ಹೆಚ್ಚಿತ್ತಾದರೂ ಮಳೆ ಇದಕ್ಕೆ ಅವಕಾಶ ಕೊಡಲಿಲ್ಲ.