Advertisement
ಗೋಕಾಕ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಿಂಗಾಯತ ಪಂಚಮಸಾಲಿ ಸಮಾಜದ ಡಾ| ಮಹಾಂತೇಶ ಕಡಾಡಿ ಹೆಸರು ಅಂತಿಮವಾಗಿದೆ. ಇದು ಬಹುಶಃ ಯಾರೂ ನಿರೀಕ್ಷೆ ಮಾಡಲಾರದ ಸುದ್ದಿ. ಕಳೆದ ಒಂದು ವರ್ಷದಿಂದ ಈ ಕ್ಷೇತ್ರದಲ್ಲಿ ಅಶೋಕ ಪೂಜಾರಿ ಹೆಸರು ಬಿಟ್ಟು ಬೇರೆ ಯಾವ ಹೆಸರೂ ಕೇಳಿ ಬಂದಿರಲಿಲ್ಲ. ಟಿಕೆಟ್ ಕೊಡುತ್ತೇವೆಂಬ ಕರಾರಿನ ಮೇಲೆಯೇ ಬಂದಿದ್ದ ಪೂಜಾರಿ ಸಹ ಒಂದು ವರ್ಷದಿಂದ ಕ್ಷೇತ್ರದಲ್ಲಿ ಬಹಳ ಜೋರಾಗಿ ಓಡಾಡಿದ್ದರು. ನನಗೇ ಟಿಕೆಟ್ ಎಂದು ಎಲ್ಲರ ಎದುರು ವಿಶ್ವಾಸದಿಂದ ಹೇಳಿದ್ದರು.
Related Articles
Advertisement
ಗೋಕಾಕ ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ “ಪ್ರಜಾಧ್ವನಿ’ ಯಾತ್ರೆ ಮೂರು ಬಾರಿ ರದ್ದಾಗಿದ್ದು, ಅವರು ಕ್ಷೇತ್ರಕ್ಕೆ ಬರದಂತೆ ನೋಡಿಕೊಂಡಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಈಗ ಅಶೋಕ ಪೂಜಾರಿ ಅವರಿಗೆ ಟಿಕೆಟ್ ತಪ್ಪಿಸುವ ಮೂಲಕ ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಅಶೋಕ ಪೂಜಾರಿ ಅವರ ಹೆಸರು ಪಟ್ಟಿಯಿಂದ ಹಾರುವುದರ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಪ್ರಯತ್ನ ಬಹಳ ಕೆಲಸ ಮಾಡಿದೆ. ಇಲ್ಲಿಯೂ ಸಹ ಜಾರಕಿಹೊಳಿ ಸಹೋದರರು ಮತ್ತು ಬಿಜೆಪಿಯ ಪ್ರಭಾವಿ ನಾಯಕರ ಕಡೆ ಅನುಮಾನದಿಂದ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಜತೆಗೆ ಕಳೆದ ನಾಲ್ಕೈದು ತಿಂಗಳಿಂದ ಅಶೋಕ ಪೂಜಾರಿ ವಿರುದ್ಧ ವ್ಯವಸ್ಥಿ§ತವಾಗಿ ಕೆಲಸ ಮಾಡುತ್ತಿದ್ದ ಶಕ್ತಿಗಳ ಶ್ರಮಕ್ಕೆ ಈಗ ಫಲ ಸಿಕ್ಕಿದೆ.
ಮೊದಲೇ ಅನುಮಾನವಿತ್ತೆ?: ಅಶೋಕ ಪೂಜಾರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೆಟ್ ಸಿಗದಂತೆ ನೋಡಿಕೊಳ್ಳಬೇಕೆಂದು ಕೆಲವು ನಾಯಕರು ಹಗಲು ರಾತ್ರಿ ಓಡಾಡಿದ್ದರು. ಇದರಲ್ಲಿ ಬಿಜೆಪಿ ನಾಯಕರೇ ಹೆಚ್ಚಾಗಿದ್ದುದು ವಿಶೇಷ. ಇದೇ ನಾಯಕರು ಗೋಕಾಕ ಕ್ಷೇತ್ರದಲ್ಲಿ ಸಿದ್ದರಾ ಮಯ್ಯ ಅವರ ಕಾರ್ಯಕ್ರಮ ನಡೆಯದಂತೆ ನೋಡಿ ಕೊಂಡರು. “ಪ್ರಜಾಧ್ವನಿ’ ಯಾತ್ರೆ ಮೂಲಕ ಬೆಳಗಾವಿ ಜಿಲ್ಲೆಗೆ ಸಿದ್ದರಾ ಮಯ್ಯ ಮೂರು ಬಾರಿ ಬಂದರೂ ಗೋಕಾಕ ಕ್ಷೇತ್ರದ ಕಡೆ ತಲೆ ಹಾಕಲಿಲ್ಲ. ಇವೆಲ್ಲದರ ಹಿಂದೆ ಅಶೋಕ ಪೂಜಾರಿ ಅವರಿಗೆ ಟಿಕೆಟ್ ತಪ್ಪಿಸಬೇಕು. ನಾವು ಹೇಳಿದಂತೆ ನಡೆಯ ಬೇಕೆಂಬ ಕುತಂತ್ರವಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಇನ್ನೊಂದು ಮೂಲಗಳ ಪ್ರಕಾರ ಈ ವಿಷಯದಲ್ಲಿ ಸತೀಶ್‌ಜಾರಕಿಹೊಳಿ ಅವರ ಮೌನ ಅಶೋಕ ಪೂಜಾರಿ ಅವರ ಬೆಂಬಲಿಗರಿಗೆ ನೋವು ತಂದಿದೆ. ಈ ಹಿಂದೆ ಸಹೋದರ ಲಖನ್ ಜಾರಕಿಹೊಳಿ ಟಿಕೆಟ್ ವಿಷಯದಲ್ಲಿ ಗಟ್ಟಿಯಾಗಿ ಪಟ್ಟು ಹಿಡಿದಿದ್ದ ಸತೀಶ್ ಅವರು ಈಗ ಮಾತ್ರ ಸುಮ್ಮನಾಗಿರುವುದು ಅನುಮಾನ ಪಡುವಂತೆ ಮಾಡಿದೆ.
ಹಾಗೆ ನೋಡಿದರೆ ವೃತ್ತಿಯಿಂದ ವೈದ್ಯರಾಗಿರುವ ಮಹಾಂತೇಶ ಕಡಾಡಿ ಅವರ ಹೆಸರನ್ನು ಯಾರೂ ನಿರೀಕ್ಷೆ ಮಾಡಿರಲೇ ಇಲ್ಲ. ಮೇಲಾಗಿ ಕಡಾಡಿ ಸಹ ರಾಜಕೀಯ ಕ್ಷೇತ್ರಕ್ಕೆ ಅಪರಿಚಿತರು. ಅನುಭವ ಅಷ್ಟಕಷ್ಟೇ. ಆದರೆ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರೆಂಬ ಬಲವಿದೆ. ಮೊದಲು ಅರಭಾವಿ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಮಹಾಂತೇಶ ಕಡಾಡಿ ಅವರು ಅನಂತರ ಕೆಲವು ಪ್ರಭಾವಿಗಳ ಸಲಹೆ ಮೇರೆಗೆ ಗೋಕಾಕ ಕಡೆ ತಿರುಗಿದರು. ಇಲ್ಲಿಯೂ ಸಹ ಬಿಜೆಪಿಯ ಕೆಲವು ಪ್ರಭಾವಿ ನಾಯಕರ ಸಲಹೆಗಳು ಕೆಲಸ ಮಾಡಿವೆ.
ಜಾರಕಿಹೊಳಿ ಕುಟುಂಬದ ವಿರುದ್ಧ ಮೊದಲ ಬಾರಿಗೆ ಲಿಂಗಾಯತ ಅಸ್ತ್ರ ಪ್ರಯೋಗಿಸಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕಡಾಡಿ ಅವರ ಜತೆ ಎಷ್ಟು ಒಂದಾಗಿ ಹೋಗುತ್ತದೆ ಎಂಬುದು ಅಷ್ಟೇ ಕುತೂಹಲಕ್ಕೂ ಕಾರಣವಾಗಿದೆ.
ಟಿಕೆಟ್ ಕೈತಪ್ಪಿರುವುದಕ್ಕೆ ಬಹಳ ನಿರಾಸೆಯಾಗಿದೆ. ಪಕ್ಷದ ನಾಯಕರೇ ಟಿಕೆಟ್ ಕೊಡುವುದು ಖಚಿತ. ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ಹೇಳಿದ್ದರು. ಅದರಂತೆ ಪಕ್ಷದ ಕೆಲಸ ಮಾಡುತ್ತಿದ್ದೆ. ಟಿಕೆಟ್‌ಗಾಗಿ ಯಾವುದೇ ಲಾಬಿ ಮಾಡಲಿಲ್ಲ. ಸಹಜವಾಗಿಯೇ ನಮ್ಮ ಬೆಂಬಲಿಗರಿಗೆ ನೋವಾಗಿದೆ. ಸದ್ಯ ಯಾವುದೇ ನಿರ್ಧಾರ ಮಾಡಿಲ್ಲ. ಸೋಮವಾರ ಬೆಂಬಲಿಗರ ಸಭೆ ಕರೆದಿದ್ದೇನೆ. ಅನಂತರ ಮುಂದಿನ ತೀರ್ಮಾನ ಮಾಡುತ್ತೇನೆ.– ಅಶೋಕ ಪೂಜಾರಿ, ಕಾಂಗ್ರೆಸ್ ಮುಖಂಡ – ಕೇಶವ ಆದಿ