ಬೆಂಗಳೂರು: ಪಡಿತರ ಕಾರ್ಡ್ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ಪರ್ಯಾವಾಗಿ ನೇರ ನಗದು ವರ್ಗಾವಣೆ ಪದ್ಧತಿಯ ಬದಲು ಆಹಾರ ಕಿಟ್ ನೀಡುವುದಕ್ಕೆ ರಾಜ್ಯ ಸರಕಾರ ತೀರ್ಮಾನಿಸಿದ್ದು, ಈ ಬಗ್ಗೆ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನವಾಗಲಿದೆ.
ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಚುನಾವಣ ಪೂರ್ವ ಭರವಸೆ ನೀಡಿತ್ತು. ಆದರೆ, ಮೊದಲಿಗೆ ಕೇಂದ್ರ ಸರಕಾರ ಅಕ್ಕಿ ಪೂರೈಕೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಕಾರ್ಡ್ದಾರರಿಗೆ ಹೆಚ್ಚುವರಿ ಅಕ್ಕಿಯ ದರದಷ್ಟೇ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು.
ಈಗ ಹಣದ ಬದಲು ರಾಗಿ, ಗೋಧಿ, ಎಣ್ಣೆ ಸೇರಿದಂತೆ 5 ಕೆಜಿಯಷ್ಟು ಆಹಾರ ಧಾನ್ಯ ನೀಡಲು ನಿರ್ಧರಿಸಲಾಗಿದೆ. ಸಂಪುಟ ಅಂಗೀಕಾರ ನೀಡಿದ ಬಳಿಕ ಅಕ್ಟೋಬರ್ 2ರಿಂದ ಇದನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಇದರ ಜತೆಗೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಇರುವ 59 ಮಂದಿ ಜೀವಾವಧಿ ಶಿಕ್ಷಾಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವುದಕ್ಕೂ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಕಾಫಿ ಕಿಯೋಸ್ಕ್
ಇದರ ಜತೆಗೆ ಸ್ವಸಹಾಯ ಸಂಘಗಳ ಸದಸ್ಯರಾಗಿರುವ 1 ಲಕ್ಷ ಮಹಿಳೆಯರಿಗೆ ಕಾಫಿ ಮಂಡಳಿ ಸಹಭಾಗಿತ್ವದಲ್ಲಿ ಉದ್ಯಮ ಸ್ಥಾಪನೆ ತರಬೇತಿ ನೀಡಿ 25 ಕೋಟಿ ರೂ.ವೆಚ್ಚದಲ್ಲಿ ಗುಂಪುಗಳ ಮೂಲಕ ಕಾಫಿ ಕಿಯೋಸ್ಕ್ ಪ್ರಾರಂಭಿಸುವುದಕ್ಕೂ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ.