Advertisement
ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿಯೇ ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರವನ್ನು ನಿಗದಿಪಡಿಸಿದೆ. ವರುಣಾ ಕ್ಷೇತ್ರವನ್ನು ತಂದೆಗಾಗಿ ಬಿಟ್ಟು ಕೊಡಲು ಸಿದ್ಧ ಎಂದು ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಿದ್ದರಾಮಯ್ಯ ಘೋಷಿಸಿದ್ದಾರೆ. ಖುದ್ದು ಸಿದ್ದರಾಮಯ್ಯ ಹೈಕಮಾಂಡ್ ಸೂಚನೆ ಮೇರೆಗೆ ವರುಣಾದಿಂದ ಸ್ಪರ್ಧಿಸಲು ಒಪ್ಪಿಗೆ ನೀಡಿದ್ದಾರೆ. ಒಂದು ಸುತ್ತಿನ ಪ್ರಚಾರವನ್ನು ವರುಣಾ ಕ್ಷೇತ್ರದಲ್ಲಿ ಪೂರ್ಣಗೊಳಿಸಿದ್ದಾರೆ.
ಐದಾರು ತಿಂಗಳುಗಳಿಂದಲೂ ಕೋಲಾರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಸಿದ್ದರಾಮಯ್ಯ ಹಲವಾರು ಸಮೀಕ್ಷೆಗಳನ್ನು ಮಾಡಿಸಿದ್ದರು. ಅಹಿಂದ ಮತದಾರರೇ ನಿರ್ಣಾಯಕವಾಗಿರುವ ಕೋಲಾರ ತಮಗೆ ಅತ್ಯಂತ ಸುರಕ್ಷಿತ ಕ್ಷೇತ್ರ ಎನ್ನುವುದನ್ನು ಹಲವು ಮೂಲಗಳಿಂದ ದೃಢಪಡಿಸಿಕೊಂಡಿದ್ದರು. ಆದರೆ, ಖುದ್ದು ರಾಹುಲ್ ಗಾಂಧಿಯೇ ಕೋಲಾರದಲ್ಲಿನ ಕಾಂಗ್ರೆಸ್ ಗುಂಪುಗಾರಿಕೆ ಮುಳುವಾಗಬಹುದು ಎಂಬ ಸಲಹೆ ಸೂಚನೆ ಮೇರೆಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಗೆಯನ್ನು ಸೂಚಿಸಿದ್ದರು. ಆದರೂ, ಕೋಲಾರದಿಂದಲೂ ಸ್ಪರ್ಧಿಸಲು ಮನಸ್ಸು ಮಾಡಿದ್ದೇನೆ ಎಂದು ಮತ್ತೇ ಕೋಲಾರದಲ್ಲಿ ಪುನರುತ್ಛರಿಸಿದ್ದರು.
Related Articles
ವರುಣಾ ಕ್ಷೇತ್ರ ನಿಗದಿಯಾದ ಮೇಲೂ ಕೋಲಾರದಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದೇನೆ ಎಂಬ ಸಿದ್ದರಾಮಯ್ಯರ ಮಾತು ಕಾಂಗ್ರೆಸ್ ಪಕ್ಷದ ಹಲವು ಹಿರಿಯ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಹಿರಂಗವಾಗಿ ಈ ಕುರಿತು ಹೇಳಿಕೆ ನೀಡಲಿಲ್ಲವಾದರೂ, ಸಿದ್ದರಾಮಯ್ಯರಿಗೆ ಮಾತ್ರ ಎರಡು ಕ್ಷೇತ್ರ ಏಕೆ, ತಮಗೂ ಬೇಕೆಂಬ ಬೇಡಿಕೆ ಕೇಳಿ ಬರುವಂತಾಗಿತ್ತು.
Advertisement
ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸಲಿ ಎಂಬ ವಿಚಾರ ಕಾಂಗ್ರೆಸ್ ಪಕ್ಷದ ವೇದಿಕೆಗಳಲ್ಲಿ ಬಹಿರಂಗವಾಗಿ ಚರ್ಚೆಗೊಳಪಡಲಿಲ್ಲ. ರಾಹುಲ್‌ಗಾಂಧಿಯೇ ಈ ವಿಚಾರವನ್ನು ಇತ್ಯರ್ಥಪಡಿಸಲಿ ಎಂಬ ಇರಾದೆ ಬಹುತೇಕ ಮುಖಂಡರಲ್ಲಿದೆ. ರಾಹುಲ್ ಗಾಂಧಿ ಕೋಲಾರದಿಂದ ಸ್ಪರ್ಧಿಸುವ ಕುರಿತು ಸಿದ್ದರಾಮಯ್ಯರ ಅಂಗಳಕ್ಕೆ ಚೆಂಡು ತಳ್ಳಿ ಸುಮ್ಮನಾಗಿದ್ದರು.
ರಾಹುಲ್‌ಗಾಂಧಿಗೆ ಮನವರಿಕೆತಮ್ಮ ಮುಂದಿರುವ ಮೂರು ಹಾದಿಗಳ ಸಾಧ್ಯತೆಗಳ ಕುರಿತಂತೆ ಸಿದ್ದರಾಮಯ್ಯ ಪಕ್ಷದ ವರಿಷ್ಠ ರಾಹುಲ್‌ಗಾಂಧಿಯೊಂದಿಗೆ ಮನವರಿಕೆಮಾಡಿಕೊಟ್ಟಿದ್ದಾರೆನ್ನಲಾಗಿದೆ. ವರುಣಾ ಕ್ಷೇತ್ರವನ್ನು ತಾವೇನು ಬಯಸಿ ಪಡೆದುಕೊಂಡಿದ್ದಲ್ಲ. ಕೋಲಾರ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ರಾಹುಲ್‌ಗಾಂಧಿ ನೀಡಿದ ಸಲಹೆಯನು °ಪಾಲಿಸಿ ವರುಣಾ ಒಪ್ಪಿಕೊಂಡಿದ್ದೇನೆ. ವರುಣಾ ಜೊತೆಗೆ ತಾವೇ ಘೋಷಿಸಿಕೊಂಡಂತೆ ಕೋಲಾರದಿಂದಲೂ ಸ್ಪರ್ಧಿಸಲು ಒಪ್ಪಿಗೆ ನೀಡಿದರೆ ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರರಿಗೆ ಮೀಸಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದು ಅಸಾಧ್ಯ ಎನಿಸಿದರೆ ತಾವು ಹಿಂದೆ ಬಯಸಿದಂತೆ ಕೋಲಾರದಿಂದ ಮಾತ್ರವೇ ಸ್ಪರ್ಧಿಸುತ್ತೇನೆ, ವರುಣಾದಿಂದ ಯಥಾಪ್ರಕಾರ ಯತೀಂದ್ರ ಸ್ಪರ್ಧಿಸುತ್ತಾರೆಂಬುದನ್ನು ರಾಹುಲ್‌ಗಾಂಧಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆನ್ನಲಾಗಿದೆ. ಕೋಲಾರ ಸ್ಪರ್ಧೆ ಖಚಿತ
ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಅದು ಕೇವಲ ಕೋಲಾರ ಮಾತ್ರವೇ ಅಥವಾ ಕೋಲಾರ ಜೊತೆಗೆ ವರುಣಾ ಸೇರಿಯೇ ಎಂಬುದು ಇತ್ಯರ್ಥವಾಗಬೇಕಷ್ಟೆ.
ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಹವಣಿಸುತ್ತಿರುವ ಬಿಜೆಪಿ ಇನ್ನು ಮೊದಲ ಪಟ್ಟಿಯನ್ನೇ ಘೋಷಿಸಿಲ್ಲ. ಆದ್ದರಿಂದ ಬಿಜೆಪಿ ಮೊದಲ ಪಟ್ಟಿಯನ್ನು ಗಮನಿಸಿ ಕೋಲಾರದಿಂದ ಬಿಜೆಪಿ ಯಾರಿಗೆ ಅವಕಾಶ ನೀಡುತ್ತದೆ ಎಂಬುದರ ಆಧಾರದ ಮೇಲೆ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರ ನಿರ್ಧಾರವಾಗಲಿದೆ. ಬಿಜೆಪಿ ಕೋಲಾರ ಅಭ್ಯರ್ಥಿ ಆಯ್ಕೆಯನ್ನು ಮೊದಲ ಪಟ್ಟಿಯಲ್ಲಿ ಘೋಷಿಸದಿದ್ದರೆ ಸಿದ್ದು ಕೋಲಾರ ಸ್ಪರ್ಧೆ ವಿಚಾರ ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆವಿಗೂ ಮುಂದುವರೆಯುವ ಸಾಧ್ಯತೆ ಇದೆ. ಅಹಿಂದ ಮತದಾರರೇ ಶೇ.75 ರಷ್ಟಿರುವ ಕೋಲಾರದಿಂದ ಗೆಲ್ಲಲು ಸಾಧ್ಯವಾಗಿದ್ದರೆ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ತಮಗೆ ಗೆಲುವು ಸುಲಭವಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡಿರುವ ಸಿದ್ದರಾಮಯ್ಯ, ಬಿಜೆಪಿಯ ಮೊದಲ ಪಟ್ಟಿಗೆ ಕಾಯುತ್ತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಪಕ್ಷದಿಂದ ಅವಕಾಶ ಸಿಗದಿದ್ದರೆ ಕೋಲಾರವನ್ನಷ್ಟೇ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆಂಬುದು ಅವರ ಆಪ್ತವಲಯದಿಂದ ಖಚಿತವಾಗಿದೆ. ಸಿದ್ದುಗೆ ಮೂರು ಆಯ್ಕೆ
ಚುನಾವಣೆ ಎದುರಿಸುವ ಕುರಿತು ಸಿದ್ದರಾಮಯ್ಯರ ಮುಂದೆ ಈಗ ಮೂರು ಪ್ರಮುಖ ದಾರಿಗಳಿವೆ.
1. ಹೈಕಮಾಂಡ್ ಹಿಂದೆ ಸೂಚಿಸಿದಂತೆ ಕೇವಲ ವರುಣಾ ಕ್ಷೇತ್ರದಿಂದ ಮಾತ್ರವೇ ಸ್ಪರ್ಧಿಸುವುದು.
2. ಕೋಲಾರ ಮತ್ತು ವರುಣಾ ಕ್ಷೇತ್ರಗಳಿಂದಲೂ ಚುನಾವಣೆ ಎದುರಿಸುವುದು.
3. ವರುಣಾವನ್ನು ಯಥಾಪ್ರಕಾರ ಪುತ್ರ ಯತೀಂದ್ರರಿಗೆ ಬಿಟ್ಟುಕೊಟ್ಟು ಕೋಲಾರದಿಂದ ಮಾತ್ರ ಚುನಾವಣೆಗೆ ಸ್ಪರ್ಧಿಸುವುದು. ಕೆ.ಎಸ್.ಗಣೇಶ್