ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಮೊದಲ ಹಂತದಲ್ಲೇ 28 ಮಂದಿ ಸೇರ್ಪಡೆ ನಿರೀಕ್ಷೆಯಿತ್ತಾದರೂ ಮಧ್ಯರಾತ್ರಿ ನಡೆದ “ಪ್ರಹಸನದಲ್ಲಿ’ ಎಂಟಕ್ಕೆ ಇಳಿದಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಂಪುಟಕ್ಕೆ ಯಾರು ಸೇರ್ಪಡೆಯಾಗಬೇಕು, ಯಾರಾಗಬಾರದು ಎಂಬ ವಿಚಾರದಲ್ಲಿ ನಡೆದ ಜಟಾಪಟಿಯಿಂದ ಇಪ್ಪತ್ತು ಮಂದಿ ಔಟ್ ಆದರು ಎಂದು ಮೂಲಗಳು ತಿಳಿಸಿವೆ.
ಸಂಪುಟಕ್ಕೆ ಸೇರ್ಪಡೆ ಸಂಬಂಧ ಸಿದ್ದರಾಮಯ್ಯ ಒಂದು ಪಟ್ಟಿ, ಡಿ.ಕೆ.ಶಿವಕುಮಾರ್ ಒಂದು ಪಟ್ಟಿ, ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ- ಕೆ.ಸಿ.ವೇಣುಗೋಪಾಲ್ ಅವರ ಬಳಿ ಮತ್ತೊಂದು ಪಟ್ಟಿ ರೆಡಿ ಇತ್ತು. ಆದರೆ, ಸಹಮತ ಮೂಡದ ಕಾರಣ ಮೂರೂ ಪಟ್ಟಿಯಲ್ಲಿದ್ದ ಎಂಟು ಮಂದಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ದೊರೆಯಿತು ಎಂದು ತಿಳಿದು ಬಂದಿದೆ.
ಮೊದಲ ಪಟ್ಟಿಯಲ್ಲೇ ಸೇರ್ಪಡೆ ಆಸೆ ಹೊಂದಿದ್ದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ಲಕ್ಷ್ಮಣ ಸವದಿ, ಎಚ್.ಸಿ.ಮಹದೇವಪ್ಪ, ಯು.ಟಿ.ಖಾದರ್, ಲಕ್ಷ್ಮಿ ಹೆಬ್ಬಾಳ್ಕರ್, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಶಿವಲಿಂಗೇಗೌಡ , ಮಧು ಬಂಗಾರಪ್ಪ, ಬಸವರಾಯ ರಾಯರೆಡ್ಡಿ ಸೇರಿ ಹಲವರಿಗೆ ಇದೀಗ ನಿರಾಸೆಯಾಗುವಂತಾಗಿದೆ. ಜತೆಗೆ, ಕೆಲವು ಹಿರಿಯರು ಬೇಸರವನ್ನೂ ಆಪ್ತರ ಮುಂದೆ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಇದಲ್ಲದರ ನಡುವೆ ವಿಧಾನಷರಿಷತ್ ಪ್ರತಿಪಕ್ಷ ನಾಯಕರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಪರಿಷತ್‌ನಿಂದ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಹೆಸರು ಸೇರ್ಪಡೆಯ ನಿರೀಕ್ಷೆಯಿತ್ತು ಎನ್ನಲಾಗಿದೆ.
ಸಂಪುಟ ರಚನೆಗೆ ಸಂಬಂಧಿಸಿದಂತೆ ರಾತ್ರಿ 11 ಗಂಟೆವರೆಗೂ 28 ಮಂದಿ ಸೇರ್ಪಡೆಯ ಪಟ್ಟಿ ಸಿದ್ಧವಾಗಿತ್ತು. ಆ ನಂತರ ಅದು ಬದಲಾಯಿತು ಎಂದು ಹೇಳಲಾಗಿದೆ.
ಬೋಸರಾಜ್‌ಗೆ ವಿರೋಧ
ಇದರ ಜತೆಗೆ ಯಾವುದೇ ಸದನದ ಸದಸ್ಯರಲ್ಲದ ವಿಧಾನಪರಿಷತ್‌ನ ಮಾಜಿ ಸದಸ್ಯ ಎನ್.ಎಸ್.ಬೋಸ್‌ರಾಜ್ ಹೆಸರು ಮೊದಲ ಪಟ್ಟಿಯಲ್ಲೇ ಸೇರಲು ಒತ್ತಡ ಇತ್ತಾದರೂ, ಬೇರೆ ರೀತಿಯ ಸಂದೇಶ ಹೋಗಬಹುದು ಎಂದು ಕೈ ಬಿಡಲಾಯಿತು ಎಂದು ಹೇಳಲಾಯಿತು.
ಜಮೀರ್‌ಗೆ ಡಿಕೆ ವಿರೋಧ
ಜಮೀರ್ ಅಹಮದ್ ಅವರ ಹೆಸರು ಮೊದಲ ಪಟ್ಟಿಯಲ್ಲಿ ಸೇರಿಸಲು ಡಿ.ಕೆ.ಶಿವಕುಮಾರ್ ವಿರೋಧವಿತ್ತು. ಆದರೆ, ಸಿದ್ದರಾಮಯ್ಯ ಪಟ್ಟು ಬಿಡದೆ ಸೇರಿಸಿದರು. ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದ ಮುಸ್ಲಿಂ ಶಾಸಕರ ಬಗ್ಗೆ ಸಿದ್ದರಾಮಯ್ಯ, ತಮ್ಮ ಕ್ಷೇತ್ರ ಹೊರತುಪಡಿಸಿ ಇನ್ನೊಂದು ಕ್ಷೇತ್ರದಲ್ಲಿ ಮತ ತರದವರಿಗೆ ಅವಕಾಶ ಕೊಡಲು ಆಗದು. ಸ್ಟಾರ್ ಪ್ರಚಾರಕರಾಗಿ 100 ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಪಕ್ಷಕ್ಕೆ ಶಕ್ತಿ ತುಂಬಿದ ಜಮೀರ್ ಅಹಮದ್ ಬಿಡಲು ಸಾಧ್ಯವಿಲ್ಲ ಎಂದು ಹಠ ಹಿಡಿದರು. ಆಗ ಇದಕ್ಕೆ ಸುರ್ಜೇವಾಲಾ, ವೇಣುಗೋಪಾಲ್ ಸಹ ಸಮ್ಮತಿಸಿದರು ಎಂದು ಹೇಳಲಾಗಿದೆ.
ಸಾಮಾಜಿಕ ನ್ಯಾಯ
ಶನಿವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಹತ್ತು ಮಂದಿ ಪೈಕಿ ಒಕ್ಕಲಿಗ, ಲಿಂಗಾಯತ ಹಾಗೂ ಹಿಂದುಳಿದ ವರ್ಗದಿಂದ ಒಬ್ಬಬ್ಬರೇ ಪ್ರತಿನಿಧಿ. ಉಳಿದಂತೆ, ಎಸ್‌ಸಿ-ಎಸ್‌ಟಿ ಕೋಟಾದ ಬಲಗೈನ ಇಬ್ಬರು, ಎಡಗೈನ ಒಬ್ಬರು, ಪರಿಶಿಷ್ಟ ಪಂಗಡದ ಒಬ್ಬರಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಪಸಂಖ್ಯಾತ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಕ್ಕೆ ಒಂದೊಂದು ಸ್ಥಾನ ನೀಡಲಾಗಿದೆ.