Advertisement

karnataka election 2023; ಮೂವರಿಗೂ ಮಣೆ ಹಾಕಿದ ಕ್ಷೇತ್ರ !

05:16 PM Apr 12, 2023 | Team Udayavani |

ಮಂಗಳೂರು: ಜೈನಕಾಶಿ ಎಂದೇ ಪ್ರಸಿದ್ಧ ವಾಗಿರುವ ಮೂಡುಬಿದಿರೆ ತನ್ನದೇ ಆದ ವೈಶಿಷ್ಟ್ಯದಿಂದ ರಾಜಕೀಯದಲ್ಲಿಯೂ ಗುರು ತಿಸಿಕೊಂಡಿರುವ ಕ್ಷೇತ್ರ.

Advertisement

1957ರಲ್ಲಿ ಮೈಸೂರು ವಿಧಾನಸಭೆಗೆ ಚುನಾವಣೆ ನಡೆದಾಗ ಮೂಡುಬಿದಿರೆ ಕ್ಷೇತ್ರ ಅಸ್ತಿತ್ವದಲ್ಲಿರಲಿಲ್ಲ. ಮೂಡುಬಿದಿರೆಯನ್ನು ಒಳಗೊಂಡಿದ್ದ ಕಾರ್ಕಳ ದ್ವಿಸದಸ್ಯ ಕ್ಷೇತ್ರ ವಾಗಿತ್ತು. 1962ರಲ್ಲಿ ಮೂಡುಬಿದಿರೆ ಕ್ಷೇತ್ರ ರಚನೆಗೊಂಡು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. 1967ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾವಣೆಗೊಂಡಿತು.

ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜನತಾದಳ ಮತ್ತು ಬಿಜೆಪಿಗೆ ಮಣೆ ಹಾಕಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ನೇರ ಹಣಾ ಹಣಿಗೆ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ.

ಬಿಜೆಪಿಗೆ ಮೊದಲ ಗೆಲುವು
ಕೆ. ಅಮರನಾಥ ಶೆಟ್ಟಿ ಅವರು ಸತತ 10 ಬಾರಿ ಸ್ಪರ್ಧಿಸಿ ಮೂರು ಬಾರಿ ಗೆಲುವು ಸಾಧಿಸಿದ್ದರು. ಅಮರನಾಥ ಶೆಟ್ಟಿ ಅವರು 1972ರಲ್ಲಿ ಕಾಂಗ್ರೆಸ್‌ (ಒ), 1978, 1983, 1985ರಲ್ಲಿ ಜನತಾ ಪಾರ್ಟಿಯಿಂದ, 1989, 1994ರಲ್ಲಿ ಜನತಾದಳ, 1999ರಲ್ಲಿ ಜೆಡಿಯು- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ, 2004, 2008 ಮತ್ತು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಕೆ. ಅಭಯಚಂದ್ರ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಅನಂತರ ಕಾಂಗ್ರೆಸ್‌ನಿಂದ 1999ರಿಂದ ಸತತವಾಗಿ ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಜಯಭೇರಿ ಸಾಧಿಸಿತು. ಬಿಜೆಪಿಯ ಉಮಾನಾಥ ಕೋಟ್ಯಾನ್‌ ಅವರು ಕಾಂಗ್ರೆಸ್‌ನ ಕೆ. ಅಭಯಚಂದ್ರ ಅವರನ್ನು 29,799 ಮತಗಳಿಂದ ಮಣಿಸಿದ್ದರು.

ಜನತಾದಳದ ನೆಲೆ
ಕರಾವಳಿಯಲ್ಲಿ ಜನತಾದಳ/ ಜೆಡಿಎಸ್‌ಗೆ ಗಟ್ಟಿ ನೆಲೆ ಇದ್ದ ಏಕೈಕ ಕ್ಷೇತ್ರ ಮೂಡುಬಿದಿರೆ. ಅಮರನಾಥ ಶೆಟ್ಟಿ ಅವರು 1983 ಮತ್ತು 1985ರಲ್ಲಿ ಜನತಾಪಾರ್ಟಿಯಿಂದ ಗೆಲುವು ಸಾಧಿಸಿದ್ದರು. 1994ರಲ್ಲಿ ಜನತಾದಳದಿಂದ ಜಯ ಗಳಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿ 2004ರಲ್ಲಿ 26,977 ದ್ವಿತೀಯ ಸ್ಥಾನ, 2008ರಲ್ಲಿ 26,083 ಮತ ಗಳಿಸಿ ಹಾಗೂ 2013ರಲ್ಲಿ 20,381 ಮತ ಗಳಿಸಿ ತೃತೀಯ ಸ್ಥಾನ ಪಡೆದಿದ್ದರು. 2018ರಲ್ಲಿ ಜೆಡಿಎಸ್‌ನಿಂದ ಜೀವನ್‌ ಕೃಷ್ಣ ಶೆಟ್ಟಿ ಅವರು ಸ್ಪರ್ಧಿಸಿ 1,845 ಮತ ಗಳಿಸಿ ನಾಲ್ಕನೇ ಸ್ಥಾನ ಪಡೆದಿದ್ದರು. ಈ ಬಾರಿ ಜೆಡಿಎಸ್‌ ಅಭ್ಯರ್ಥಿ ಇದುವರೆಗೆ ಘೋಷಣೆಯಾಗಿಲ್ಲ.

Advertisement

ಈ ಕ್ಷೇತ್ರದಲ್ಲಿ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನಂತರದ ಸ್ಥಾನದಲ್ಲಿ ಬಂಟರು, ಜೈನರು, ಮುಸ್ಲಿಮರು, ಕ್ರೈಸ್ತರಿದ್ದಾರೆ. ಕಳೆದ ಬಾರಿ ಕ್ಷೇತ್ರದ ಬಿಜೆಪಿಯ ಪ್ರಥಮ ಶಾಸಕನಾಗಿ ಆಯ್ಕೆಯಾಗಿದ್ದ ಉಮಾನಾಥ ಕೋಟ್ಯಾನ್‌ ಬಿಲ್ಲವರು. ಕೆ.ಅಭಯಚಂದ್ರ ಅವರು ಜೈನ ಧರ್ಮದವರು.

ಉನ್ನತ ಸ್ಥಾನಮಾನ
ಈ ಕ್ಷೇತ್ರದ ಮೂವರಿಗೆ ಸಚಿವ ಸ್ಥಾನ ಪ್ರಾಪ್ತಿಯಾಗಿದೆ. ಡಾ| ದಾಮೋದರ ಮೂಲ್ಕಿ, ಕೆ. ಅಮರನಾಥ ಶೆಟ್ಟಿ ಮತ್ತು ಕೆ. ಅಭಯಚಂದ್ರ ಅವರು ರಾಜ್ಯ ಸರಕಾರದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಬಾರಿ ಹೊಸಮುಖ
ಕಾಂಗ್ರೆಸ್‌ನಿಂದ ಅಭಯಚಂದ್ರ ಅವರು ನಿರಂತರವಾಗಿ ಸ್ಪರ್ಧಿಸಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಹೊಸ ಮುಖ ಮಿಥುನ್‌ ರೈ ಅವರನ್ನು ಕಣಕ್ಕಿಳಿಸಿದೆ.

-  ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next