Advertisement

ಒಬಿಸಿ ಪ್ರಾತಿನಿಧ್ಯ ಅಧ್ಯಯನಕ್ಕೆ ಸಮಿತಿ; ನ್ಯಾ|ಭಕ್ತವತ್ಸಲ ನೇತೃತ್ವ

01:39 AM May 09, 2022 | Team Udayavani |

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಸಂಬಂಧ ಅಧ್ಯಯನ ನಡೆಸಲು ನ್ಯಾ| ಭಕ್ತವತ್ಸಲ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಆಯೋಗ ರಚಿಸಿ ಸರಕಾರ ಆದೇಶ ಹೊರಡಿಸಿದೆ.

Advertisement

ಇದರಿಂದಾಗಿ ರಾಜ್ಯದಲ್ಲಿ ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಿವೃತ್ತ ಐಎಎಸ್‌ ಅಧಿಕಾರಿ ಸಿ.ಆರ್‌. ಚಿಕ್ಕಮಠ ಅವರು ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಹಿಂದುಳಿದ ವರ್ಗಗಳಿಗೆ ಪಂಚಾಯತ್‌ ರಾಜ್‌ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಕುರಿತ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಸೂಚನೆಯಂತೆ ಈ ಆಯೋಗ ರಚಿಸಲಾಗಿದೆ.

ಈ ಬಗ್ಗೆ ಮಾ.23 ಹಾಗೂ 31ರಂದು ನಡೆದ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿಯೇ ಚುನಾವಣೆ ನಡೆಸುವ ಕುರಿತು ಚರ್ಚಿಸಲಾಗಿತ್ತು. ಅದರಂತೆ ಪಂಚಾಯತ್‌ರಾಜ್‌ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ, ಈ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಅಧ್ಯಯನ ನಡೆಸಿ ಶಿಫಾರಸು ಮಾಡಲು ಆಯೋಗ ರಚಿಸಲಾಗಿದೆ ಎಂದು ಸರಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಚುನಾವಣೆ ಮತ್ತಷ್ಟು ವಿಳಂಬ?
ಸ್ಥಳೀಯ ಸಂಸ್ಥೆಗಳಲ್ಲಿ ಗಡಿ ನಿಗದಿಗೆ ಸಂಬಂಧಿಸಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌. ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸುಮಾರು 7-8 ತಿಂಗಳ ಹಿಂದೆ ಸೀಮಾನಿರ್ಣಯ ಆಯೋಗ ರಚಿಸಿತ್ತು.

Advertisement

ಅದರ ವರದಿ ಬಂದ ಮೇಲೆ ಮೀಸ ಲಾತಿ ಪ್ರಕಟಿಸಿ ಸರಕಾರ ಚುನಾವಣೆ ನಡೆಸಲು ಉದ್ದೇಶಿಸಿತ್ತು. ಈ ಮಧ್ಯೆ ಸುಪ್ರೀಂ ಕೋರ್ಟ್‌ ರಾಜಕೀಯ ಪ್ರಾತಿನಿಧ್ಯ ನೀಡುವ ಸಂಬಂಧ ಆಯೋಗ ರಚನೆಗೆ ಆದೇಶಿಸಿದೆ. ಇನ್ನು ನ್ಯಾ| ಭಕ್ತವತ್ಸಲ ನೇತೃತ್ವದ ಆಯೋಗ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ, ಜಿ. ಪಂ. ಹಾಗೂ ತಾ.ಪಂ. ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಈ ನಡುವೆ ಎರಡು ವರ್ಷಗಳಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಲ್ಲಿ ಜನಪ್ರತಿನಿಧಿಗಳೇ ಇಲ್ಲ. ಇದು ಸ್ಥಳೀಯ ಮಟ್ಟದಲ್ಲಿ ರಾಜಕೀಯ, ಆಡಳಿತಾತ್ಮಕ ಸಹಿತ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. “ಈ ಹಿಂದೆ ಸ್ಥಳೀಯ ಸಂಸ್ಥೆಗಳ ಗಡಿ ನಿರ್ಣಯ ಮತ್ತು ಮೀಸಲಾತಿಯನ್ನು ರಾಜ್ಯ ಚುನಾವಣ ಆಯೋಗ ಸರಿಯಾಗಿ ನಿಗದಿಪಡಿಸಿಲ್ಲ. ಇದರಿಂದ ಅನೇಕರಿಗೆ ಅನ್ಯಾಯ ಆಗಲಿದೆ’ ಎಂಬ ಆರೋಪ ಕೇಳಿಬಂದಿತ್ತು. ಅದಕ್ಕಾಗಿ ಸೀಮಾ ನಿರ್ಣಯ ಆಯೋಗ ರಚಿಸಲಾಗಿತ್ತು.

ಸುಪ್ರೀಂ ಕೋರ್ಟ್‌ ಆದೇಶದಂತೆ ಸಮೀಕ್ಷೆ ನಡೆಸಿದ ಬಳಿಕ ಅನ್ವಯವಾಗುವ ತರ್ಕವು ಸ್ಥಳೀಯ ಸಂಸ್ಥೆಗಳ ಮಟ್ಟದಿಂದ ವಿಧಾನಸಭೆ, ಸಂಸತ್ತಿನವರೆಗೂ ಬಂದರೆ ಒಟ್ಟು ರಾಜಕೀಯದ ದಿಕ್ಕು ಬದಲಾಗಲಿದೆ. ಈ ಆತಂಕ ಎಲ್ಲ ಪಕ್ಷಗಳ ನಾಯಕರನ್ನು ಕಾಡಿದೆ. ಮೂಲಗಳ ಪ್ರಕಾರ ರಾಜ್ಯದಲ್ಲಿ ಶೇ. 45ರಿಂದ 50ರಷ್ಟು ಹಿಂದುಳಿದ ವರ್ಗಗಳ ಮತದಾರರಿದ್ದಾರೆ.. ಅಲ್ಪಸಂಖ್ಯಾಕ ಶಾಸಕರೂ ಸಹಿತ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ 150ಕ್ಕೂ ಅಧಿಕ ಶಾಸಕ- ಶಾಸಕಿಯರಿದ್ದಾರೆ.

ಸುಪ್ರೀಂ ಹೇಳಿದ್ದೇನು?
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಕುರಿತ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಹೇಳಿದ್ದೇನೆಂದರೆ – “ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಕುರಿತು ಮೂರು ಹಂತದ ಸಮೀಕ್ಷೆ ಮಾಡದ ಹೊರತು, ಚುನಾವಣೆ ಮಾಡುವಂತಿಲ್ಲ ಹಾಗೂ ಸದ್ಯಕ್ಕೆ ಹಿಂದುಳಿದ ವರ್ಗಗಳ ಶೇ. 27ರಷ್ಟು ಮೀಸಲಾತಿ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳಾಗಿ ಘೋಷಿಸಿ ಚುನಾವಣೆ ನಡೆಸಬಹುದು’ ಎಂಬುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next