Advertisement

Mangalore; ಚುನಾವಣೆ ಕೆಲಸಕ್ಕೆ ಬರಲೊಪ್ಪದ ಟ್ಯಾಕ್ಸಿ ಡ್ರೈವರ್‌, ವೀಡಿಯೋಗ್ರಾಫ‌ರ್‌ಗಳು !

11:03 AM Apr 20, 2023 | Team Udayavani |

ಮಂಗಳೂರು: ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳು ಬೆನ್ನು ಬೀಳುವುದು ಟ್ಯಾಕ್ಸಿಯವರದ್ದು ಹಾಗೂ ವೀಡಿಯೋ ಗ್ರಾಫರ್‌ಗಳದ್ದು ! ಟ್ಯಾಕ್ಸಿಯವರು ವಿವಿಧ ಚುನಾವಣ ಅಧಿಕಾರಿಗಳು ಹಾಗೂ ಸಿಬಂದಿಯ ಸಾಗಾಟಕ್ಕೆ ತಮ್ಮ ವಾಹನಗಳನ್ನು ನೀಡಬೇಕಾಗುತ್ತದೆ. ಅದೇ ರೀತಿ ಚುನಾವಣೆ ಪಾರದರ್ಶಕವಾಗಿ ನಡೆಯುವ ಹಾಗೂ ಪ್ರತೀ ಹಂತಗಳನ್ನು ದಾಖಲೀಕರಣ ಮಾಡಬೇಕಾದ್ದರಿಂದ ವೀಡಿಯೋ ಚಿತ್ರೀಕರಣ ನಡೆಸುವ ಅನಿವಾರ್ಯ ಚುನಾವಣ ಆಯೋಗಕ್ಕಿರುತ್ತದೆ.

Advertisement

ಈ ಉದ್ದೇಶದಿಂದ ಪ್ರತೀ ಬಾರಿ ವೀಡಿಯೋಗ್ರಾಫರ್‌ಗಳ, ವೀಡಿಯೋ ಕೆಮರಾಗಳ ಹುಡುಕಾಟ ನಡೆಯುತ್ತದೆ. ಆರಂಭದ ಕೆಲವು ಚುನಾವಣೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ವೀಡಿಯೋಗ್ರಾಫರ್‌ಗಳು ಅದರಲ್ಲಿ ಸಿಗುವ ಆದಾಯ ಕಡಿಮೆಯಾದ್ದರಿಂದ ಮತ್ತು ಅವರಿಗೆ ಇತರ ಕಾರ್ಯಕ್ರಮಗಳಲ್ಲಿ ಹೆಚ್ಚು ಆದಾಯ ಸಿಗುವ ಸೀಸನ್‌ನಲ್ಲೇ ಚುನಾವಣೆ ಬರುವುದರಿಂದ ನಿಧಾನವಾಗಿ
ಹಿಂದೆ ಸರಿಯತೊಡಗಿದರು.

ಕೆಲವು ದಿನಗಳ ಹಿಂದೆ ಇ-ಟೆಂಡರ್‌ ಮೂಲಕವಾಗಿ ವೀಡಿಯೋಗ್ರಾಫರ್‌ಗಳನ್ನು, ವೀಡಿಯೋ ಕೆಮರಾಗಳನ್ನು ಚುನಾವಣ
ಪ್ರಕ್ರಿಯೆಗಾಗಿ ಆಹ್ವಾನಿಸಲಾಗಿದೆ. ಆದರೆ ಇದಕ್ಕೆ ಬಂದ ಸ್ಪಂದನೆ ಅತ್ಯಲ್ಪವಾಗಿರುವುದು ಇಲಾಖೆಗೆ ಸವಾಲಾಗಿದೆ. ಹೀಗಾಗಿ ಈಗ
ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳೇ ತಮ್ಮ ವ್ಯಾಪ್ತಿಯಲ್ಲಿ ವೀಡಿಯೋ ಕೆಮರಾಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ವೀಡಿಯೋಗ್ರಾಫರ್‌ಗಳೇ ಅಧಿಕಾರಿಗಳ ಜತೆ ತೆರಳಿ ಶೂಟಿಂಗ್‌ ಮಾಡಿಕೊಟ್ಟರೆ 1,600 ರೂ. ಹಾಗೂ ಕೆಮರಾ ಬಾಡಿಗೆಗೆ ಆದರೆ 500 ರೂ. ಎಂದು ನಿಗದಿಪಡಿಸಲಾಗಿದೆ. ಅಧಿಕಾರಿಗಳ ಜತೆ ಎಷ್ಟು ಹೊತ್ತು ಕೆಲಸ ಮಾಡಬೇಕು ಎನ್ನುವ ಬಗ್ಗೆ ಖಚಿತತೆ ಇಲ್ಲದಿರುವುದು ಮತ್ತು ಆದಾಯ ಕಡಿಮೆ ಇರುವ ಕಾರಣ ವೀಡಿಯೋ ಗ್ರಾಫರ್‌ಗಳು ಸುಲಭವಾಗಿ ಒಪ್ಪುತ್ತಿಲ್ಲ.

ಸಾಮಾನ್ಯವಾಗಿ 1,860 ಬೂತ್‌ಗಳು, ಸರ್ವೇಲೆನ್ಸ್‌ ಟೀಂ, ಚೆಕ್‌ಪೋಸ್ಟ್‌, 243 ಫ್ಲೈಯಿಂಗ್‌ ಸ್ಕ್ವಾಡ್ಸ್ , 243 ಸ್ಟಾಟಿಕ್‌‌ ಸರ್ವೆಲೆನ್ಸ್‌ ಟೀಂಗಳಿಗೆ ವೀಡಿಯೋ ಕೆಮರಾದ ಆವಶ್ಯಕತೆ ಇರುತ್ತದೆ. ಯಾವುದೇ ವಾಹನ, ವ್ಯಕ್ತಿಯ ತಪಾಸಣೆ ವೇಳೆ ವೀಡಿಯೋ ಮೂಲಕ ದಾಖಲೀಕರಣದ ಅಗತ್ಯವಿರುತ್ತದೆ. ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಎಂದರೆ ಮುಂದಿನ ಸುಮಾರು 25 ದಿನಗಳ ಕಾಲವೂ ವೀಡಿಯೋ ನೆರವು ಬೇಕಿದೆ. ಕೆಲವು ಬೂತ್‌ಗಳಿಗೆ ವೆಬ್‌ಕೆಮರಾ ಅಳವಡಿಸಿ ವೆಬ್‌ ಕಾಸ್ಟಿಂಗ್‌ ನಡೆಸುವುದಕ್ಕೂ ಅವಕಾಶಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next