Advertisement
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ, ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಬಗ್ಗೆ ಸಿಎಂ ಬಿಎಸ್‌ವೈ ಜತೆಗೆ ಮಾತನಾಡಿ, ಹಾನಿಯ ವಿವರ ಪಡೆದಿದ್ದೇನೆ. ಸಂತ್ರಸ್ತರಾಗಿರುವ ನಮ್ಮ ಸಹೋದರ ಮತ್ತು ಸಹೋದರಿಯರ ಜತೆ ನಾವಿದ್ದೇವೆ ಎಂಬ ಭರವಸೆ ನೀಡುತ್ತಿದ್ದೇನೆ. ಕೇಂದ್ರದ ವತಿಯಿಂದ ನಡೆಯುತ್ತಿರುವ ರಕ್ಷಣ ಕಾರ್ಯ ಸಹಿತ ಕೇಂದ್ರದಿಂದ ಸಿಗುವ ಎಲ್ಲ ಸಹಾಯದ ಬಗ್ಗೆ ಅಭಯ ನೀಡುತ್ತಿದ್ದೇನೆ ಎಂದಿದ್ದಾರೆ.
ಅತ್ತ ಮೈಸೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಕೇಂದ್ರ ಸರಕಾರವು ನಮ್ಮ ಮನವಿಗೆ ಸ್ಪಂದಿಸಿ ನೆರೆ ಪರಿಹಾರ ನೀಡಲು ಒಪ್ಪಿಕೊಂಡಿದೆ. ರಾಜ್ಯಕ್ಕೆ ಹೆಚ್ಚಿನ ಪರಿಹಾರ ನೀಡುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅಗತ್ಯ ನೆರವು ನೀಡಲು ಒಪ್ಪಿಕೊಂಡಿದ್ದಾರೆ. ತತ್‌ಕ್ಷಣವೇ ಕೇಂದ್ರ ಅನುದಾನ ಬಿಡುಗಡೆ ಮಾಡಲಿದೆ. ರಾಜ್ಯ ಸರಕಾರದಲ್ಲಿ ಹಣದ ಕೊರತೆ ಇಲ್ಲ. ಎಲ್ಲ ಡಿಸಿಗಳ ಖಾತೆಗೆ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದರು. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಮನೆ ಕಳೆದುಕೊಂಡ ವರಿಗೆ ತತ್‌ಕ್ಷಣ 10 ಸಾ.ರೂ. ನೀಡುತ್ತೇವೆ ಮತ್ತು ಐದು ಲಕ್ಷ ರೂ.ಗಳನ್ನು ಮನೆ ನಿರ್ಮಾಣಕ್ಕೆ ಬಿಡುಗಡೆ ಮಾಡುತ್ತೇವೆ ಎಂದರು.
Related Articles
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ತುರ್ತು ಪರಿಹಾರಕ್ಕಾಗಿ 85.49 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರವಾಹದಿಂದ ಹಾನಿಗೊಳಗಾದ 12 ಜಿಲ್ಲೆಗಳ ಡಿಸಿಗಳು ಮತ್ತು ಜಿಪಂ ಸಿಇಒಗಳೊಂದಿಗೆ ಶುಕ್ರವಾರ ಸಿಎಂ ವೀಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸಮರ್ಥವಾಗಿ ಎದುರಿಸಲು ಸಮರೋಪಾದಿಯಲ್ಲಿ ಸನ್ನದ್ಧರಾಗುವಂತೆ ಸಿಎಂ ಸೂಚಿಸಿದ್ದಾರೆ.
Advertisement
ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡು, ಸಂತ್ರಸ್ತರಿಗೆ ಉತ್ತಮ ಆಹಾರ ಪೂರೈಕೆಯಾಗಬೇಕು, ಕೋವಿಡ್ ಪರಿಸ್ಥಿತಿಯಲ್ಲಿ ಕಾಳಜಿ ಕೇಂದ್ರಗಳಲ್ಲಿ ಎಸ್‌ಒಪಿ ಪಾಲನೆ ಮಾಡಿ ಎಂದರು.
ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳಿಂದ 14 ದೋಣಿಗಳನ್ನು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ನೆರೆ ಸಂತ್ರಸ್ತರ ರಕ್ಷಣೆಗಾಗಿ ರಕ್ಷಣ ಹೆಲಿಕಾಪ್ಟರ್‌ಗಳನ್ನು ಕಳುಹಿಸಲಾಗಿದೆ ಎಂದ ಸಿಎಂ, ಸಂಘ ಸಂಸ್ಥೆಗಳು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿ. ಜನರ ನೋವಿಗೆ ತತ್‌ಕ್ಷಣ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಕರೆ ನೀಡಿದರು. ಪ್ರವಾಹದಿಂದ ಬೆಳೆ ಹಾನಿಯಾದ 51,810 ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ 36.57 ಕೋ.ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ನೇರವಾಗಿ ಆನ್‌ಲೈನ್ ಮೂಲಕ ಜಮೆ ಮಾಡಿದರು.
ಜಿಲ್ಲಾಧಿಕಾರಿಗಳ ಖಾತೆಗೆ ಹಣಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಖಾತೆಗೆ ಹಣಕಾಸು ಇಲಾಖೆಯಿಂದ ತಲಾ ಐದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ತೀವ್ರ ಹಾನಿಯಾಗಿರುವ ಕಲಬುರಗಿ ಜಿಲ್ಲೆಗೆ 20 ಕೋಟಿ ರೂ., ಯಾದಗಿರಿ ಜಿಲ್ಲೆಗೆ 15 ಕೋಟಿ ರೂ. ಬಿಡುಗಡೆ ಮಾಡಿದ್ದು, ಉಡುಪಿ, ದಕ್ಷಿಣ ಕನ್ನಡ ಸಹಿತ ಉಳಿದ ಜಿಲ್ಲೆಗಳಿಗೆ ತಲಾ ಐದು
ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದೆಂದೂ ಕಂಡರಿಯದ ಮಳೆಯಿಂದಾಗಿರುವ ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಶುಕ್ರವಾರ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿಯನ್ನು ಅವರು ವೀಕ್ಷಿಸಿದರು. ಈ ಭಾಗದಲ್ಲಿ ಹಿಂದೆಂದೂ ಆಗದಿರುವಷ್ಟು ವ್ಯಾಪಕ ಮಳೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದರು.