ಬೆಂಗಳೂರು : ರಾಜ್ಯದ ವಸತಿ ರಹಿತರಿಗೆ ಕೇಂದ್ರ ಸರಕಾರ ಸಂಕ್ರಾತಿ ಕೊಡುಗೆ ನೀಡಿದ್ದು, 18 ಲಕ್ಷ ವಸತಿ ರಹಿತರಿಗೆ ಸಿಹಿ ಸುದ್ದಿ ನೀಡಿದೆ.
ಕೇಂದ್ರ ವಸತಿ ಇಲಾಖೆಯ “ಆವಾಸ್ ಪ್ಲಸ್’’ ಪೋರ್ಟಲ್‌ನಲ್ಲಿ ರಾಜ್ಯದ 18 ಲಕ್ಷ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದಿಂದ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಕೊಡುಗೆಗಾಗಿ ಸಿಎಂ ಬೊಮ್ಮಾಯಿ ಪ್ರಧಾನಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಹಿಂದಿನ ಸರಕಾರಗಳ ಬೇಜವಾಬ್ದಾರಿತನದಿಂದ ರಾಜ್ಯದ ಫಲಾನುಭವಿಗಳು ವಸತಿ ದತ್ತಾಂಶದಲ್ಲಿ ಸೇರ್ಪಡೆಯಾಗಿರಲಿಲ್ಲ. ರಾಜ್ಯ ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಿದ್ದರಿಂದ ೧೮ ಲಕ್ಷ ಜನರು ವಸತಿ ಸೌಲಭ್ಯ ಪಡೆಯಲಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸಿದ್ದು ಆರೋಪ
Related Articles
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ವಸತಿ ರಹಿತರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ನಾವು ಅಧಿಕಾರದಲ್ಲಿದ್ದಾಗ ಹದಿನೈದು ಲಕ್ಷ ಮನೆ ಕಟ್ಟಿಸಿಕೊಟ್ಟಿದ್ದೆವು ಎಂದು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಭಾರಿ ವಾಗ್ವಾದ ನಡೆದಿತ್ತು. ಆದರೆ ಕೇಂದ್ರದ ಹೊಸ ನಿರ್ಧಾರದಿಂದ ಬಿಜೆಪಿ ಕೈಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.