Advertisement

8ಕ್ಕೆ ಊಟಿ ಉದ್ಯಾನ “ಕರ್ನಾಟಕ ಸಿರಿ’ಲೋಕಾರ್ಪಣೆ

06:10 AM Jan 02, 2018 | Team Udayavani |

ಬೆಂಗಳೂರು: “ಕಾವೇರಿ ನೀರು ಹಂಚಿಕೆ ವಿವಾದ’ ಕರ್ನಾಟಕ-ತಮಿಳುನಾಡಿನ ನಡುವೆ ಕಂದಕ ಸೃಷ್ಟಿಸಿದೆ. ಆದರೆ, ಊಟಿಯಲ್ಲಿ ಅರಳಲಿರುವ ಹೂವುಗಳು ಈ ಎರಡೂ ರಾಜ್ಯಗಳ ಹೃದಯಗಳನ್ನು ಬೆಸೆಯುವ ಸಂಪರ್ಕ ಕೊಂಡಿಯಾಗಿ ಮೂಡಿಬರಲಿವೆ.

Advertisement

ಹೌದು, ತಮಿಳುನಾಡಿನ ಊಟಿಯಲ್ಲಿ ರಾಜ್ಯ ತೋಟಗಾರಿಕಾ ಇಲಾಖೆಯಿಂದ ನಿರ್ಮಿಸಿದ ಬಹುನಿರೀಕ್ಷಿತ “ಕರ್ನಾಟಕ ಸಿರಿ’ ತೋಟಗಾರಿಕಾ ಉದ್ಯಾನ ಜನವರಿ 8ರಂದು ಉದ್ಘಾಟನೆಗೊಳ್ಳಲಿದೆ. ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ತಮಿಳುನಾಡಿನ ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವ ದೊರೈಕಣ್ಣು ಸೇರಿ ಎರಡೂ ರಾಜ್ಯಗಳ ಹಿರಿಯ ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಊಟಿಯ ಜೈವಿಕ ಉದ್ಯಾನಕ್ಕೆ ವರ್ಷಕ್ಕೆ ಸುಮಾರು 25 ಲಕ್ಷ ಜನ ಭೇಟಿ ನೀಡುತ್ತಾರೆ. ಅದರಿಂದ 10 ಕೋಟಿ ರೂ.ಗಳಷ್ಟು ಆದಾಯ ತಮಿಳುನಾಡಿನ ಸರ್ಕಾರಕ್ಕೆ ಸಿಗುತ್ತಿದೆ. ಆ ಪ್ರವಾಸಿಗರನ್ನು ನಮ್ಮ ಈ ಉದ್ಯಾನಕ್ಕೆ ಸೆಳೆಯುವ ಪ್ರಯತ್ನ ಇದಾಗಿದೆ. ಶೇ.80ರಷ್ಟು ಪ್ರವಾಸಿಗರು ಈ ಉದ್ಯಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಉದ್ಯಾನಗಳು ಮತ್ತು ತೋಟಗಳು) ಎಂ. ಜಗದೀಶ್‌ ತಿಳಿಸಿದ್ದಾರೆ.

ಸುಮಾರು 38 ಎಕರೆ ಪ್ರದೇಶದ ಈ ಉದ್ಯಾನವು ಊಟಿಯ ಹೆಸರಾಂತ ಪ್ರವಾಸಿತಾಣವಾಗಿರುವ ಜೈವಿಕ ಉದ್ಯಾನದಿಂದ ನಾಲ್ಕು ಕಿ.ಮೀ. ಹಾಗೂ ಬಸ್‌ ನಿಲ್ದಾಣದಿಂದ ಒಂದೂವರೆ ಕಿ.ಮೀ. ದೂರದಲ್ಲಿದೆ. ಗಾಜಿನ ಮನೆಯಲ್ಲಿ 2,000 ಅಲಂಕಾರಿಕ ಹೂವಿನ ಗಿಡಗಳು, ಶೀತವಲಯದ ಅಪರೂಪ ಮತ್ತು ಆಕರ್ಷಕವಾದ 80ಕ್ಕೂ ಹೆಚ್ಚು ಸಸಿಗಳು, ಐದು ಎಕರೆ ಹುಲ್ಲುಗಾವಲು, ವಿವಿಧ ಶೈಲಿಯಲ್ಲಿ ಕತ್ತರಿಸಿದ ಆಕರ್ಷಕ ಗಿಡಗಳು (ಟೊಪಿಯಾರಿ), ಇಟಾಲಿಯನ್‌ ಶೈಲಿಯ ಉದ್ಯಾನ, ಫ‌ಸಲ್‌ ಶೈಲಿಯ ಉದ್ಯಾನ, ಎರಡು ಎಕರೆ ಟೀ ಎಸ್ಟೇಟ್‌. ಅತಿಥಿಗೃಹ ಮತ್ತು ವಾಹನ ನಿಲುಗಡೆ ಸ್ಥಳ. ಮಕ್ಕಳ ಆಕರ್ಷಣೆಗಾಗಿ ನೀಲಗಿರಿ ಕುರಿಮರಿಗಳನ್ನು ಇಲ್ಲಿ ಸಾಕಲಾಗಿದೆ. ಚಿಕ್ಕ ಕೊಳಗಳೂ ಇಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಳವಳಿಯಾಗಿ ನೀಡಿದ ಭೂಮಿ: ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್‌ ಈ ಉದ್ಯಾನದ ಜಮೀನನ್ನು ಇಲಾಖೆಗೆ ಬಳವಳಿಯಾಗಿ ನೀಡಿದ್ದರು. ಅದನ್ನೀಗ ಉದ್ಯಾನವಾಗಿ ಅಭಿವೃದ್ಧಿಪಡಿಸಲಾಗಿದೆ.  ತೋಟಗಾರಿಕಾ ತಜ್ಞ ಡಾ.ಎಂ.ಎಚ್‌.ಮರಿಗೌಡ ಅವರು ಇಲಾಖೆಯಲ್ಲಿ¨ªಾಗ, ಅವರ ಮನವಿಯ ಮೇರೆಗೆ ಮಹಾರಾಜರು 1940ರಲ್ಲಿ ಜಮೀನನ್ನು ನೀಡಿದ್ದರು. ಅಲ್ಲಿ ಆಲೂಗಡ್ಡೆ ಬಿತ್ತನೆ ಮೊಳಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿತ್ತು. ಈ ಕಾರ್ಯ 20 ವರ್ಷಗಳು ಮುಂದುವರಿಯಿತು. ರೋಗಬಾಧೆಯಿಂದಾಗಿ ಆ ಕೆಲಸ ಸ್ಥಗಿತಗೊಂಡಿತು.

Advertisement

ಬಳಿಕ ಕೆಲವು ವರ್ಷಗಳು ಊಟಿ ಕ್ಯಾರೇಟ್‌, ಸೇಬಿನ ಗಿಡಗಳು ಮತ್ತು ಶೀತವಲಯದಲ್ಲಿ ಬೆಳೆಯುವ ಹಣ್ಣಿನ ಸಸಿಗಳನ್ನು ಬೆಳೆಸಲಾಗಿತ್ತು. ಅವು ನಾಶವಾದ ನಂತರ ಹಲವು ವರ್ಷಗಳು ಈ ಜಮೀನು ಪಾಳು ಬಿದ್ದಿತ್ತು. ಇಲಾಖೆಯ ವಿಶೇಷ ಅಧಿಕಾರಿ ಮತ್ತು ಕೆಲ ಆಳುಗಳು ಜಮೀನಿನ ನಿರ್ವಹಣೆ ನೋಡಿಕೊಳ್ಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next