ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರು ಗುರುವಾರ (ಎ.20) ತಮ್ಮ ಅಪಾರ ಬೆಂಬಲಿಗರ ಜತೆಗೂಡಿ ಬಂದು ನಾಮಪತ್ರ ಸಲ್ಲಿಸಿದರು.
ನಾವು ಯಾವುದೇ ವೈಮನಸ್ಸಿಲ್ಲದೆ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಜನರ ಒಲವು ಈ ಬಾರಿ ಕಾಂಗ್ರೆಸ್ ಪರ ಇದೆ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಚುನಾವಣಾಧಿಕಾರಿ ಕೆಂಪೇಗೌಡ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಕಾರ್ಯಕರ್ತರು, ಅಭಿಮಾನಿಗಳ ಸಂಖ್ಯೆ ನೋಡಿ ತುಂಬಾ ಖುಷಿಯಾಗಿದೆ. ಮಾಜಿ ಶಾಸಕನಾಗಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಇನ್ನೂ ಜನಮಾನಸದಲ್ಲಿದ್ದು ಆ ಕಾರಣದಿಂದ ನನ್ನ ಕ್ಷೇತ್ರದ ನನ್ನನ್ನು ಗೆಲ್ಲಿಸುತ್ತಾರೆಂಬ ನಂಬಿಕೆ ಜನರು ಹಾಗೂ ಭಗವಂತನ ಮೇಲಿದೆ ಎಂದರು.
ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ, ಮುಖಂಡರಾದ ಬಿ.ಪಿ. ಹರೀಶ್ ಕುಮಾರ್, ಶಶಿಧರ್ ಹೆಗ್ಡೆ, ಮುಹಮ್ಮದ್ ನವಾಝ್ ಹಾಜರಿದ್ದರು.
ನಾಮಪತ್ರ ಸಲ್ಲಿಕೆಗೆ ಮುನ್ನ ಮಂಗಳಾದೇವಿಯ ಶ್ರೀ ಮಹತೋಭಾರ ಕ್ಷೇತ್ರ, ಕದ್ರಿಯ ಶ್ರೀ ಮಂಜುನಾಥ ಕ್ಷೇತ್ರ, ಬಿಕರ್ನಕಟ್ಟೆಯ ಇನ್-ಂಟ್ ಜೀಸಸ್ ದೇವಾಲಯ, ಮಂಗಳೂರಿನ ಬಿಷಪ್ ಹೌಸ್, ರಥಬೀದಿಯ ವೆಂಕಟರಮಣ ದೇವಸ್ಥಾನ, ಬಂದರಿನ ಝೀನತ್ ಭಕ್ಷ್ ಜುಮ್ಮಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಜತೆ ವಿಶೇಷ ಪೂಜೆ ಸಲ್ಲಿಸಿದರು.