ಚಿಕ್ಕಮಗಳೂರು: ರಾಜ್ಯದಲ್ಲಿ ಚುನಾವಣ ಪ್ರಚಾರದ ಭರಾಟೆ ತೀವ್ರವಾಗಿರುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶೃಂಗೇರಿಯಲ್ಲಿ ಚಂಡಿಕಾಯಾಗ ನಡೆಸುತ್ತಿದ್ದಾರೆ. 10ಕ್ಕೂ ಹೆಚ್ಚು ಪುರೋಹಿತರು ಯಾಗದ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದಾರೆ.
ಕುಟುಂಬ ಸಮೇತ ಆಗಮಿಸಿರುವ ಡಿ.ಕೆ.ಶಿವಕುಮಾರ್ ಅವರು ಶನಿವಾರ ಸಂಜೆ ಯಾಗಕ್ಕೆ ಸಂಕಲ್ಪ ಮಾಡಲಿದ್ದು ಭಾನುವಾರ ಮಧ್ಯಾಹ್ನದವರೆಗೂ ಶೃಂಗೇರಿಯಲ್ಲೇ ಇದ್ದು ಯಾಗದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ 2018ರಲ್ಲಿ 11 ದಿನಗಳ ಕಾಲ ಅತಿರುದ್ರ ಮಹಾಯಾಗ ನಡೆಸಿದ್ದರು. ಆ ಬಳಿಕ ನಡೆದ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು.
ಸ್ವಂತಕ್ಕೆ ಏನಿದೆ?
ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶಕರಾದ ಸಿ.ಎಸ್.ದ್ವಾರಕಾನಾಥ್ ಅವರು ಶೃಂಗೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಡಿ.ಕೆ.ಶಿವಕುಮಾರ್ ಅವರಿಗೆ ಸ್ವಂತಕ್ಕೆ ಏನಿದೆ, ಪ್ರಜಾಕ್ಷೇಮವೇ ಅವರ ಬಾಳು, ಅದನ್ನೇ ಪ್ರಾರ್ಥಿಸಲು ಬಂದಿದ್ದಾರೆ. ಚುನಾವಣೆಯಲ್ಲಿ ಯಾವ ಗಲಭೆಗಳಾಗದಿರಲಿ, ಎಲ್ಲರೂ ಚೆನ್ನಾಗಿರಲೆಂದು ಪ್ರಾರ್ಥಿಸಲು ಬಂದಿದ್ದಾರೆ. ಪೂಜೆಯಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಶೃಂಗೇರಿ ಪೀಠದಲ್ಲಿ ಯಾರಿಗೂ, ಯಾವ ಕಟ್ಟುನಿಟ್ಟುಗಳಿಲ್ಲ.ಗುರುಗಳ ಅಪ್ಪಣೆ ಪಡೆದು ಯಾರು, ಯಾವ ಒಳ್ಳೆ ಕೆಲಸ ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ.