ಬೆಂಗಳೂರು: ಉಪ ಸಮರದ ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದ ಕೆಲವು ಸದಸ್ಯರಿಗೆ ಸ್ಥಾನ ಬಿಟ್ಟುಕೊಡುವ ಸಂಬಂಧ ಸಂದೇಶ ರವಾನೆಯಾಗಿದೆ. ಇದರೊಂದಿಗೆ ಸಂಪುಟ ವಿಸ್ತರಣೆ ಮತ್ತಷ್ಟು ಸನ್ನಿಹಿತವಾದಂತಾಗಿದೆ.
ಸ್ವತಃ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಪರೋಕ್ಷವಾಗಿ ಈ ಸುಳಿವು ನೀಡಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ರಾಜೀನಾಮೆ ಪಡೆಯುವುದೇ ದೊಡ್ಡ ಕಸರತ್ತಾಗಿತ್ತು. ಅಧಿಕಾರ ತ್ಯಾಗ ಮಾಡುವಾಗ ಅಂತಹ ಸ್ಥಿತಿ ಸೃಷ್ಟಿಯಾಗುತ್ತದೆ. ಈಗ ಅಧಿಕಾರಾವಧಿ ಎರಡೂವರೆ ವರ್ಷ ಎಂದು ನಿಗದಿಪಡಿಸಲಾಗಿದೆ. ಅದೇ ರೀತಿ ನಮ್ಮ ಕೆಲವು ಸಚಿವರಿಗೂ ಈಗಾಗಲೇ ಸಂದೇಶ ರವಾನಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ದೇಶಕ್ಕಾಗಿ ಪ್ರಾಣತ್ಯಾಗದ ಜತೆಗೆ ಅಧಿಕಾರವನ್ನೂ ತ್ಯಾಗ ಮಾಡಿದರು. ಅವರು ಈ ದೇಶದ ಪ್ರಧಾನಿ ಆಗಬಹುದಿತ್ತು.
ಅದೇ ರೀತಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಪ್ರಾಣತ್ಯಾಗ ಮಾಡಿದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಪ್ರಧಾನಿ ಆಗಬಹುದಿತ್ತು. ಅವರೂ ತ್ಯಾಗ ಮಾಡಿದರು. ಆದರೆ ಕೆಲವರಿಂದ ಪಂಚಾಯತ್ ಸದಸ್ಯತ್ವ ಅಥವಾ ಅಧ್ಯಕ್ಷಗಿರಿಗೆ ರಾಜೀನಾಮೆ ಕೊಡಿಸಬೇಕಾದರೆ ಬಹಳ ಸರ್ಕಸ್ ಮಾಡಬೇಕಾಗುತ್ತದೆ ಎಂದರು.
ನಮ್ಮ ಕೆಲವು ಸಚಿವರಿಗೂ ಈಗಾಗಲೇ ಸಂದೇಶ ರವಾನಿಸಲಾಗಿದೆ. ಆದರೆ ಈ ಕುರಿತು ಈಗ ವಿಸ್ತೃತ ಚರ್ಚೆ ಮಾಡಲು ನಾನು ಹೋಗುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು.
ತತ್‌ಕ್ಷಣ ಬಿಡಲು ಹೇಳಿಲ್ಲ
ಅನಂತರ ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸಚಿವ ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಾದಾಗ ಮಾತನಾಡುತ್ತೇನೆ. ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಕೇಳಿ. ಆದರೆ ತತ್‌ಕ್ಷಣ ಸಚಿವ ಸ್ಥಾನ ಬಿಡಲು ಹೇಳಿಲ್ಲ. ಇನ್ನೂ ಸಾಕಷ್ಟು ಸಮಯಾವಕಾಶ ಇದೆ ಎಂದು ಸ್ಪಷ್ಟಪಡಿಸಿದರು.