Advertisement

31,541 ಹೆಕ್ಟೇರ್‌ ಕೃಷಿ ಹಾನಿ: ಪ್ರಧಾನಿ ಮೋದಿಗೆ ಇಂದು ಮೊರೆ

03:34 AM Aug 10, 2020 | Hari Prasad |

ಬೆಂಗಳೂರು: ರಾಜ್ಯದ 12 ಜಿಲ್ಲೆಗಳಲ್ಲಿ ಒಂದು ವಾರದಲ್ಲಿ ಸುರಿದ ಭಾರೀ ಮಳೆ, ಪ್ರವಾಹದಿಂದ 4,530 ಹೆಕ್ಟೇರ್‌ ತೋಟಗಾರಿಕೆ ಬೆಳೆ ನಾಶವಾಗಿದ್ದರೆ, 31,541 ಹೆಕ್ಟೇರ್‌ ಕೃಷಿ ಬೆಳೆಗೆ ಹಾನಿಯಾಗಿದೆ.

Advertisement

ಈ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕಾಮಗಾರಿಗೆ ಮುಂಗಡವಾಗಿ ಅನುದಾನ ಬಿಡುಗಡೆಗೆ ಪ್ರಧಾನಿ ಮೋದಿ ಅವರಿಗೆ ರಾಜ್ಯ ಸರಕಾರ ಸೋಮವಾರ ಮನವಿ ಸಲ್ಲಿಸಲಿದೆ.

ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ರವಿವಾರ ರಾತ್ರಿ ಸಭೆ ನಡೆಸಿ ಪ್ರಧಾನಿಯವರ ಬಳಿ ಪ್ರಸ್ತಾವಿಸಬೇಕಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಸಿಎಂ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಸಚಿವರು ರಾಜ್ಯದ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಸೋಮವಾರ ಬೆಳಗ್ಗೆ 11.30ಕ್ಕೆ ನಡೆಯುವ ವೀಡಿಯೋ ಸಂವಾದದ ಮೂಲಕ ಮಾಹಿತಿ ನೀಡಲಿದ್ದಾರೆ.

ಕೊಡಗು, ಚಿಕ್ಕಮಗಳೂರುಗಳಲ್ಲಿ ಹೆಚ್ಚು ನಷ್ಟ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಹಾನಿಯಾಗಿದೆ.
ಕೆಲವೆಡೆ ಕಡಲ್ಕೊರೆತದಿಂದ ಮನೆಗಳು ಸಮುದ್ರ ಪಾಲಾಗಿದ್ದು, ಹೆಚ್ಚಿನ ಮೊತ್ತದ ಪರಿಹಾರಕ್ಕೆ ಜಿಲ್ಲಾಧಿಕಾರಿ ಗಳು ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

Advertisement

ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಚಾಮರಾಜನಗರ, ಉಡುಪಿ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ಇಲ್ಲಿನ ಹಾನಿ, ನಷ್ಟದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ.

13 ಮಂದಿ ಸಾವು; ಐವರು ಕಣ್ಮರೆ
ಆ.1ರಿಂದ ರವಿವಾರ ಸಂಜೆವರೆಗೆ ಮಳೆ, ನೆರೆಗೆ ಒಟ್ಟು 13 ಮಂದಿ ಮೃತಪಟ್ಟಿದ್ದು, ಐವರು ಕಣ್ಮರೆಯಾಗಿದ್ದಾರೆ. ಈ ವರೆಗೆ 80 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, 1,599 ಮಂದಿ ಆಶ್ರಯ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next