Advertisement
1952ರಲ್ಲಿ ಮದ್ರಾಸ್ ರಾಜ್ಯ ಹಾಗೂ 1957ರಲ್ಲಿ ಮೈಸೂರು ರಾಜ್ಯ ವ್ಯಾಪ್ತಿಯಲ್ಲಿ ಚುನಾವಣೆಯನ್ನು ಕಡಿರುವ ಪುತ್ತೂರು ಆಗ ಸುಳ್ಯವನ್ನು ಒಳಗೊಂಡ ದ್ವಿ- ಸದಸ್ಯ ಕ್ಷೇತ್ರವಾಗಿತ್ತು. ಈ ಎರಡು ಅವಧಿಯಲ್ಲಿ ಸುಳ್ಯ ಪುತ್ತೂರಿನ ಕ್ಷೇತ್ರಕ್ಕೆ ಸೇರಿತ್ತು. 1962ರಲ್ಲಿ ಸುಳ್ಯವು ಪುತ್ತೂರು ಕ್ಷೇತ್ರದಿಂದ ಬೇರ್ಪಟ್ಟು ಪ್ರತ್ಯೇಕ ಕ್ಷೇತ್ರವಾಗಿ ಮೊದಲ ಚುನಾವಣೆ ಎದುರಿಸಿತು. ಪ್ರಸ್ತುತ ಈ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟಿದೆ.
ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ಓರ್ವ ಹಾಗೂ ಉಳಿದ 12 ಅವಧಿಗೆ 12 ಪರಿಶಿಷ್ಟ ಜಾತಿಯ ಸಮುದಾಯದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದರೆ, ಅನಂತರದ ಸ್ಥಾನದಲ್ಲಿ ಪರಿಶಿಷ್ಟ ಜಾತಿ- ಪಂಗಡ, ಮುಸ್ಲಿಂ, ಬಂಟ, ತಮಿಳು ಮತದಾರರಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗಿನ ಚುನಾವಣ ಇತಿಹಾಸ ಅವಲೋಕಿಸಿದರೆ ಇಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಮಾತ್ರ. ಈ ಬಾರಿಯು ಅದೇ ವಾತಾವರಣ ಇದೆ.
Related Articles
ಕಳೆದ ಹನ್ನೆರಡು ಅವಧಿಯಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಿಗೆ ಸಚಿವ ಸಹಿತ ಉನ್ನತ ಸ್ಥಾನಗಳು ಸಿಕ್ಕಿರಲಿಲ್ಲ. 2020ರಲ್ಲಿ ಆರು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಸ್. ಅಂಗಾರ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಆ ಕೊರತೆ ನೀಗಿತು.
Advertisement
ವೇದಿಕೆ ಸಜ್ಜು !ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್‌ನಿಂದ ವಿ. ಕೃಷ್ಣಪ್ಪ, ಬಿಜೆಪಿಯಿಂದ ಭಾಗೀರಥಿ ಮುರುಳ್ಯ ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಇದ್ದು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ನಂದಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಆಮ್ ಆದ್ಮಿಯಿಂದ ಮಾಜಿ ಶಾಸಕಿ ಕೆ. ಕುಶಲ ಅವರ ಪುತ್ರಿ ಸುಮನಾ ಅಖಾಡದಲ್ಲಿದ್ದಾರೆ. - ದಯಾನಂದ ಕಲ್ನಾರು