Advertisement

ಕರ್ನಾಟಕ ಚುನಾವಣೆ ; ಪಕ್ಷೇತರರಿಗಿಂತ ಹೆಚ್ಚು ಮತ ಪಡೆದ ನೋಟಾ

06:13 PM May 15, 2023 | Team Udayavani |

ಗದಗ: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ. ಎಲ್ಲೆಡೆ ಮತಗಳ ಲೆಕ್ಕಾಚಾರ ಆರಂಭವಾಗಿದ್ದು, ನೋಟಾಕ್ಕೆ ಬಿದ್ದ ಮತಗಳು ಕೂಡ ಚರ್ಚೆಯ ಮುನ್ನೆಲೆಗೆ ಬಂದಿರುವುದು ವಿಶೇಷ.

Advertisement

ಕಾಂಗ್ರೆಸ್‌, ಬಿಜೆಪಿ ಸೇರಿ ಜೆಡಿಎಸ್‌, ಎಎಪಿ ಹಾಗೂ ಪಕ್ಷೇತರರನ್ನೂ ಒಪ್ಪಿಕೊಳ್ಳದ ಮತದಾರರು ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೋಟಾಕ್ಕೆ ಮತ ಹಾಕಿದ್ದಾರೆ. ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಪೈಕಿ ನರಗುಂದ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರು ನೋಟಾಕ್ಕೆ ಮತ ಚಲಾಯಿಸಿದ್ದಾರೆ.

ನಂತರದಲ್ಲಿ ಶಿರಹಟ್ಟಿ, ರೋಣ ಹಾಗೂ ಕೊನೆಯದಾಗಿ ಗದಗ ಮತಕ್ಷೇತ್ರದಲ್ಲಿ ನೋಟಾಕ್ಕೆ ಮತಗಳು ಚಲಾವಣೆಯಾಗಿವೆ.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಿರಹಟ್ಟಿ ಎಸ್ಸಿ ಮೀಸಲು ಕ್ಷೇತ್ರ ಹೊರತು ಪಡಿಸಿ ಉಳಿದ ಮೂರು ಕ್ಷೇತ್ರಗಳಲ್ಲಿ
ಜೆಡಿಎಸ್‌ ಹಾಗೂ ಪ್ರಾದೇಶಿಕ ಪಕ್ಷಗಳು ಸೇರಿ ಪಕ್ಷೇತರರು ಕೂಡ ನಾಚುವಂತೆ ನೋಟಾಕ್ಕೆ ಮತಗಳು ಚಲಾವಣೆಯಾಗಿವೆ.
ನೋಟಾ ಪಡೆದುಕೊಂಡ ಮತಗಳು ಒಂದು ಕ್ಷೇತ್ರಗಳಲ್ಲಿ ಮೂರನೇ ಸ್ಥಾನ, ಎರಡು ಕ್ಷೇತ್ರದಲ್ಲಿ ನಾಲ್ಕು, ಮತ್ತೂಂದು ಕ್ಷೇತ್ರದಲ್ಲಿ ಐದನೇ ಸ್ಥಾನ ಪಡೆದಿದೆ.

ಗದಗ ಮತಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ. ಪಾಟೀಲ 89,958 ಮತಗಳನ್ನು ಪಡೆದು ಗೆಲುವು ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ 74,828 ಮತಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದರೆ, ಜೆಡಿಎಸ್‌, ಆಪ್‌ ಸೇರಿ ಪಕ್ಷೇತರರನ್ನು ಮೀರಿ 1,546 ಮತಗಳನ್ನು ಪಡೆದುಕೊಂಡ ನೋಟಾ ಮೂರನೇ ಸ್ಥಾನ ಪಡೆದುಕೊಂಡಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ನರಗುಂದ ಮತಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಕಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಅವರು 72,835 ಮತಗಳನ್ನು ಪಡೆದು ಗೆಲುವು ಸಾಧಿ ಸಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್‌. ಯಾವಗಲ್‌ 71,044 ಮತಗಳನ್ನು ಪಡೆಯುವ
ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ವೀರೇಶ ಸೊಬರದಮಠ, ಜೆಡಿಎಸ್‌ ಅಭ್ಯರ್ಥಿ ಆರ್‌.ಎನ್‌. ಪಾಟೀಲ ಸೇರಿ ಎಎಪಿ, ಕೆಆರ್‌ ಎಸ್‌ ಹಾಗೂ ಇತರೆ ಪಕ್ಷೇತರರನ್ನು ಮೀರಿಸುವಂತೆ 1,767 ಮತಗಳನ್ನು ಪಡೆದುಕೊಂಡ ನೋಟಾ
ಮೂರನೇ ಸ್ಥಾನದಲ್ಲಿದೆ.

Advertisement

ರೋಣ ಮತಕ್ಷೇತ್ರದಲ್ಲಿ 9 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ ಅಭ್ಯರ್ಥಿ 94,865 ಮತಗಳನ್ನು ಪಡೆದು ಗೆಲುವು ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ 70,177 ಮತಗಳನ್ನು ಪಡೆದು ಎರಡನೇ ಸ್ಥಾನ, ಎಎಪಿ ಅಭ್ಯರ್ಥಿ ಆನೇಕಲ್‌ ದೊಡ್ಡಯ್ಯ 8,839 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಜೇಡಿಎಸ್‌, ಶಿವಸೇನಾ ಮತ್ತು ಪಕ್ಷೇತರರಿಗಿಂತ ಹೆಚ್ಚು ಅಂದರೆ 1,600 ಮತಗಳನ್ನು ಪಡೆದ ನೋಟಾ ನಾಲ್ಕನೇ ಸ್ಥಾನ ಅಲಂಕರಿಸಿದೆ.

ಉಳಿದಂತೆ ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ| ಚಂದ್ರು ಲಮಾಣಿ 74,489 ಮತಗಳನ್ನು ಪಡೆದು ಗೆಲುವು ಸಾಧಿಸಿ ಮೊದಲ ಸ್ಥಾನದಲ್ಲಿದ್ದರೆ, ಪಕ್ಷೇತರ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ, 45,969 ಮತಗಳನ್ನು ಪಡೆದು
ಎರಡನೇ, ಕಾಂಗ್ರೆಸ್‌ ಅಭ್ಯರ್ಥಿ ಸುಜಾತಾ ದೊಡ್ಡಮನಿ 34,791 ಮತಗಳನ್ನು ಪಡೆದು ಮೂರನೇ, ಜೆಡಿಎಸ್‌ ಅಭ್ಯರ್ಥಿ ಹನುಮಂತಪ್ಪ ನಾಯಕ 2,065 ಮತಗಳನ್ನು ಪಡೆದು ನಾಲ್ಕನೇ  ಸ್ಥಾನದಲ್ಲಿದ್ದರೆ ಎಎಪಿ ಹಾಗೂ ಪಕ್ಷೇತರರನ್ನು ಮೀರಿ 1,642 ಮತಗಳನ್ನು ಪಡೆದ ನೋಟಾ ಐದನೇ ಸ್ಥಾನದಲ್ಲಿದೆ.

ಗದಗ ಜಿಲ್ಲೆಯ ಬಹುತೇಕ ಮತದಾರರು ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷಗಳಲ್ಲಿನ ಭ್ರಷ್ಟಾಚಾರ,
ಕಚ್ಚಾಟ, ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುವುದರಿಂದ ಬೇಸತ್ತ ಅನೇಕ ಮತದಾರರು ಯಾವುದೇ ಅಭ್ಯರ್ಥಿಗಳಿಗೆ ಮತ
ಹಾಕದೇ ನೋಟಾಕ್ಕೆ ಮತ ಚಲಾಯಿಸಿದ್ದಾರೆ. ಇನ್ನಾದರೂ ರಾಷ್ಟ್ರೀಯ ಪಕ್ಷಗಳು ಸೇರಿ ಇತರೆ ಪಕ್ಷಗಳು ಜನರ ನಾಡಿಮಿಡಿತ ಅರಿತು ಆಡಳಿತ ನಡೆಸಬೇಕು ಎನ್ನುವ ಮುನ್ಸೂಚನೆಯ ಸಂದೇಶವನ್ನು ನೋಟಾಕ್ಕೆ ಮತ ಚಲಾಯಿಸಿದ ಮತದಾರರು ರವಾನಿಸಿದ್ದಾರೆ.
ಎಸ್‌.ಬಿ. ಮಹೇಶ
ಸಾಮಾಜಿಕ ಕಾರ್ಯಕರ್ತ

ಅರುಣಕುಮಾರ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next