Advertisement

Karnataka Election ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಖೂಬಾ ಕೆಂಡಾಮಂಡಲ

03:36 PM Apr 23, 2023 | Team Udayavani |

ಕಲಬುರಗಿ: ರಾಜ್ಯದಲ್ಲಿ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪವೇ ವೀರಶೈವ ಲಿಂಗಾಯತರನ್ನು ಅವರೆಷ್ಟು ಕನಿಷ್ಠವಾಗಿ ಕಾಣುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದು ಜನ ಇದರ ವಿರುದ್ಧ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಇಂತಹದೇ ಒಂದು ಕುಚೋದ್ಯವಾದ ಹೇಳಿಕೆಯನ್ನು ನೀಡುವ ಮುಖಾಂತರ ಮತ್ತು ವೀರಶೈವ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನದ ಭಾಗವಾಗಿ 2018 ರಲ್ಲಿ ಜನರಿಂದ ತಿರಸ್ಕಾರ ಮಾಡಲ್ಪಟ್ಟಿದ್ದರು. ಈಗ ಪುನಃ ಅಂತದೇ ಮಾತನಾಡುವ ಮುಖಾಂತರ ಈ ಚುನಾವಣೆಯಲ್ಲೂ ಮತ್ತೊಮ್ಮೆ ಅವರು ಜನರಿಂದ ತಿರಸ್ಕಾರಕ್ಕೆ ಒಳಗಾಗಲಿದ್ದಾರೆ ಎಂದರು.

ಸಿದ್ದರಾಮಯ್ಯ ಅವರು ಮೊದಲು ತಮ್ಮ ಪಕ್ಷದೊಳಗಿನ ಬೆಗುದಿ ಮತ್ತು ತಮ್ಮ ಸರಕಾರದ ಅವಧಿಯಲ್ಲಿ ನಡೆದ ಅರ್ಕಾವತಿ ಬಡಾವಣೆ, ಸಾಕ್ಸ್ ಖರೀದಿ ಹಗರಣ, ಡೆಸ್ಕ್ ಹಗರಣ, ಬಿಬಿಎಂಪಿ ಹಗರಣ,ಅಕ್ರಮ ಮರಳುಗಾರಿಕೆ ಸೇರಿದಂತೆ ಹಲವಾರು ಹಗರಣಗಳ ಕುರಿತು ಜನರಿಗೆ ಮೊದಲು ತಿಳಿಸಲಿ. ನಂತರ ನಮ್ಮ ಸರ್ಕಾರದ ಭ್ರಷ್ಟತೆ, ಮುಖ್ಯಮಂತ್ರಿಗಳ ಭ್ರಷ್ಟತೆ ಕುರಿತು ಮಾತನಾಡಲಿ ಎಂದರು.

ರಾಜ್ಯದಲ್ಲಿ ಲಿಂಗಾಯತರಿಗೆ 47 ಸ್ಥಾನಗಳನ್ನು ಹೊರತು ಪಡಿಸಿ ಹೆಚ್ಚು ಟಿಕೆಟ್ ನೀಡಲಿಕ್ಕಾಗದ ಕಾಂಗ್ರೆಸ್, ಬಿಜೆಪಿಯ ಕುರಿತು ಮಾತನಾಡುವ ಮತ್ತು ಲಿಂಗಾಯತರ ಕುರಿತು ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದ ಖುಬಾ, ನಾವು 63 ಜನ ಲಿಂಗಾಯತರಿಗೆ ಟಿಕೆಟ್ ನೀಡಿದ್ದೇವೆ ಎಂದರು.

ಸ್ವಾಮಿ ರಾಜ್ಯದ ಜನತೆಗೆ ನೀವು ನೀಡಿರುವ ಭ ಭರವಸೆಯ ಗ್ಯಾರಂಟಿ ಕಾರ್ಡುಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂದು ಛೇಡಿಸಿದ ಅವರು, ನಿಜವಾಗಲೂ ನಿಮಗೆ ತಾಕತ್ತು ಮತ್ತು ಧಮ್ ಇದ್ದರೆ ನಾವು ರದ್ದು ಮಾಡಿರುವ ಮುಸ್ಲಿಮರ ಶೇ 4 ರ ಮೀಸಲಾತಿಯನ್ನು ಹೇಗೆ ಸರಿಪಡಿಸುತ್ತೀರಿ ಎನ್ನುವುದು ಕೂಡ ನಿಮ್ಮ ಪ್ರಣಾಳಿಕೆಯಲ್ಲಿ ಜಗಜ್ಜಾಹೀರು ಮಾಡಿದೆ ಎಂದು ಪ್ರಶ್ನಿಸಿದರು.

Advertisement

ಒಂದು ವೇಳೆ ನಾವು ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿರುವ ಮೀಸಲಾತಿಯನ್ನು ಮುಟ್ಟಲು ಬಂದರೆ ರಾಜ್ಯದ ಜನತೆ ಮತ್ತು ವೀರಶೈವ ಲಿಂಗಾಯತರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಅಶೋಕ್ ಬಗಲಿ, ದಯಾಗನ್ ಧಾರವಾಡಕರ್ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next