Advertisement

Karnataka: ಉಚಿತ ಅಕ್ಕಿ- ವಿಪಕ್ಷಗಳಿಗೆ ಸಿಎಂ ಚಾಟಿ

10:23 PM Nov 30, 2023 | Team Udayavani |

ಬೆಂಗಳೂರು: “ಅಕ್ಕಿ ನರೇಂದ್ರ ಮೋದಿ ಕೊಡುತ್ತಾರೆ, ಚೀಲ ಸಿದ್ದರಾಮಯ್ಯ ಕೊಡುತ್ತಾರೆ’ ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದರು. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಪುಕ್ಕಟ್ಟೆ 5 ಕೆಜಿ ಅಕ್ಕಿ, ಮಿಕ್ಕ 5 ಕೆಜಿ ಅಕ್ಕಿಗೆ ಪ್ರತಿಯಾಗಿ 170 ರೂ. ಕೊಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Advertisement

ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ನೂತನ ಅಂಬ್ಯುಲೆನ್ಸ್‌ಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಅಕ್ಕಿ ನರೇಂದ್ರ ಮೋದಿ ಕೊಡುತ್ತಾರೆ, ಚೀಲ ಸಿದ್ದರಾಮಯ್ಯ ಕೊಡುತ್ತಾರೆ ಎಂದು ಪ್ರತಿಪಕ್ಷದವರು ಟೀಕಿಸುತ್ತಿದ್ದರು. ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದವರು ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌. ನರೇಂದ್ರ ಮೋದಿ ಅಲ್ಲ. ಕೋವಿಡ್‌ ಬಂದ ಬಳಿಕ ಕೇಂದ್ರದಿಂದ 5 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತಿದೆ. ಮೊದಲು ದುಡ್ಡು ವಸೂಲು ಮಾಡುತ್ತಿದ್ದರು ಎಂದು ಆರೋಪಿಸಿದರು.

ರಾಜಕೀಯಕ್ಕಾಗಿ ದ್ವಂದ್ವ ಇರಬಾರದು: ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಮೀಪಿಸುತ್ತಿರುವ ಕಾರಣಕ್ಕೆ ಉಚಿತವಾಗಿ ಅಕ್ಕಿ ಕೊಡುವುದನ್ನು ಮುಂದುವರೆಸುತ್ತೇವೆ ಎಂದಿದ್ದಾರೆ. ರಾಜಕೀಯಕ್ಕಾಗಿ ದ್ವಂದ್ವಗಳು ಇರಬಾರದು. ಸ್ಪಷ್ಟತೆ ಇರಬೇಕು. ಬಡವರ ಸೇವೆ, ಆರೋಗ್ಯ ಸೇವೆ, ಎಲ್ಲರಿಗೂ ಶಿಕ್ಷಣ, ಉದ್ಯೋಗ ಕೊಡಬೇಕು.

ದುರ್ಬಲರಾಗಿರುವವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವರು ಮುಖ್ಯ ವಾಹಿನಿಗೆ ಬರಲು ಆಗುವುದಿಲ್ಲ. ಸಮ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರೂ ಸಫ‌ಲರಾಗಬೇಕು. ಈ ದಿಕ್ಕಿನಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಘೋಷಣೆ ಮಾಡಿ ಜಾರಿಗೆ ತಂದಿದೆ ಎಂದು ವಿವರಿಸಿದರು.

ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಠಿಕ ಆಹಾರ ಒದಗಿಸಬೇಕು. ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಹಾಲು ಕೊಡುವಂತೆ ಸೂಚಿಸಿದ್ದೆ. ಬಡತನ ಇರುವುದರಿಂದ ಅನೇಕ ಜನರಿಗೆ ಪೌಷ್ಠಿಕ ಆಹಾರ ಸಿಗುವುದಿಲ್ಲ ಎಂದರು.

Advertisement

ರಾಜ್ಯ ದಿವಾಳಿ ಆಗಿಲ್ಲ
ಗ್ಯಾರಂಟಿ ಯೋಜನೆ ಜಾರಿಗೆ ತರಲು ಹೊರಟಾಗ ಆರ್ಥಿಕವಾಗಿ ರಾಜ್ಯ ದಿವಾಳಿ ಆಗಿಬಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದರು. ದಿವಾಳಿನೂ ಆಗಿಲ್ಲ. ಏನೂ ಆಗಿಲ್ಲ. ರಾಜಕೀಯಕ್ಕೋಸ್ಕರ ಸುಳ್ಳು ಹೇಳುತ್ತಾರೆ. ನಾವು ನುಡಿದಂತೆ ನಡೆಯುತ್ತೇವೆ. ಉಚಿತವಾಗಿ ಬಸ್‌ನಲ್ಲಿ ಮಹಿಳೆಯರು ತಿರುಗಾಡಿ ಎಂದು ಹೇಳಿದ್ದೇವೆ. 2 ಸಾವಿರ ರೂ. ಕೊಡುತ್ತಿದ್ದೇವೆ. ಪುಕ್ಕಟ್ಟೆ ವಿದ್ಯುತ್‌ ಕೊಡುತ್ತೇವೆ. ಹಿಂದಿನವರು ಇದನ್ನೆಲ್ಲಾ ಮಾಡಿದ್ದಾರಾ ? ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ನೂತನ ಅಂಬ್ಯುಲೆನ್ಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಇತರರು ಇದ್ದರು.

ಫೆಬ್ರವರಿಯಲ್ಲೇ ರಾಜ್ಯ ಬಜೆಟ್‌: ಮಾಹಿತಿ ಕೋರಿದ ಹಣಕಾಸು ಇಲಾಖೆ
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಬಜೆಟ್‌ ಮುಂಬರುವ ಫೆಬ್ರವರಿ ತಿಂಗಳಲ್ಲೇ ಮಂಡನೆಯಾಗುವ ಸಾಧ್ಯತೆಗಳಿದ್ದು ಹಣಕಾಸು ಇಲಾಖೆ ಈಗಿನಿಂದಲೇ ಪೂರ್ವ ತಯಾರಿ ಆರಂಭಿಸಿದೆ.

ಡಿ.4 ರಿಂದ 15 ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಆ ನಂತರ ಜನವರಿ ಮೂರನೇ ಇಲ್ಲವೇ ಕೊನೆವಾರದಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಬಳಿಕ ಬಹುತೇಕ ಒಂದೆರಡು ವಾರ ಅಧಿವೇಶನ ನಡೆಯಲಿದೆ. ಆ ನಂತರ ಫೆಬ್ರವರಿಯಲ್ಲಿ ಬಜೆಟ್‌ ಮಂಡನೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಬಜೆಟ್‌ ಪೂರ್ವ ತಯಾರಿ ಕೆಲಸ ಆರಂಭಿಸಿರುವ ಹಣಕಾಸು ಇಲಾಖೆಯು ಪ್ರತಿಯೊಂದು ಇಲಾಖೆಯಿಂದಲೂ ಅಗತ್ಯ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ವಿಶೇಷವಾಗಿ ಪೂರ್ವ ತಯಾರಿಗೆ ಅಗತ್ಯವಾಗಿ ಬೇಕಾದ ಮಾಹಿತಿಗಳನ್ನು ಪೂರೈಸದ ಇಲಾಖೆಗಳ ಮಂದಗತಿ ಕಾರ್ಯಕ್ಕೆ ಹಣಕಾಸು ಇಲಾಖೆ ಎಚ್ಚರಿಕೆ ಕೂಡ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next