ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಬುಧವಾರ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಮಿನಿವಿಧಾನಸೌಧಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಕೋಡಿಂಬಾಡಿ ಶ್ರೀ ಮಹಿಷಮರ್ದಿನಿ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ದರ್ಬೆಯಿಂದ ಮೆರವಣಿಗೆ ಮೂಲಕ ಸಾಗಿ ಕಿಲ್ಲೆ ಮೈದಾನದಲ್ಲಿ ಸಭೆ ನಡೆಯಿತು.
ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಅನ್ನುವುದು ಒಂದು ಕುಟುಂಬ ಇದ್ದ ಹಾಗೆ. ಇಲ್ಲಿ ಕಾರ್ಯಕರ್ತರೇ ಆಸ್ತಿ. ತನ್ನನ್ನು ಗೆಲ್ಲಿಸಿದಲ್ಲಿ ಅವರ ಭಾವನೆಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತೇನೆ. ಬಡವರ ಪರವಾಗಿರುವ ಧೋರಣೆಯನ್ನು ಆಡಳಿತದ ಮೂಲಕ ಅನುಷ್ಠಾನಿಸುತ್ತೇನೆ ಎಂದರು.
ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಮಾತನಾಡಿ, ಪ್ರತೀ ಯೋಜನೆಯಲ್ಲಿಯು ಕಮಿಷನ್ ದಂಧೆ ನಡೆಸಿದ ಬಿಜೆಪಿ ಸರಕಾರವನ್ನು ಕಿತ್ತೂಗೆದು ಹಿಂದೆ ಜನಪರ ಆಡಳಿತ ನೀಡಿದ ಕಾಂಗ್ರೆಸ್ ಸರಕಾರವನ್ನು ಮರಳಿ ತರಲು ಜನ ನಿಶ್ಚಯ ಮಾಡಿದ್ದಾರೆ. ಅಶೋಕ್ ಕುಮಾರ್ ರೈ ಅವರನ್ನು ಗೆಲ್ಲಿಸುವ ಮೂಲಕ ಈ ಭಾಗದಲ್ಲಿಯು ಜನಪರ ಕಾರ್ಯ ಅನುಷ್ಠಾನ ಸಾಧ್ಯವಾಗಲಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಇಲ್ಲಿ ಎಲ್ಲರೂ ಒಂದಾಗಿ ಪಕ್ಷವನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಅಶೋಕ್ ರೈ ಅವರನ್ನು ಗೆಲ್ಲಿಸುವ ಮೂಲಕ ಪುತ್ತೂರಿನಲ್ಲಿ ಕಾಂಗ್ರೆಸ್ ಧ್ವಜ ಅರಳಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಶಿಭಾ ರಾಮಚಂದ್ರನ್, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಜಿಲ್ಲಾ ಯುವಕ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ, ಕೃಪಾ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ , ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ಕೆ.ವಿ.ರಾಜರಾಮ್, ಪುತ್ತೂರು, ವಿಟ್ಲ ಬ್ಲಾಕ್ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.