Advertisement

ವಾಣಿಜ್ಯ ಮಂಡಳಿ ಚುನಾವಣೆಗೆ ಹೆಚ್ಚಿದ ಆಗ್ರಹ

10:41 PM Feb 08, 2022 | Team Udayavani |

ಬೆಂಗಳೂರು: ಕೋವಿಡ್‌ ಕಾರಣದಿಂದ 2 ವರ್ಷಗಳಿಂದ ಮುಂದೂಡುತ್ತ ಬಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯನ್ನು ಆದಷ್ಟು ಬೇಗ ನಡೆಸಿ, ನೂತನ ಚುನಾಯಿತ ಆಡಳಿತ ಸಮಿತಿಗೆ ವಾಣಿಜ್ಯ ಮಂಡಳಿಯ ಆಡಳಿತ ನಡೆಸಲು ಅನುವು ಮಾಡಿಕೊಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಅನೇಕ ಸದಸ್ಯರು ಮತ್ತು ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಮಾತನಾಡಿರುವ ನಿರ್ಮಾಪಕ ಭಾ. ಮ ಹರೀಶ್‌, “ವಾಣಿಜ್ಯ ಮಂಡಳಿಯ ಬೈಲಾ ಪ್ರಕಾರ ಈಗಾಗಲೇ ಚುನಾವಣೆ ನಡೆಯಬೇಕಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಆತಂಕ, ಲಾಕ್‌ಡೌನ್‌ನಿಂದಾಗಿ ಎಲ್ಲ ಚುನಾವಣೆಗಳೂ ಮುಂದೂಡುತ್ತ ಬಂದಿರುವುದರಿಂದ, ವಾಣಿಜ್ಯ ಮಂಡಳಿ ಚುನಾವಣೆ ಕೂಡ ಮುಂದಕ್ಕೆ ಹೋಗಿದೆ. ಸದ್ಯ ಥಿಯೇಟರ್‌ಗಳಲ್ಲಿ ಪೂರ್ಣ ಪ್ರಮಾಣದ ಪ್ರವೇಶಾತಿ ನೀಡಲಾಗಿದ್ದು, ಚಿತ್ರೋದ್ಯಮದಲ್ಲೂ ಮೊದಲಿನಂತೆ ಚಟುವಟಿಕೆಗಳು ಪ್ರಾರಂಭವಾಗಿದೆ. ಈಗಾಗಲೇ ರಾಜ್ಯದ ಹಲವು ಸಹಕಾರ ಸಂಘ-ಸಂಸ್ಥೆಗಳೂ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿವೆ. ಹೀಗಿರುವಾಗ ಆದಷ್ಟು ಬೇಗ ವಾಣಿಜ್ಯ ಮಂಡಳಿಗೂ ಚುನಾವಣೆಯನ್ನು ನಡೆಸಬೇಕಾಗಿದೆ ಎಂದು ಮುಖ್ಯಮಂತ್ರಿ, ಸಹಕಾರ ಸಚಿವರಿಗೂ ಮನವಿ ಮಾಡಲಾಗಿದೆ.

ಸಹಕಾರ ಸಂಘ-ಸಂಸ್ಥೆಗಳ ಚುನಾವಣೆ ನಡೆಸದಿರುವುದರಿಂದ, ಅವುಗಳಲ್ಲಿ ಸದಸ್ಯರುಗಳ ಪಾಲ್ಗೊಳ್ಳುವಿಕೆ ಮತ್ತು ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೋವಿಡ್‌ ಮಾರ್ಗಸೂಚಿ ನಿಯಮಾವಳಿಗಳನ್ನು ಪಾಲಿಸಿಕೊಂಡೇ ಚುನಾವಣೆ ನಡೆಸಲು ಅನುವು ಮಾಡಿಕೊಡುವಂತೆ ಅನೇಕ ಸದಸ್ಯರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಪ್ರಸ್ತುತ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರ ವಲಯದ 1144, ವಿತರಕರ ವಲಯದ 393 ಮತ್ತು ಪ್ರದರ್ಶಕರ ವಲಯದ 149 ಸದಸ್ಯರು ಸೇರಿದಂತೆ ಒಟ್ಟು 1686 ಮಂದಿ ಸದಸ್ಯರಿದ್ದಾರೆ. ವಾಣಿಜ್ಯ ಮಂಡಳಿಯ ಬೈಲಾ ಅನ್ವಯ ಈ ಬಾರಿಯ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ ನಿರ್ಮಾಪಕರ ವಲಯಕ್ಕೆ ಮೀಸಲಾಗಿದೆ. ಈ ಹಿಂದೆ ಫೆ. 16ರಂದು ವಾಣಿಜ್ಯ ಮಂಡಳಿ ಚುನಾವಣೆ ನಿಗದಿಯಾಗಿತ್ತು. ಚುನಾವಣೆಗೆ ತಯಾರಿಯನ್ನೂ ಆರಂಭಿಸಲಾಗಿತ್ತು. ಆದರೆ ಓಮಿಕ್ರಾನ್‌ ಆತಂಕದಿಂದ ಸರ್ಕಾರ ಡಿಸೆಂಬರ್‌ ಅಂತ್ಯಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದ್ದರಿಂದ, ಮಾರ್ಚ್‌ ತಿಂಗಳ ಕೊನೆಯವರೆಗೆ ಚುನಾವಣೆ ಮುಂದೂಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next