Advertisement

ಮಾಹಿತಿ ವಿನಿಮಯದ ಉದ್ದೇಶಕ್ಕೆ ಕರ್ನಾಟಕ-ಫಿನ್‌ಲೆಂಡ್‌ ಒಪ್ಪಂದ

11:41 AM Sep 12, 2017 | Team Udayavani |

ಬೆಂಗಳೂರು: ಆವಿಷ್ಕಾರಕ್ಕೆ ಸಂಬಂಧಪಟ್ಟಂತೆ ಹೊಸ ಪರಿಕಲ್ಪನೆ, ಯೋಚನೆಗಳ ವಿನಿಮಯಕ್ಕಾಗಿ “ಕರ್ನಾಟಕ- ಫಿನ್‌ಲೆಂಡ್‌ ಇನ್ನೋವೇಷನ್‌ ಕಾರಿಡಾರ್‌’ ಕಾರ್ಯಕ್ರಮದಡಿ ರಾಜ್ಯ ಐಟಿ-ಬಿಟಿ ಇಲಾಖೆ ಹಾಗೂ ಫಿನ್‌ಲೆಂಡ್‌ ರಾಯಭಾರ ಕಚೇರಿಯು ಒಡಂಬಡಿಕೆ ಮಾಡಿಕೊಂಡಿದೆ.

Advertisement

ವಿಜ್ಞಾನ, ಸಂಶೋಧನೆ, ಆವಿಷ್ಕಾರ, ಕೌಶಲ್ಯ ಅಭಿವೃದ್ಧಿ ಪರಿಣತಿ ಹಾಗೂ ಮಾಹಿತಿ ವಿನಿಮಯ ಉದ್ದೇಶದಿಂದ ಕರ್ನಾಟಕ ಹಾಗೂ ಫಿನ್‌ಲೆಂಡ್‌ ನಡುವೆ ಒಡಂಬಡಿಕೆ ಏರ್ಪಟ್ಟಿದೆ. ಅದರಂತೆ  ಕರ್ನಾಟಕ ಹಾಗೂ ಫಿನ್‌ಲೆಂಡ್‌ನ‌ ಕಂಪನಿಗಳು, ಉದ್ಯಮಶೀಲರು, ವಿದ್ಯಾರ್ಥಿಗಳು, ಸಂಶೋಧಕರು, ಅಧಿಕಾರಿಗಳು, ಶೈಕ್ಷಣಿಕ ತಜ್ಞರು ಹಾಗೂ ಹೂಡಿಕೆದಾರರನ್ನು ಸಂಪರ್ಕಿಸಲು ಇದು ಸಹಕಾರಿಯಾಗಲಿದೆ.

ಜತೆಗೆ ಸ್ಟಾರ್ಟ್‌ಅಪ್‌ ಇನ್‌ಕುಬೇಷನ್‌ ಕಾಯಕ್ರಮಗಳು, ಸಂಶೋಧನಾ ಕಾರ್ಯ, ನಾನಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವುದು ಇನ್ನೋವೇಷನ್‌ ಕಾರಿಡಾರ್‌ನ ಉದ್ದೇಶವಾಗಿದೆ. ಆ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲ ಬೇಡಿಕೆ ಪೂರೈಸುವುದು, ಸೂಕ್ತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರ್ಯಕ್ಕೂ ಆದ್ಯತೆ ನೀಡುವುದು ಒಡಂಬಡಿಕೆಯ ಆಶಯ.

ನಗರದಲ್ಲಿ ಸೋಮವಾರ ಒಡಂಬಡಿಕೆಗೆ ಸಹಿ ಹಾಕಿ ದಾಖಲೆ ವಿನಿಮಯ ಮಾಡಿಕೊಂಡ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, “ಕರ್ನಾಟಕ- ಫಿನ್‌ಲೆಂಡ್‌ ಇನ್ನೋವೇಷನ್‌ ಕಾರಿಡಾರ್‌ ಪರಸ್ಪರ ಸಹಕಾರ ಹಾಗೂ ಜ್ಞಾನ ಹಂಚಿಕೆ ಸಾಧ್ಯತೆಯನ್ನು ಸೃಷ್ಟಿಸಿದೆ.

ಒಂದು ದೇಶದ ಕಂಪನಿಯು ಮತ್ತೂಂದು ದೇಶದ ಮಾರುಕಟ್ಟೆಯ ಅಗತ್ಯಗಳಿಗೆ ಸ್ಪಂದಿಸಲು ಇದು ಸಹಕಾರಿಯಾಗಲಿದೆ. ಸದ್ಯದಲ್ಲೇ ಮ್ಯಾಚ್‌ ಮೇಕಿಂಗ್‌ ಈವೆಂಟ್‌ಗಳನ್ನು ಆರಂಭಿಸಲಾಗುತ್ತಿದೆ. ಒಟ್ಟಾರೆ ಹೊಸ ಪರಿಕಲ್ಪನೆ, ಯಶಸ್ವಿ ಪ್ರಯೋಗ, ಸುಧಾರಿತ ವ್ಯವಸ್ಥೆಗಳ ಬಗ್ಗೆ ಪರಸ್ಪರ ಮಾಹಿತಿ ವಿನಿಮಯಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

Advertisement

ಭಾರತದಲ್ಲಿರುವ ಫಿನ್‌ಲೆಂಡ್‌ ರಾಯಭಾರಿ ನೀನಾ ವ್ಯಾಸ್ಕಾಲಹಿ¤ ಮಾತನಾಡಿ, “ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಪರಸ್ಪರ ಹೆಚ್ಚಿನ ಸಹಕಾರಕ್ಕೆ ಒಡಂಬಡಿಕೆ ಉಪಯುಕ್ತವಾಗಿದೆ. ಬೆಂಗಳೂರು ಟೆಕ್‌ ಸಮ್ಮೇಳನ, ಬೆಂಗಳೂರು ಇಂಡಿಯಾ ನ್ಯಾನೋ ಹಾಗೂ ನೋಕಿಯಾ ಇನ್ನೋವೇಷನ್‌ ಡೇ ಆಚರಣೆಗಳಲ್ಲಿ ಜಂಟಿ ಕಾರ್ಯಕ್ರಮ ನಡೆಸಲಾಗುವುದು.

ಉಭಯ ರಾಷ್ಟ್ರಗಳ ಜನ ಪರಸ್ಪರ ಸಂಪರ್ಕಿಸಲು, ವಿದ್ಯಾರ್ಥಿಗಳು, ಸಂಶೋಧಕರು, ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮಾಹಿತಿ ವಿನಿಮಯಕ್ಕೂ ಸಹಕಾರಿಯಾಗಲಿದೆ. ಜತೆಗೆ ಉಭಯ ರಾಷ್ಟ್ರಗಳ ಆವಿಷ್ಕಾರ, ಸ್ಟಾರ್ಟ್‌ಅಪ್‌ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದು, ನಿಯೋಗಗಳಲ್ಲಿ ಭೇಟಿಗೂ ಅವಕಾಶ ಕಲ್ಪಿಸುವುದು ಒಡಂಬಡಿಕೆಯ ಭಾಗವಾಗಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next