Advertisement

ನಮ್ಮ ಮೆಟ್ರೋಗೂ ಕೆಇಆರ್‌ಸಿ ಶಾಕ್‌

01:09 PM Apr 11, 2022 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ಗೂ ಈ ಬಾರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) “ಶಾಕ್‌’ ನೀಡಿದೆ!

Advertisement

ಬೇಡಿಕೆ ಶುಲ್ಕ (ಡಿಮ್ಯಾಂಡ್‌ ಶುಲ್ಕ)ವನ್ನು ಪ್ರತಿ ಕೆವಿಎ (ಕಿಲೋವೋಲ್ಟ್ ಆ್ಯಂಪರ್‌- ಸಾವಿರ ವೋಲ್ಟ್ ಆ್ಯಂಪರ್‌ಗೆ ಒಂದು ಕೆವಿಎ)ಗೆ 25 ರೂ. ಹೆಚ್ಚಳ ಮಾಡಲಾಗಿದೆ. ಜತೆಗೆ ಇಂಧನ ಬಳಕೆ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ 5 ಪೈಸೆ ಏರಿಸಲಾಗಿದೆ. ಇಡೀ ಮೆಟ್ರೋ ವ್ಯವಸ್ಥೆ ಬಹುತೇಕ ವಿದ್ಯುತ್‌ ಮೇಲೆ ಅವಲಂಬನೆಯಾಗಿದ್ದು, ಈ ಪರಿಷ್ಕರಣೆಯ ಬಿಸಿ ತುಸು ಜೋರಾಗಿಯೇ ತಟ್ಟಿದೆ.

ಬೇಡಿಕೆ ಶುಲ್ಕ ಮತ್ತು ಇಂಧನ ಬಳಕೆ ಶುಲ್ಕ ಎರಡನ್ನೂ ಹೆಚ್ಚಳ ಮಾಡಿದ್ದರಿಂದ ಬಿಎಂಆರ್‌ಸಿಎಲ್‌ ಗೆ ಒಟ್ಟಾರೆ ಈಗ ಪಾವತಿಸುವ ವಿದ್ಯುತ್‌ ಬಿಲ್‌ಗೆ ಹೋಲಿಸಿದರೆ, ಶೇ.2.5ರಷ್ಟು ಹೊರೆಬಿದ್ದಂತಾಗಿದೆ.

ಈಗಾಗಲೇ ಲಾಕ್‌ಡೌನ್‌, ವರ್ಕ್‌ ಫ್ರಂ ಹೋಂ ಮತ್ತಿತರ ಕಾರಣಗಳಿಂದ ನಷ್ಟದಲ್ಲಿ ಸಾಗುತ್ತಿರುವ “ನಮ್ಮ ಮೆಟ್ರೋ’ಗೆ ವಿದ್ಯುತ್‌ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ, ಈಗಾಗಲೇ ನಿರೀಕ್ಷಿತ ಪ್ರಯಾಣಿಕರ ಕೊರತೆ ಎದುರಿಸುತ್ತಿರುವುದರಿಂದ ದರ ಏರಿಕೆ ಮಾಡುವಂತಿಲ್ಲ. ಈ ದರ ಏರಿಕೆ ಹೊರೆಯನ್ನು ಹೊರುವ ಅನಿವಾರ್ಯತೆ ಸೃಷ್ಟಿಯಾಗಿದೆ.

“ನಮ್ಮ ಮೆಟ್ರೋ’ ಕಾರ್ಯಾ ಚರಣೆಗಾಗಿಯೇ ತಿಂಗಳಿಗೆ 1,09,50,600 ಯೂನಿಟ್‌ ಬಳಕೆ ಆಗುತ್ತದೆ. ಇದಕ್ಕಾಗಿ ಈ ಹಿಂದೆ 6.84 ಕೋಟಿ ರೂ. ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿತ್ತು. ಆದರೆ, ಬರುವ ತಿಂಗಳಿಂದ ಸುಮಾರು ಏಳು ಕೋಟಿ ರೂ. ಪಾವತಿಸಬೇಕಾಗುತ್ತದೆ. ಅಂದರೆ ಸರಾಸರಿ 13ರಿಂದ 15 ಲಕ್ಷ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಬಿಎಂಆರ್‌ಸಿಎಲ್‌ ಅಂದಾಜು ಮಾಡಿದೆ.

Advertisement

ಯಾವುದು ಎಷ್ಟು ಹೆಚ್ಚಳ?: ಬಿಎಂಆರ್‌ಸಿಎಲ್‌ ಜಾಲದಲ್ಲಿ 3 ವಿದ್ಯುತ್‌ ಘಟಕಗಳಿದ್ದು, ಅವುಗಳು ಒಟ್ಟಾರೆ 27,840 ಕೆವಿಎ ಸಾಮರ್ಥ್ಯವನ್ನು ಒಳಗೊಂಡಿವೆ. ಇದರಿಂದ ಮಾಸಿಕ ಬೇಡಿಕೆ ಶುಲ್ಕ ಕಳೆದ ತಿಂಗಳಲ್ಲಿ 61,24,800 ರೂ. ಇತ್ತು. ಒಂದು ಕೆವಿಎಗೆ 220 ರೂ. ಇದ್ದದ್ದು, ಈಗ 245 ರೂ. ಆಗಿದ್ದು, ಅದರಂತೆ ಬರುವ ತಿಂಗಳಿಂದ 68,20,800 ರೂ. ಆಗಲಿದೆ. ಅದೇ ರೀತಿ, ಇಂಧನ ಬಳಕೆ ಕಳೆದ ತಿಂಗಳು 1,09,50,600 ಯೂನಿಟ್‌ ಇತ್ತು. ಪ್ರತಿ ಯೂನಿಟ್‌ಗೆ 5.20 ರೂ.ಗೆ ಲೆಕ್ಕಹಾಕಿದರೆ, 51,24,880 ರೂ. ಆಗುತ್ತದೆ. ಐದು ಪೈಸೆ ಹೆಚ್ಚಳವಾಗಿದ್ದರಿಂದ 51,74,158 ರೂ. ಆಗಲಿದೆ. ಜತೆಗೆ ತೆರಿಗೆ ಮತ್ತಿತರ ದಂಡ ಶುಲ್ಕವೂ ಸೇರಿ 6.83 ಕೋಟಿ ರೂ. ಆಗುತ್ತದೆ (1.50 ಲಕ್ಷ ರೂ. ಪ್ರೋತ್ಸಾಹಧನ ಕಡಿತಗೊಳಿಸಿ). ಇದರೊಂದಿಗೆ ಮೆಟ್ರೋ ನಿಲ್ದಾಣಗಳು, ಕೇಂದ್ರ ಕಚೇರಿ, ಡಿಪೋಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮತ್ತಿತರ ಉದ್ದೇಶಗಳಿಗೆ ವಿದ್ಯುತ್‌ ಬಳಕೆ ಸೇರಿದರೆ ಶೇ. 2.5ರಷ್ಟು ಹೆಚ್ಚಳ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಮೆಟ್ರೋ ಬಳಕೆ ಮಾಡುವ ವಿದ್ಯುತ್‌ ದರ ಪರಿಷ್ಕರಣೆ ಇದೇ ಮೊದಲಲ್ಲ; ಈ ಹಿಂದೆಯೂ ಹಲವು ಬಾರಿ ಹೆಚ್ಚಳ ಮಾಡಿದ ಉದಾಹರಣೆಗಳಿವೆ. ಅದೇ ರೀತಿ, ಕಡಿಮೆ ಮಾಡಿದ್ದೂ ಇದೆ. ಕಳೆದೆರಡು ವರ್ಷಗಳಿಂದ ಕೋವಿಡ್‌-19 ಹಾವಳಿ ಹಿನ್ನೆಲೆಯಲ್ಲಿ ಪರಿಷ್ಕರಣೆ ಆಗಿರಲಿಲ್ಲ. ಈ ಬಾರಿ ಬೇಡಿಕೆ ಶುಲ್ಕದಲ್ಲಿ ಪ್ರತಿ ಕೆವಿಎಗೆ 25 ರೂ. ಹಾಗೂ ಇಂಧನ ಬಳಕೆ ಶುಲ್ಕ ದಲ್ಲಿ ಪ್ರತಿ ಯೂನಿಟ್‌ಗೆ 5 ಪೈಸೆ ಹೆಚ್ಚಿಸಲಾಗಿದೆ. ಇದರಿ ಂದಾಗುವ ಹೊರೆಯನ್ನು ತನ್ನದೇ ಆದ ಮೂಲ ಗಳಿಂದ ಬಿಎಂಆರ್‌ಸಿಎಲ್‌ ಸರಿದೂಗಿಸ ಬಹುದು ಎಂದು ಕೆಇಆರ್‌ಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಯಾಣ ದರ ಹೆಚ್ಚಳ ಇಲ್ಲ: ಎಂಡಿ ಸ್ಪಷ್ಟನೆ : ನಿತ್ಯ 3.70ರಿಂದ 3.80 ಲಕ್ಷ ಪ್ರಯಾಣಿಕರು ಸಂಚರಿಸು ತ್ತಿದ್ದಾರೆ. ಆದರೆ, ಈಗಿರುವ ಮೆಟ್ರೋ ಜಾಲ ಮತ್ತು ಅದರ ಕಾರ್ಯಾಚರಣೆಗೆ ಆಗುತ್ತಿರುವ ವೆಚ್ಚಕ್ಕೆ ಹೋಲಿಸಿದರೆ, ಈ ಸಂಖ್ಯೆ ತುಂಬಾ ಕಡಿಮೆ ಆಗುತ್ತದೆ. ಹಾಗಂತ ಪ್ರಯಾಣ ದರ ಹೆಚ್ಚಳ ಮಾಡಿ, ವಿದ್ಯುತ್‌ ದರ ಏರಿಕೆ ಹೊರೆ ಕಡಿಮೆ ಮಾಡುವ ಸ್ಥಿತಿಯಲ್ಲಿ ನಿಗಮವಿಲ್ಲ. ಯಾಕೆಂದರೆ, ನಮಗೆ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ಅಗತ್ಯವಿದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಸ್ಪಷ್ಟಪಡಿಸಿದರು.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next