Advertisement

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

12:03 AM Jul 05, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರಿ ನೌಕರರ ವೇತನ, ಪಿಂಚಣಿ ಹೆಚ್ಚಳ ಮಾಡುವ ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಸರಕಾರ ತಾತ್ಕಾಲಿಕವಾಗಿ ಎಳ್ಳುನೀರು ಬಿಡಲು ಗಂಭೀರ ಚಿಂತನೆ ನಡೆಸಿದೆ.

Advertisement

ಏಳನೇ ವೇತನ ಆಯೋಗ ಜಾರಿ ವಿಚಾರದಲ್ಲಿ ಸರಕಾರ ಸಕಾರಾತ್ಮಕವಾಗಿದೆ ಎನ್ನುತ್ತಲೇ ಬಂದಿದ್ದ ಸರಕಾರ, ತಾನೇ ವಿಧಿಸಿದ್ದ ಹಲವು ಗಡುವುಗಳನ್ನು ಮುಂದೂಡುತ್ತಲೇ ಬಂದಿತ್ತು. ಲೋಕಸಭೆ ಚುನಾವಣೆ ಬಳಿಕ ಜಾರಿಯಾಗಬಹುದು ಎಂದು ಸರಕಾರಿ ನೌಕರರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರತೀ ಬಾರಿ ಸಚಿವ ಸಂಪುಟ ಸಭೆ ಆದಾಗಲೂ ಈ ವಿಚಾರದ ಬಗ್ಗೆ ಸರಕಾರ ನಿರ್ಣಯ ಕೈಗೊಳ್ಳುವ ಭರವಸೆ ಇಡಲಾಗಿತ್ತು.

ವೇತನ ಪರಿಷ್ಕರಣೆಗಾಗಿ ಸರಕಾರಿ ನೌಕರರ ಸಂಘವೂ 19 ತಿಂಗಳಿಂದ ಬೇಡಿಕೆ ಇಡುತ್ತಾ ಬಂದಿತ್ತು. ಹೀಗಾಗಿಯೇ ಸರಕಾರವೂ ಕೆ.ಸುಧಾಕರ ರಾವ್‌ ಅವರ ನೇತೃತ್ವದಲ್ಲಿ ಏಳನೇ ವೇತನ ಆಯೋಗ ರಚಿಸಿತ್ತು. 2024ರ ಮಾ. 16ರಂದು ಸರಕಾರಕ್ಕೆ ವರದಿ ಸಲ್ಲಿಸಿದ್ದ ಆಯೋಗ, ಸರಕಾರಿ ನೌಕರರಿಗೆ ಮೂಲವೇತನದ ಮೇಲೆ ಶೇ. 27.5ರಷ್ಟು ಫಿಟ್ಟ್‌ಮೆಂಟ್‌ ನಿಗದಿಪಡಿಸುವಂತೆ ಶಿಫಾರಸು ಮಾಡಿತ್ತು. ಅದನ್ನು 2024ರ ಪ್ರಿಲ್‌ನಿಂದ ಜಾರಿಗೆ ತರುವಂತೆಯೂ ಸ್ಪಷ್ಟಪಡಿಸಿತ್ತು.

ಆದರೆ ಆಯೋಗದ ಶಿಫಾರಸು ಹಾಗೂ ಅದರ ಆರ್ಥಿಕ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಬೇಕಿರುವುದರಿಂದ ತತ್‌ಕ್ಷಣ ಸಾಧ್ಯವಿಲ್ಲ ಎಂದಿದ್ದ ಸರಕಾರ, ಶೇ. 17ರಷ್ಟು ಮಧ್ಯಾಂತರ ಪರಿಹಾರ ಘೋಷಿಸಿತ್ತು. ಕನಿಷ್ಠ ಶೇ. 20-25 ರಷ್ಟಾದರೂ ಹೆಚ್ಚಳ ಮಾಡಬಹುದು ಎನ್ನುವ ನಿರೀಕ್ಷೆಗಳಿದ್ದವು. ಈಗ ಆಯೋಗದ ಶಿಫಾರಸಿನಂತೆ ಶೇ.27.5ರಷ್ಟು ಹೆಚ್ಚಳ ಮಾಡಿದರೆ ವಾರ್ಷಿಕ 18 ಸಾವಿರ ಕೋಟಿ ರೂ. ಹೊರೆ ಹೆಚ್ಚಲಿದೆ. ಈ ಎಲ್ಲ ಕಾರಣದಿಂದ ತಾತ್ಕಾಲಿಕವಾಗಿ ಈ ಪ್ರಸ್ತಾವನೆಗೆ ಎಳ್ಳುನೀರು ಬಿಡಲು ಸರಕಾರ ಯೋಚಿಸಿದೆ.

ಜು.7ಕ್ಕೆ ನೌಕರರ ಸಂಘದ ಸಭೆ
ವೇತನ ಪರಿಷ್ಕರಣೆಯ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಜು. 7ರಂದು ಚಿಕ್ಕಮಗಳೂರಿನಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ಆಯೋಜನೆಯಾಗಿದೆ. ಬಹುನಿರೀಕ್ಷೆಯ 7ನೇ ವೇತನ ಆಯೋಗದ ವರದಿ ಜಾರಿಗೆ ಮೀನಮೇಷ ಎಣಿಸುತ್ತಿರುವ ಸರ್ಕಾರಕ್ಕೆ ಮತ್ತೂಮ್ಮೆ ಮನವಿ ಮಾಡಿಕೊಳ್ಳಬೇಕೇ ಅಥವಾ ಯಾವ ರೀತಿಯಲ್ಲಿ ಸರಕಾರಕ್ಕೆ ಮನವರಿಕೆ ಮಾಡಿಸಬೇಕು ಎಂಬುದರ ಚಿಂತನ-ಮಂಥನ ನಡೆಸಲಿದೆ.

Advertisement

5ನೇ ಹಣಕಾಸು ಆಯೋಗದ ಅವಧಿ ವಿಸ್ತರಣೆ
ಮಾಜಿ ಸಂಸದ ಡಾ| ಸಿ. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ 2023ರ ಅ. 11ರಂದು ಐದನೇ ಹಣಕಾಸು ಆಯೋಗ ರಚಿಸಿದ್ದ ಸರಕಾರ, ಇದೀಗ ಅದರ ಅವಧಿಯನ್ನು 2025ರ ಫೆ. 28ರ ವರೆಗೆ ವಿಸ್ತರಣೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಣಯಿಸಿದೆ.
ಈ ಮೊದಲು ರಚಿಸಿದ 4 ರಾಜ್ಯ ಆಯೋಗಗಳು ಕಾರ್ಯನಿರ್ವಹಿಸಿದ ಸಮಯಕ್ಕೂ ಈಗಿನ ಸಂದರ್ಭಕ್ಕೂ ಹೋಲಿಸಿದಾಗ ಮಹತ್ತರ ಬದಲಾವಣೆಗಳಾಗಿದ್ದು, 5ನೇ ಹಣಕಾಸು ಆಯೋಗದ ಕೆಲಸ ಬಹುಸಂಕೀರ್ಣ ಮತ್ತು ಕ್ಲಿಷ್ಟಕರವಾಗಿದ್ದು, ಅವುಗಳ ಸಾಧಕ-ಬಾಧಕಗಳನ್ನು ಅರಿಯಲು ಕಾಲಾವಧಿ ಅವಶ್ಯವಿದೆ. ಅವಧಿ ವಿಸ್ತರಣೆ ಮಾಡಿದ್ದು, 2024ರ ಡಿಸೆಂಬರ್‌ ಒಳಗಾಗಿ ತನ್ನ ವರದಿ ಸಲ್ಲಿಸುವಂತೆ ತಿಳಿಸಿದೆ.

ಕೆಜಿಐಡಿ ವಿಮೆ: ಸಾವಿರಕ್ಕೆ 80 ರೂ. ಬೋನಸ್‌
ಕರ್ನಾಟಕ ಸರಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವವಿಮಾ ಯೋಜನೆಯ ವಿಮಾದಾರರಿಗೆ 2018-20ರ ದ್ವೆ„ವಾರ್ಷಿಕ ಅವಧಿಗೆ ಅಧಿಕ ಲಾಭಾಂಶ (ಬೋನಸ್‌)ವನ್ನು ಸರಕಾರ ಘೋಷಿಸಿದ್ದು, ವಿಮಾ ಮೊತ್ತದ ಮೇಲೆ ಪ್ರತೀ ಸಾವಿರ ರೂ.ಗೆ ವಾರ್ಷಿಕ 80 ರೂ.ಗಳಂತೆ ಲಾಭಾಂಶ ಘೋಷಣೆ ಮಾಡಿದೆ. ಇದಲ್ಲದೆ ಅವಧಿಪೂರ್ಣ, ಮರಣಜನ್ಯ ಹಾಗೂ ವಿಮಾತ್ಯಾಗ ಮೌಲ್ಯಗಳಿಂದ 2020ರ ಎ. 1ರಿಂದ 2022ರ ಮಾ. 31ರ ಅವಧಿಯಲ್ಲಿ ಹೊರಹೋದ ವಿಮಾ ಪಾಲಿಸಿಗಳಿಗೂ ಇದನ್ನು ಅನ್ವಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next