Advertisement
ಬಸನಗೌಡ ಪಾಟೀಲ್ ಮತ್ತು ಎಂ.ಪಿ. ರೇಣುಕಾಚಾರ್ಯ ಅವರ ಬಹಿರಂಗ ಹೇಳಿಕೆ ನಡುವೆಯೇ ಇನ್ನೊಂದು “ಪಕ್ಷ ನಿಷ್ಠ’ ಅತೃಪ್ತ ಶಾಸಕರ ತಂಡ ಪ್ರತ್ಯೇಕ ಸಭೆ ನಡೆಸಲು ಮುಂದಾಗಿದೆ. ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಸಮಾರು 20 ಶಾಸಕರು ಬುಧವಾರ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ, ವರಿಷ್ಠರನ್ನು ಭೇಟಿಯಾಗಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಸಿಎಂ ಕಸರತ್ತು :
ಅಸಮಾಧಾನಿತ ಶಾಸಕರ ಮನವೊಲಿಸಲು ಸಿಎಂ ಬಿಎಸ್‌ವೈ ಮುಂದಾಗಿದ್ದು, ಎಂ.ಪಿ. ರೇಣುಕಾಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ, ಗೊಂದಲ ಸೃಷ್ಟಿಸುವ ಯತ್ನ ಮಾಡದೆ, ತಮ್ಮನ್ನು ಬಂದು ಭೇಟಿ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಕುಂದಾಪುರದ ಆನೆಗುಡ್ಡೆ ದೇವಸ್ಥಾನದಲ್ಲಿ ಮಾತನಾಡಿದ ಸಿಎಂ, ರೇಣುಕಾಚಾರ್ಯ ತಮ್ಮನ್ನು ಭೇಟಿ ಮಾಡಲಿದ್ದಾರೆ. ಯಾವುದೇ ರೀತಿಯ ಗೊಂದಲ ಇಲ್ಲ ಎಂದಿದ್ದಾರೆ.
ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದ ಅರವಿಂದ್ ಬೆಲ್ಲದ ಮತ್ತು ಬಿ.ಸಿ. ನಾಗೇಶ್ ಅವರನ್ನು ಮಂಗಳ ವಾರ ಸಂಜೆ ಗೃಹ ಕಚೇರಿ “ಕೃಷ್ಣಾ’ಗೆ ಕರೆಯಿಸಿದ್ದಾರೆ. ಅನಂತರ ಅವರೊಂದಿಗೆ ಚರ್ಚಿಸಿ ಅತೃಪ್ತರ ಸಭೆ ನಡೆಸಿ ಸರಕಾರಕ್ಕೆ ಮುಜುಗರ ಉಂಟು ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಹಂತದಲ್ಲಿ ರೇಣುಕಾಚಾರ್ಯ ಅವರ ದಿಲ್ಲಿ ಭೇಟಿಯ ಬಗ್ಗೆ ಮಾಹಿತಿ ಪಡೆಯಲು ಸಂಸದ, ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ದಿಲ್ಲಿಗೆ ಕಳುಹಿಸುವುದಕ್ಕೂ ಯಡಿಯೂರಪ್ಪ ಮುಂದಾಗಿದ್ದರು ಎನ್ನಲಾಗಿದೆ.
ಮತ್ತೂ ಖಾತೆ ಹಂಚಿಕೆ ಗೊಂದಲ :
ಸಂಪುಟ ವಿಸ್ತರಣೆಯಾಗಿ ಒಂದು ವಾರ ಕಳೆಯುತ್ತಿದ್ದರೂ ಖಾತೆ ಹಂಚಿಕೆಯ ಗೊಂದಲ ಮುಂದುವರಿದಿದೆ. ಹಿರಿಯ ಸಚಿವರಿಂದ ಪ್ರಬಲ ಖಾತೆಗಳಿಗೆ ಬೇಡಿಕೆ ಮತ್ತು ಕೆಲವು ಸಚಿವರ ಖಾತೆ ಬದಲಾವಣೆ ಕುರಿತು ಚರ್ಚೆಯಿಂದಾಗಿ ಖಾತೆ ಹಂಚಿಕೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದಾರೆ. ಅವರ ಖಾತೆ ಬದಲಾಯಿಸಿ ಕಂದಾಯ ಖಾತೆ ನೀಡುತ್ತಾರೆ ಎನ್ನಲಾಗುತ್ತಿದೆ. ಕಂದಾಯ ಖಾತೆ ಹೊಂದಿರುವ ಆರ್. ಅಶೋಕ್ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಮಂಡಿಸಿದ್ದಾರೆ. ಅರವಿಂದ ಲಿಂಬಾವಳಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಬಾರದು ಎಂದು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ ಹಿರಿಯ ಸಚಿವರ ಜತೆ ಚರ್ಚಿಸಿ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ನಿರ್ಧರಿಸಿದ್ದರು. ಅಸಮಾಧಾನಿತ ಶಾಸಕರ ಮನವೊಲಿಕೆ ಕಸರತ್ತು ನಡೆಸಿದ್ದರಿಂದ ಬುಧವಾರ ಹಿರಿಯ ಸಚಿವರ ಜತೆ ಚರ್ಚಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ಖಾತೆ ಹಂಚಿಕೆ ಕುರಿತು ಸಚಿವರ ಜತೆ ಸಮಾಲೋಚನೆ ನಡೆಸಿ, ಗುರುವಾರ ಖಾತೆ ಹಂಚಿಕೆ ಮಾಡುತ್ತೇನೆ.– ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ