Advertisement

karnataka election 2023; ರಾಜನ ಮಗನೇ ರಾಜನಾಗಬೇಕೇ?

04:05 PM Apr 15, 2023 | Team Udayavani |

ಈ ಬಾರಿ ಕ್ಷೇತ್ರ ಪರ್ಯಟನಕ್ಕೆ ಹೊಸ ರೂಪ. ಪ್ರತಿ ದಿನವೂ ಚರ್ಚೆಯಲ್ಲಿರುವ ಒಂದು ಪ್ರಶ್ನೆಯೊಂದಿಗೆ ಮತದಾರರನ್ನು ಉದಯವಾಣಿಯ ವರದಿಗಾರರ ತಂಡ ಎದುರುಗೊಳ್ಳುತ್ತದೆ. ಅದಕ್ಕೆ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಕೇಳಿಬರುವ ಅಭಿಪ್ರಾಯವನ್ನು ಕ್ರೋಡೀಕರಿಸಿ ಇಲ್ಲಿ ನೀಡಲಾಗುತ್ತದೆ. ಇದೊಂದು ರೀತಿಯಲ್ಲಿ ನಿತ್ಯದ ಮತದಾರರ ನಾಡಿ ಮಿಡಿತ ಹೇಳುವ ಅಂಕಣ.
ಪ್ರಶ್ನೆ: ಹೊಸ ಮುಖಗಳ ಪರಿಚಯ ಧನಾತ್ಮಕ ಬೆಳವಣಿಗೆಯೇ?

Advertisement

ಬಂಟ್ವಾಳ
ಹೊಸ ಆಲೋಚನೆಗಳು ಅಭಿವೃದ್ಧಿಗೆ ಪೂರಕ
ರಾಜಕೀಯದಲ್ಲಿ ಬದಲಾವಣೆಗಳು ನಿರಂತರವಾಗಿ ಬೇಕಿದ್ದು, ಹೊಸ ಆಲೋಚನೆಗಳು ಪ್ರಗತಿಗೆ ಪೂರಕ. ಅಭ್ಯರ್ಥಿಯ ಬದ ಲಾವಣೆಯಿಂದ ತಳಮಟ್ಟದ ಕಾರ್ಯಕರ್ತನೂ ನಾಯಕನಾಗಿ ಬೆಳೆಯಲು ಅವಕಾಶ ಸಿಗುತ್ತದೆ. ಒಂದೆರಡು ಬಾರಿ ಶಾಸಕರಾದ ಬಳಿಕ 3ನೇ ಬಾರಿಗೆ ಬದಲಾಯಿಸುವುದು ಸೂಕ್ತ ಎಂಬುದು ಬಹುತೇಕ ಮತದಾರರ ಅಭಿಪ್ರಾಯ.

ರಾಜನ ಮಗ ರಾಜನೇ ಆಗಬೇಕಿಲ್ಲ ಅಥವಾ ಇರುವವನೇ ನಿರಂತರ ರಾಜನಾಗಿ ಮೆರೆಯ ಬೇಕೆಂದಿಲ್ಲ. ಇದು ಪ್ರಜಾಪ್ರಭುತ್ವ. ಇಲ್ಲಿ ಸಾಮಾನ್ಯನಿಗೂ ಬೆಳೆಯಲು ಅವಕಾಶವಿದೆ. ಹೀಗಾಗಿ ಪಕ್ಷಗಳು ತಮ್ಮ ಸಾಮಾನ್ಯ ಕಾರ್ಯಕ ರ್ತರೂ ಬೆಳೆಯುವಂತೆ ಪ್ರತಿ 2 ಅವಧಿಗೊಮ್ಮೆ ಹೊಸ ಮುಖಗಳಿಗೆ ಅವಕಾಶ ನೀಡಲಿ ಎನ್ನುತ್ತಾರೆ ಚಂಡ್ತಿಮಾರ್‌ ನಿವಾಸಿ ರಾಜೇಂದ್ರ ಮಣ್ಣಾಪು.

ಯಾವುದೇ ಪಂಗಡಕ್ಕೆ ಸೀಮಿತವಾಗದೆ, ಓಲೈಕೆ ಬಿಟ್ಟು ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ಪಕ್ಷಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು. ಇದರಿಂದ ಅಭಿವೃದ್ಧಿ ಕಾರ್ಯ ಗಳಿಗೂ ಪ್ರೇರಣೆ ಸಿಕ್ಕೀತು ಎನ್ನುತ್ತಾರೆ ಜಕ್ರಿಬೆಟ್ಟಿನ ಸೆಲೂನ್‌ ಮಾಲಕ ವಸಂತ ಭಂಡಾರಿ.

ಹೊಸಮುಖಗಳನ್ನು ತಂದಾಗ ನಾಯ ಕತ್ವ ಬೆಳೆಯಲು ಸಾಧ್ಯ. ಪ್ರತಿಯೊಬ್ಬರ ಆಲೋಚನಾ ಶೈಲಿಯೂ ವಿಭಿನ್ನ,. ಇದರಿಂದ ಕ್ಷೇತ್ರ ಪ್ರಗತಿಯ ಮೇಲೂ ಧನಾತ್ಮಕ ಪರಿಣಾಮ ಬೀರಲಿದೆ. ಹತ್ತು ರೀತಿಯ ಆಲೋಚನೆಗಳ ಜಾರಿಗೆ ಪ್ರಯತ್ನಿಸಲು ಸಾಧ್ಯಎನ್ನುತ್ತಾರೆ ಕೇಬಲ್‌ ಉದ್ಯೋಗಿ ಸುರೇಶ್‌.

Advertisement

ಆದರೆ ಮಣಿಹಳ್ಳದ ಆಟೋ ಚಾಲಕರೊಬ್ಬರ ಪ್ರಕಾರ, ಒಬ್ಬ ನಾಯಕನಿಗೆ ತನ್ನ ಕ್ಷೇತ್ರದ ಅಭಿವೃದ್ಧಿ ಕುರಿತು ಒಂದು ಕಲ್ಪನೆ ಇರುತ್ತದೆ. ಅವೆಲ್ಲವೂ ಒಂದೆರಡು ಅವಧಿಯಲ್ಲಿ ಅನುಷ್ಠಾನಕ್ಕೆ ಕಷ್ಟ. ಹೀಗಿರುವಾಗ ಹೆಚ್ಚು ಅವಕಾಶ ಕೊಟ್ಟರೆ ಮಾದರಿ ಕ್ಷೇತ್ರ ನಿರ್ಮಾಣ ಸಾಧ್ಯವಾಗುತ್ತದೆಯಂತೆ. ಎನ್ನುತ್ತಾರೆ ಮತ್ತೂಬ್ಬ ಮತದಾರರು.

ಅಭ್ಯರ್ಥಿಗಳ ಬದಲಾವಣೆ ಪಕ್ಷಗಳಿಗಷ್ಟೇ ಸೀಮಿತವಲ್ಲ. ಅದು ಮತದಾರರ ಮೇಲೂ ಪರಿಣಾಮ ಬೀರೀತು. ಜತೆಗೆ ಅದಕ್ಕೆ ಮತದಾರರು ತಮ್ಮ ಅಭಿಪ್ರಾಯವನ್ನು ಮತಪೆಟ್ಟಿ ಗೆಯಲ್ಲೂ ವ್ಯಕ್ತಪಡಿಸಬಹುದು.
– ಮತದಾರ, ಬಂಟ್ವಾಳ

-ಕಿರಣ್‌

ಮಂಗಳೂರು ನಗರ ದಕ್ಷಿಣ
ಯಾರು ಬಂದರೇನು? ನಮ್ಮ ಕೆಲಸ ಕಡಿಮೆಯಾದೀತೇ?
ಪ್ರತಿಭಾವಂತ, ಒಳ್ಳೆಯ ಆಲೋಚನೆ, ಜನಸೇವೆ ಮಾಡುವ ಹೊಸ ಅಭ್ಯರ್ಥಿಗಳು ಇಂದಿನ ಅಗತ್ಯ. ಜನಪ್ರಿಯ ಘೋಷಣೆ, ಪಕ್ಷದ ಮೇರು ನಾಯಕರ ಹೆಸರು ಹೇಳಿಕೊಂಡು ಮತಯಾಚನೆ ಬಿಟ್ಟು ಜನರಿಗೆ ಬೆಲೆ ಏರಿಕೆ, ತೆರಿಗೆ ಹೆಚ್ಚಳದಿಂದ ಹೊಸ ದಾರಿ ತೋರಿಸುವ ಅಭ್ಯರ್ಥಿಗಳು ಬೇಕು.ಒಬ್ಬರೇ ಎಷ್ಟು ಹಣ ಮಾಡುವುದು, ಪಕ್ಷಗಳಲ್ಲಿ ನಿಷ್ಟೆಯಿಂದ ದುಡಿಯುವ ಕಾರ್ಯ ಕರ್ತರಿಗೂ ಸೇವೆಯ ಅವಕಾಶ ಸಿಗಲಿ ಎಂದು ನಿಷ್ಠುರವಾಗಿ ಹೇಳಿದವರು ಜಪ್ಪು ಮಾರುಕಟ್ಟೆ ಬಳಿಯ ವ್ಯಾಪಾರಿ ರತ್ನಾಕರ್‌.

ನಾಲ್ಕೈದು ಬಾರಿ ಸ್ಪರ್ಧಿಸಿ ಗೆದ್ದವರು, ಸೋತವರಿಗೆ ಮತ್ತೆ ಮತ್ತೆ ಅವಕಾಶ ನೀಡಬಾರದು. ಪ್ರತಿಬಾರಿಯೂ ಹೊಸ ಮುಖಗಳಿಗೆ ಅವಕಾಶ ಸಿಗಲಿ. ಎಲ್ಲಾ ಪಕ್ಷಗಳು ಈ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೇಳಿದ್ದು ಮಾರ್ನಮಿ ಕಟ್ಟೆಯ ಲ್ಯಾಬೊರೇಟರಿಯೊಂದರ ಯುವತಿ ವಿಜಯಲಕ್ಷ್ಮಿ.

ಪ್ರತಿ ಬಾರಿ ಅಭ್ಯರ್ಥಿಗಳು ಬದಲಾವಣೆಯಾದಾಗ ಹೆಚ್ಚಿನ ಮಂದಿಗೆ ನಮ್ಮನ್ನು ಪ್ರತಿನಿಧಿಸುವ ಅವಕಾಶ ಸಿಗುತ್ತದೆ. ಇದು ಕ್ಷೇತ್ರದಲ್ಲಿ ಅಭಿವೃದ್ಧಿಯೂ ಪೈಪೋಟಿಯಲ್ಲಿ ಆಗಲು ಸಾಧ್ಯ ಎಂದು ಹೇಳುವವರು ಜಪ್ಪಿನಮೊಗರಿನ ಹರೀಶ್‌ ಶೆಟ್ಟಿ.

ಹೊಸ ಮುಖಗಳು ಧನಾತ್ಮಕವೇ. ಆದರೆ, ಅಭ್ಯರ್ಥಿಗಳ ಆಯ್ಕೆ ವೇಳೆ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಹಾಲಿ ಅಭ್ಯರ್ಥಿ ಬಗ್ಗೆ ವಿರೋಧ ವ್ಯಕ್ತವಾದಾಗ ಅಲ್ಲಿ ಹೊಸ ಮುಖ, ಸರಿ. ಜತೆಗೆ ಉತ್ತಮ ಕೆಲಸ ಮಾಡಿದವರಿಗೆ ಮತ್ತೂಂದು ಅವಕಾಶದ ಒತ್ತಾಸೆ ನೀಡಬೇಕು. ಇಲ್ಲವಾದಲ್ಲಿ ಒಂದು ಕ್ಷೇತ್ರದ ಭಿನ್ನಾಭಿಪ್ರಾಯ ಇತರೆ ಕ್ಷೇತ್ರಗಳ ಹಿನ್ನಡೆಗೂ ಕಾರಣವಾದೀತಲ್ಲ ಎಂದು ಪ್ರಶ್ನೆ ಮುಂದಿಡುತ್ತಾರೆ ಫಿಶರೀಸ್‌ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ|ರಾಕೇಶ್‌ ಕೆ. ಎಕ್ಕೂರು.

ಹೊಸಬರಾದರೂ ನಮ್ಮ ಬಳಿ ಬಂದು ನಮ್ಮ ಸಮಸ್ಯೆ ಕೇಳಿಸಿಕೊಂಡಾರು ಎಂಬ ನಿರೀಕ್ಷೆ ನಮ್ಮದು. ಹಳಬರಿಗೆ ಸಮಸ್ಯೆಗಳನ್ನು ತಿಳಿಯುವ ಉತ್ಸಾಹ ಕಡಿಮೆ. ಪಕ್ಷದ ಹೆಸರಿನಲ್ಲಿ ತಾವು ಗೆಲ್ಲುತ್ತೇವೆ ಎಂಬುದರ ಚಿಂತನೆ ಬದಲಾಗಿ, ಜನರಿಗಾಗಿ ಸೇವೆ ಮಾಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ಆಡಂಕುದ್ರುವಿನ ಅಂಗಡಿ ಮಾಲಕ ಕೃಷ್ಣ ಶೆಟ್ಟಿ ಅಭಿಪ್ರಾ ಯಿಸಿದರೆ, ಹೊಸಬರಾದರೇನು, ಹಳಬರಾದರೇನು? ಅವರು ನಮ್ಮ ಮನೆಗಳತ್ತ ಮುಖ ಮಾಡುವುದು ಚುನಾವಣೆ ಬಂದಾಗಲೇ ಅಲ್ವಾ? ತೋಟಕ್ಕೆ ಗೊಬ್ಬರ ಬೇಕಾದರೂ ನಾವೇ ಮಂಗಳೂರಿಗೆ ಹೋಗಬೇಕು. ಅವರು ಬರುತ್ತಾರಾ ಎಂದು ಅವರ ಅಂಗಡಿಯಲ್ಲಿ ಜ್ಯೂಸ್‌ ಕುಡಿಯುತ್ತಿದ್ದ ಮಹಿಳೆ ಖಡಕ್ಕಾಗಿ ನುಡಿದು ನಡೆದೇ ಹೋದರು.

ಬದಲಾವಣೆ ಅನಿವಾರ್ಯ. ಹೊಸಬರು ಬಂದಾಗ ನಮಗೆ ಅವರಲ್ಲಿ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು ಎನ್ನುವುದು ವೆಲೆನ್ಸಿಯಾದ ಝೆರಾಕ್ಸ್‌ ಅಂಗಡಿಯ ಐಡಾ ಗೋವಿಯಸ್‌ ಅಭಿಪ್ರಾಯ.

-ಸತ್ಯಾ

ಮೂಡುಬಿದಿರೆ
ಇಂದಿನ ಹೊಸ ಮುಖಗಳೇ ಭವಿಷ್ಯದ ನಾಯಕರು!
ಪಕ್ಷಗಳು ಹೊಸ ಅಭ್ಯರ್ಥಿಗಳನ್ನು ನಿಲ್ಲಿಸುವ ಹಿಂದೆ ಕಾರಣಗಳಿರುತ್ತವೆ. ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿ ಸಬಹುದು. ಅದರೆ ತೀರ್ಪು ಮತದಾರರದ್ದೇ ಆದ ಕಾರಣ ಯಾವುದೇ ಪರಿಣಾಮ ಬೀರದು.

-ಇದು ಕಿನ್ನಿಗೋಳಿ ಬಸ್‌ ನಿಲ್ದಾಣದಲ್ಲಿ ಕ್ಯಾಂಟೀನ್‌ ನಡೆ ಸುತ್ತಿರುವ ದೇವದಾಸ್‌ ರೈ ಪದ್ಮನ್ನೂರು ಅವರ ಮಾತು.
ಕಿನ್ನಿಗೋಳಿ ಮೂರು ಕಾವೇರಿ, ಕಟೀಲು, ಎಕ್ಕಾರು ಭಾಗದಲ್ಲಿ ಮತದಾರರನ್ನು ಮಾತನಾಡಿಸಿದಾಗ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾದವು.

ಮೂರುಕಾವೇರಿಯ ನಿವೃತ್ತ ಶಿಕ್ಷಕ ರಾಮಕೃಷ್ಣ ಎಂ.ಅವರು “ರಾಜಕೀಯ ನಿಂತ ನೀರಾಗಬಾರದು, ಹೊಸ ಮುಖಗಳು ಬರು ತ್ತಿರಬೇಕು. ಈಗ ಗೆಲ್ಲದಿದ್ದರೂ ಭವಿಷ್ಯದಲ್ಲಿ ಉತ್ತಮ ನಾಯಕರನ್ನು ಕಾಣಬೇಕಾದರೆ, ಹೊಸ ಮುಖಗಳು ಅಗತ್ಯ’ ಎಂದರು.

ಜಲ್ಲಿಗುಡ್ಡೆಯ ದೇಜು ಶೆಟ್ಟಿಯವರ ಪ್ರಕಾರ, ಹಲವು ವರ್ಷಗಳಿಂದ ಓರ್ವನೇ ಸ್ಪರ್ಧಿಸುವುದರಿಂದ ಇತರರು ಅವಕಾಶ ವಂಚಿತರಾಗಿರುತ್ತಾರೆ. ಜನರೂ ರೋಸಿ ಹೋಗಿರುತ್ತಾರೆ. ಇಂತಹ ಸಂದರ್ಭ ಯಾವುದೇ ಪಕ್ಷ ಹೊಸಬರನ್ನು ಅಭ್ಯರ್ಥಿಯನ್ನಾಗಿ ಸಿದರೆ, ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ.

ಯುವಕರನ್ನು ರಾಜಕೀಯಕ್ಕೆ ಕರೆತಂದು ನಿಲ್ಲಿಸಿ ಗೆಲ್ಲಿಸಬೇಕು. ಹೊಸ ಹೊಸ ಅಭಿವೃದ್ಧಿ ಕೆಲಸಗಳನ್ನು ಅವರು ಮಾಡಬೇಕು ಎಂಬ ಅಭಿಪ್ರಾಯ ಹಿರಿಯ ಜೀವಿ ಗುಲಾಬಿ ಅವರದ್ದು. ಕಟೀಲು ಗಿಡಿಗೆ ರೆಯ ಪ್ರದೀಪ್‌, ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ಹಿಂದಿನವರಿಗೇ ಅವಕಾಶ ನೀಡಿದೆ. ನಿರಂತರ ಜನ ಸಂಪರ್ಕ ಮಾಡಿದರೆ ಹೊಸ ಅಭ್ಯರ್ಥಿಯೂ ಗೆಲ್ಲಬಹುದು ಎಂದರು.

ಹೊಸ ಅಭ್ಯರ್ಥಿಗಳ ಗೆಲುವು ಅವರು ಹಾಕುವ ಶ್ರಮದ ಮೇಲಿದೆ. ಈ ಬಾರಿ ಕರಾವಳಿಯಲ್ಲಿ ಎರಡೂ ಪಕ್ಷಗಳಲ್ಲಿ ಹಲವು ಹೊಸ ಮುಖಗಳಿವೆ. ಇದು ಉತ್ತಮ ಬೆಳವಣಿಗೆ. ಆದರೆ ಗೆಲ್ಲಬೇಕಾದರೆ ಹೆಚ್ಚು ಶ್ರಮ ಹಾಕಬೇಕು ಎಂದು ಉಮೇಶ್‌ ಶೆಟ್ಟಿ ಶಿಬರೂರು ಗುತ್ತಿನಾರ್‌ ಅಭಿಪ್ರಾಯಪಟ್ಟರು.

ತೆಂಕ ಎಕ್ಕಾರುವಿನ ಕೃಷ್ಣಪ್ಪ ಅವರ ಪ್ರಕಾರ ಹೊಸ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ ಶೇ.50-50. ಕ್ಷೇತ್ರದ ಅಭ್ಯರ್ಥಿಗಳನ್ನೇ ನಿಲ್ಲಿಸಿದರೆ ಗೆಲ್ಲಬಹುದು, ಹೊರಗಿನಿಂದ ತಂದು ನಿಲ್ಲಿಸಿದರೆ ಗೆಲುವು ಕಷ್ಟ. ಕಾರ್ಯಕರ್ತರೂ ಅಷ್ಟೊಂದು ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.

-ಭರತ್‌

ಮಂಗಳೂರು
ನಿಂತ ನೀರು ಒಳ್ಳೆಯದಲ್ಲ!

ಹಳೆ ಮುಖದ ಬದಲು ಹೊಸ ಮುಖ ಭವಿಷ್ಯಕ್ಕೆ ಒಳ್ಳೆಯದು. ಈಗ ಇರುವವರ ಜ್ಞಾನ ಪಡೆದು ಹೊಸ ಮುಖ ಚಾಲ್ತಿಗೆ ಬಂದರೆ ಬದಲಾವಣೆ ನಿರೀಕ್ಷಿಸಬಹುದು. ಒಂದಂತೂ ನಿಜ; ರಾಜಕೀಯ ದಲ್ಲಿಯೂ ನಿಂತ ನೀರು ಒಳ್ಳೆ ಯದಲ್ಲ ಎನ್ನುವುದು ಪಿಲಾರ್‌ನ ಸುಕು ಮಾರ್‌ ಟೈಲರ್‌ ಅವರ ನೇರ ನುಡಿ.

ತೊಕ್ಕೊಟ್ಟಿನ ಟೈಲರ್‌ ರವೀಂದ್ರ ಕರ್ಕೇರ ಅವರದ್ದೂ ಇದೇ ಅಭಿಮತ. ಹೊಸ ಆಯ್ಕೆಗಳು ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು. ಈಗಾಗಲೇ ಇರುವವರ ಕೆಲಸ ಕಾರ್ಯ ಕಂಡಿರುವಾಗ ಹೊಸ ಆಯ್ಕೆ ಇನ್ನಷ್ಟು ಕೆಲಸಕ್ಕೆ ಪ್ರೇರಣೆ ಆದೀತು ಎಂಬುದು ಅವರ ಲೆಕ್ಕಾಚಾರ. ಕುಂಪಲದ ಕೃತಿ ಅವರ ಪ್ರಕಾರ ಹೊಸ ಮುಖದಿಂದ ಕ್ಷೇತ್ರದ ಜನತೆಯಲ್ಲಿ ಹೊಸ ನಿರೀಕ್ಷೆಗಳು ಮೂಡಲು ಸಾಧ್ಯ. ಹೊಸತನ್ನೇ ಬಯಸುವ ಈಗಿನ ಕಾಲದಲ್ಲಿ ರಾಜಕೀಯವೂ ಹೊಸದಿರಲಿ.

ಉಳ್ಳಾಲ ಕಾಪಿಕಾಡ್‌ನ‌ ನವೀನ್‌ ಡಿಸೋಜ ಪ್ರಕಾರ, ಹೊಸ ಮುಖಗಳಿಗೆ ಅವಕಾಶ ನೀಡುವುದು ಒಳ್ಳೆಯ ಬೆಳವಣಿಗೆ. ಆದರೆ ಆಯ್ಕೆಯಾದ ಬಳಿಕ ಅವರು ಪಕ್ಷಾತೀತವಾಗಿದ್ದರೆ ಸಾರ್ಥಕ. ಬದಲಾವಣೆ ಬೇಕು. ಹೊಸ ಜನ ಬರಬೇಕು. ಆಗಷ್ಟೇ ಕ್ಷೇತ್ರದಲ್ಲಿ ಹೊಸ ಕೆಲಸದ ನಿರೀಕ್ಷೆ ಸಾಧ್ಯ ಎನ್ನುವುದು ತೊಕ್ಕೊಟ್ಟು ಒಳಪೇಟೆಯ ಪವನ್‌ ಕುಮಾರ್‌ ಅಭಿಪ್ರಾಯ. ಆಡಳಿತದ ಮೇಲೆ ಹಿಡಿತ ಇರಲು ಹಳೆ ಮುಖ ಬೇಕು. ಭವಿಷ್ಯಕ್ಕೆ ಯುವಜನ ಅಥವಾ ಹೊಸ ಮುಖ ಬರಬೇಕು ಎಂಬುದು ಕಲಾವಿದ ನವೀನ್‌ ಪಿಲಾರ್‌ ಅವರ ಅಂಬೋಣ.

ಅಂದಹಾಗೆ, ಗಿರಿಜಾ ಅವರು ಮಾತ್ರ, ಹೊಸ ಮುಖ ಅಥವಾ ಹಳೆ ಮುಖ ಯಾರಿದ್ದರೂ ಆಗಬಹುದು. ಆದರೆ ಚುನಾವಣೆ ಕಾಲಕ್ಕೆ ಮಾತ್ರ ಮನೆ ಬಾಗಿಲಿಗೆ ಬರುವ ಅವರು ಬಳಿಕವೂ ಬರು ವಂತಿರಬೇಕು ಅನ್ನುವುದು ಅವರ ಸ್ಪಷ್ಟ ನುಡಿ.

ಎಲ್ಲ ಹೊಸಬರಾ ದರೆ ಮೂಲ ಚೌಕಟ್ಟು ಹಾಳಾ ದೀತು. ಮನೆಯಲ್ಲಿ ಹಳಬರೂ ಇರಬೇಕು. ಹಾಗೆ ರಾಜಕೀಯದಲ್ಲೂ ಹೊಸಬರು ಹಿರಿಯರ ಕೈ ಹಿಡಿದು ಮೇಲಕ್ಕೆ ಬರಬೇಕು.
-ಕಿರಣ್‌, ಬಸ್‌ ಚಾಲಕ

- ದಿನೇಶ್‌

ಸುಳ್ಯ
ಗೆಲುವು ನಿರೀಕ್ಷಿಸಿದಷ್ಟು ಸುಲಭವಲ್ಲ
ಈ ಬಾರಿ ಸುಳ್ಯ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ತನ್ನ ಅಭ್ಯರ್ಥಿಗಳನ್ನಾಗಿ ಹೊಸ ಮುಖಗಳನ್ನು ಕಣಕ್ಕಿಳಿಸಿವೆ. ಪಕ್ಷಗಳ ಈ ನಿರ್ಧಾರ ಕ್ಷೇತ್ರದ ಮತದಾರರಲ್ಲಿ ಆಶಾವಾದವನ್ನು ಮೂಡಿ ಸಿದೆ. ಉದಯವಾಣಿ ಕ್ಷೇತ್ರ ಸಂಚಾರದ ವೇಳೆ ರಾಜಕೀಯ ಪಕ್ಷಗಳ ಈ ನಡೆ ಧನಾತ್ಮಕ ಬೆಳವಣಿಗೆಯೇ ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟಾಗ ಅವರಿಂದ ವಿಭಿನ್ನ ಅಭಿಪ್ರಾಯ ಗಳು ವ್ಯಕ್ತವಾದವು.

ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಯಾಕೆಂದರೆ ಹೊಸ ಅಭ್ಯರ್ಥಿ ನಿರೀಕ್ಷಿತ ಮಟ್ಟದಲ್ಲಿ ಮತ ಪಡೆಯಲು ಅಸಾಧ್ಯ. ಸುಳ್ಯದಲ್ಲಿ ಆರು ಬಾರಿ ಗೆಲುವು ಸಾಧಿಸಿದ್ದ ಅಭ್ಯರ್ಥಿಯನ್ನು ಬದಲಾಯಿಸಿರುವುದರಿಂದ ಹೊಸ ಅಭ್ಯರ್ಥಿಯ ಸ್ಪರ್ಧೆಯಿಂದ ಪಕ್ಷಕ್ಕೆ ಗೆಲುವು ಕಷ್ಟವಾಗುವ ಸಾಧ್ಯತೆಯಿದೆ. ಹೊಸ ಅಭ್ಯರ್ಥಿಗಳ ಬಗ್ಗೆ ಪರಿಚಯವೂ ಇಲ್ಲದಿರುವುದರಿಂದ ಮತ ಗಳಿಕೆ ಕಷ್ಟ ಎನ್ನುವುದು ಮರ್ಕಂಜದ ರವಿ ಉಪಾಧ್ಯಾಯ ಅವರ ಅಭಿಪ್ರಾಯ.

ಹೊಸ ಮುಖಗಳ ಸ್ಪರ್ಧೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಸಾಧುವಾಗಲಾರದು. ಘೋಷಿತ ಹೊಸ ಅಭ್ಯರ್ಥಿಯ ಈ ಹಿಂದಿನ ಕಾರ್ಯಚಟುವಟಿಕೆ ಯಾವ ರೀತಿಯಲ್ಲಿತ್ತು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಜನರ ಸಂಪರ್ಕವೂ ಹೆಚ್ಚಾಗಿ ಇಲ್ಲದೇ ಇರುವುದರಿಂದ ಅಭ್ಯರ್ಥಿ ಗೆಲವು ಕಷ್ಟಸಾಧ್ಯ. ಬಹುತೇಕ ಹೊಸ ಮುಖಗಳ ಗೆಲುವು ನಿರೀಕ್ಷಿಸಿದಷ್ಟು ಸುಲಭವಲ್ಲ ಎನ್ನುತ್ತಾರೆ ಪದ್ಮನಾಭ ಸುಳ್ಯ. ಹೊಸ ಅಭ್ಯರ್ಥಿಗಳ ಸ್ಪರ್ಧೆ ಉತ್ತವಾದ ಬೆಳವಣಿಗೆ. ಹೊಸಮುಖಗಳ ಪರಿಚಯದಿಂದ ಹೊಸತನ, ಹೊಸ ವಿಚಾರಗಳು ಅನುಷ್ಠಾನಗೊಳ್ಳಲಿವೆ. ಪ್ರಸ್ತುತ ಬೆಳವಣಿಗೆಯಲ್ಲಿ ಬದಲಾವಣೆ ಸೂಕ್ತವೆನಿಸುತ್ತದೆ. ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಹೊಸ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಹೊಸ ಅಭ್ಯರ್ಥಿ ಸೂಕ್ತವಾದ ನಿರ್ಧಾರ ಎಂದು ಸುಶಾಂತ್‌ ಅಭಿಪ್ರಾಯಪಡುತ್ತಾರೆ. ಗೆಲುವಿನ ದೃಷ್ಟಿಯಿಂದ ಸುಳ್ಯದಲ್ಲಿ ಅಭ್ಯರ್ಥಿ ವಿಚಾರ ಅಷ್ಟಾಗಿ ಸೂಕ್ತವೆನಿಸುತ್ತಿಲ್ಲ. ಯಾಕೆಂದರೆ ಇಲ್ಲಿನ ಜನರು ಅಭ್ಯರ್ಥಿ ನೋಡಿ ಮತ ಹಾಕುವುದಿಲ್ಲ. ಪಕ್ಷ ನೋಡಿ ಮತ ಹಾಕುತ್ತಾರೆ. ಜನರು ತಮ್ಮ ಪಕ್ಷದಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ಅವರಿಗೆ ಮತ ಹಾಕುತ್ತಾರೆ. ಅದು ಹೊಸ ಅಭ್ಯರ್ಥಿ ಇರಲಿ, ಹಿಂದಿನ ಅಭ್ಯರ್ಥಿಯೇ ಇರಲಿ. ಇಲ್ಲಿ ವ್ಯಕ್ತಿಗಿಂತ ಪಕ್ಷವೇ ಮುಖ್ಯವಾಗಿದೆ ಎನ್ನುತ್ತಾರೆ ರಿಕ್ಷಾ ಚಾಲಕರಾದ ಜಗದೀಶ್‌.

|-ದಯಾನಂದ

ಪುತ್ತೂರು
ಹಲಸಿನ ಹಣ್ಣು ಮತ್ತು ರಾಜಕೀಯ!
ಒಬ್ಬರಿಗೆ ಎರಡು ಬಾರಿಗಿಂತ ಹೆಚ್ಚು ಅವಕಾಶ ನೀಡುವುದು ಸರಿಯಲ್ಲ, ಹೊಸ ಮುಖ ಪ್ರಯೋಗದಿಂದ ರಾಜಕೀಯ ಕ್ಷೇತ್ರದ ಬಗ್ಗೆ ಜನರಲ್ಲಿ ನಂಬಿಕೆ ಉಳಿದುಕೊಳ್ಳಬಹುದು. ಹೊಸತನ ಜನರಿಗೆ ಇಷ್ಟವಾದುದು.
ನಿಡ³ಳ್ಳಿ, ಬೆಟ್ಟಂಪಾಡಿ, ಪಾಣಾಜೆ, ಕುರಿಯ, ಪಂಜಳ, ತಿಂಗಳಾಡಿ ಮತದಾರರೊಂದಿಗೆ ಮುಖಾಮುಖೀಯಾದಾಗ ವ್ಯಕ್ತವಾದ ಅಭಿಪ್ರಾಯವಿದು.

ಸಂಟ್ಯಾರು ಬಳಿ ಪತ್ರಿಕೆ ಓದುತಿದ್ದ ಎಂಬಿಎ ಪದವೀಧರ ಅನೂಪ್‌, ಅಧಿಕಾರದ ವಿಕೇಂದ್ರಿಕರಣ ಮಾತ್ರವಲ್ಲ, ಅವಕಾಶಗಳ ವಿಕೇಂದ್ರಿಕರಣವೂ ಆಗಬೇಕು. ರಾಜಕಾರಣ ವ್ಯಕ್ತಿ, ಜಾತಿ, ಕುಟುಂಬಕ್ಕೆ ಸೀಮಿತ ಎನಿಸಬಾರದು ಅಂದರೆ ಹೊಸ ಹೊಸ ಮುಖಗಳ ಪ್ರಯೋಗವಾಗದಷ್ಟು ನಾನು ಖುಷಿ ಪಡುವೆ ಎಂದರು.

ಸಂಟ್ಯಾರು-ಪಾಣಾಜೆ ರಸ್ತೆಯಲ್ಲಿ ಹಲಸಿನ ಹಣ್ಣು ಮಾರುತ್ತಿದ್ದ ಐತ್ತಪ್ಪ ಅವರ ವಿಶ್ಲೇಷಣೆ ಇನ್ನೂ ಸೊಗಸಾಗಿತ್ತು. “ನಾನು ಆರು ವರ್ಷದಿಂದ ಹಲಸಿನ ಹಣ್ಣು ಮಾರುತ್ತಿದ್ದೇನೆ. ಇಲ್ಲಿ ಒಂದೇ ಜಾತಿಯ ಹಲಸಿನ ಹಣ್ಣು ಮಾರಿದರೆ ಒಮ್ಮೆ ಬಂದ ಗ್ರಾಹಕ ಮತ್ತೆ ಬರುವುದಿಲ್ಲ. ಬೇರೆ ಬೇರೆ ತಳಿಯ ಹಣ್ಣು ಬೇಕು ಎನ್ನುತ್ತಾರೆ. ಅಂತೆಯೇ ರಾಜಕೀಯದಲ್ಲಿಯೂ ಹಾಗೆಯೇ’ ಎಂದರು.

ಬೆಟ್ಟಂಪಾಡಿಯ ಮಹಮ್ಮದ್‌ ಅವರದ್ದೂ ಹೊಸ ಪ್ರವೇಶಕ್ಕೆ ಜೈಕಾರ. ರಾಜಕಾರಣ ನಿಂತ ನೀರಾಗಬಾರದು. ಹರಿಯುವ ನೀರಾಗಬೇಕು ಅಂದರು. ಕೇರಳ ಗಡಿ ಗ್ರಾಮದ ಪಾಣಾಜೆಯ ವಯೋವೃದ್ಧ ಶೀನಪ್ಪ ಅವರ ಪ್ರಕಾರ, ಹೊಸ ಮುಖಗಳು ಹಿರಿಯರ ಜತೆ ಅನುಭವ ಪಡೆದ ಬಳಿಕವಷ್ಟೇ ಅವಕಾಶ ಕೊಟ್ಟರೆ ಸೂಕ್ತ. ಇಲ್ಲದಿದ್ದರೆ ಅಧಿಕಾರ ಚಲಾವಣೆಯ ದಾರಿ ತಪ್ಪಬಹುದಂತೆ.

ಮೊಟ್ಟೆತ್ತಡ್ಕದ ರಾಜೇಶ್‌ ಅವರು, ಹೊಸ ಮುಖದಿಂದ ಗೆಲ್ಲುವ ಅವಕಾಶ ಹೆಚ್ಚು. ಮತದಾರರು ಹೊಸತನ ಇಷ್ಟ ಪಡುತ್ತಾರೆ ಎಂದರು. ಪಂಜಳ, ತಿಂಗಳಾಡಿಯಲ್ಲಿ ಅಶೋಕ್‌, ಶುಭ ಅವರೂ ಹೊಸ ಮುಖದಿಂದ ಪಕ್ಷಗಳ ಮೇಲೆ ಜನರಿಗೆ ಇನ್ನಷ್ಟು ನಂಬಿಕೆ ಮೂಡಬಲ್ಲದು ಎಂದರು.

-ಕಿರಣ್‌ ಪ್ರಸಾದ್‌

ಬೆಳ್ತಂಗಡಿ
ಧನಾತ್ಮಕ ಬೆಳವಣಿಗೆ ಸಾಧ್ಯ
ಅಭ್ಯರ್ಥಿಗಳ ಬದಲಾವಣೆ ಎಂಬುದು ಹೊಸತಲ್ಲ. ಪಕ್ಷದ ಕಾರ್ಯ ಕರ್ತರು, ಮುಖಂಡರ ಅಭಿಪ್ರಾಯವನ್ನಾಧರಿಸಿ ಪಕ್ಷ ಅಭ್ಯರ್ಥಿಯನ್ನು ಅಂತಿಮಗೊಳಿಸು ತ್ತದೆ. ನಮ್ಮ ಪ್ರತಿನಿಧಿ ಹೇಗಿರಬೇಕು ಎಂಬ ಕಲ್ಪನೆ ಮತದಾರರಿಗೂ ಇರುತ್ತದೆ. ಹೊಸ ಅಭ್ಯರ್ಥಿಯ ಪರಿಚಯದಿಂದ ಕ್ಷೇತ್ರದಲ್ಲಿ ಧನಾತ್ಮಕತೆಯ ವಾತಾವರಣ ಸೃಷ್ಟಿ ಸಾಧ್ಯ ಎನ್ನುತ್ತಾರೆ ಮೇಲಂತಬೆಟ್ಟು ಕಲದ ನಿವಾಸಿ ಗೋಪಾಲಕೃಷ್ಣ ಭಟ್‌.

ಕೆಲವರು ಪಕ್ಷ, ಇನ್ನು ಕೆಲವರು ಅಭ್ಯರ್ಥಿಯನ್ನು ಕಂಡು ಮತ ಹಾಕುತ್ತಾರೆ. ಹೊಸ ಮುಖವಾದರೂ ಅವರಲ್ಲಿ ಜನರನ್ನು ಸೆಳೆಯುವ ಪ್ರಬುದ್ಧತೆ ಇರಬೇಕು ಎಂಬುದು ಗೇರುಕಟ್ಟೆಯ ಅಶ್ವಿ‌ನಿ ನವೀನ್‌ ಹೆಗ್ಡೆ ಅವರ ಅಭಿಪ್ರಾಯ.
ಹೊಸಮುಖವಾದರೂ ಯುವ ಅಭ್ಯರ್ಥಿಗಳಾದರೆ ಹಳೇ ಮುಖಕ್ಕಿಂತ ಹೆಚ್ಚು ಯುವ ಮತದಾರರನ್ನು ಸೆಳೆಯಬಲ್ಲರು. ಜತೆಗೆ ಸರಳತೆ ಇದ್ದರೆ ಜನ ನೆಚ್ಚಿಕೊಳ್ಳುತ್ತಾರೆ. ಈಗ ಸಾಮಾಜಿಕ ಜಾಲತಾಣದ ಕಾಲಘಟ್ಟ. ಹೊಸಮುಖಗಳ ಪರಿಚಯಕ್ಕೆ ಬಹಳ ಸಮಯ ಬೇಕಿಲ್ಲ. ಹಾಗಾಗಿ ಯುವ ಅಭ್ಯ ರ್ಥಿಗಳಿಂದ ಧನಾತ್ಮಕ ಪರಿಣಾಮ ಹೆಚ್ಚು ಎನ್ನುತ್ತಾರೆ ಚರ್ಚ್‌ ರಸ್ತೆಯ ಶಿವರಾಜ್‌.

ಹುಟ್ಟಿನಿಂದ ಎಲ್ಲರೂ ಎಲ್ಲವನ್ನೂ ತಿಳಿದಿರುವುದಿಲ್ಲ. ನಮ್ಮ ಪರಿಸರ, ಅನುಭವ, ಅರ್ಹತೆ, ಅನುಸರಿಸಿಕೊಂಡು ಹೋಗುವ ವಿಧಾನದಿಂದ ಹೊಸ ಮುಖಗಳು ಬೆಳಗಬಹುದು. ಅವಕಾಶವನ್ನು ಧನಾತ್ಮಕತೆಯಾಗಿ ಪರಿವರ್ತಿಸಿ ಕೊಳ್ಳಲೆಂದೇ ಹೊಸಮುಖಗಳನ್ನು ಆಯ್ಕೆ ಮಾಡಿರುತ್ತಾರೆ ಎಂಬುದು ಗುರು ವಾಯನಕೆರೆಯ ಸುಭಾಶ್‌ರ ಸ್ಪಷ್ಟ ನುಡಿ. ಹಳೆ ಅಭ್ಯರ್ಥಿಗಳಲ್ಲಿ ಧನಾತ್ಮಕ ಬದ ಲಾವಣೆ ಕಾಣದಿದ್ದರೆ ಹೊಸಬರಿಗೆ ಅವಕಾಶ ಬೇಕು ಎನ್ನುತ್ತಾರೆ ಆಟೋ ಚಾಲಕರಾದ ಸುನ್ನತ್‌ಕೆರೆಯ ನಿವಾಸಿ ಹಂಝಾರಿ ಹಾಗೂ ಅವರ ಸಂಗಡಿಗರು.

- ಚೈತ್ರೇಶ್‌

ಮಂಗಳೂರು ಉತ್ತರ
ಹೊಸ ಮುಖಗಳಿಂದಲೇ ಪ್ರಗತಿ
“ಕೆಲವು ಕ್ಷೇತ್ರಗಳಲ್ಲಿ ಆರೇಳು ವರ್ಷದಿಂದ ಒಂದೇ ಮುಖ ನೋಡಿದ್ದೇವೆ. ಆದರೂ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ಇಲ್ಲ. ಹೊಸಬರಿಗೆ ಅವಕಾಶ ಸಿಗಲಿ. ಅವರ ಕೆಲಸವನ್ನೂ ನೋಡೋಣ’ ಎಂದು ಮಾತಿಗಿಳಿದದ್ದು ಬೋಂದೆಲ್‌ ಪೇಟೆಯಲ್ಲಿ ಎಳನೀರು ಕುಡಿಯುತ್ತಿದ್ದ ನಾರಾಯಣ ಸಪಲ್ಯ.

ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌, ಬೋಂ ದೆಲ್‌, ಮೇರಿಹಿಲ್‌, ಕಾವೂರು ಸುತ್ತಲಿನ ಪ್ರದೇಶದಲ್ಲಿ ಮತದಾರರೊಂದಿಗೆ ಮಾತಿ ಗಿಳಿದಾಗ, “ಹೊಸ ಮುಖಗಳು ಬರಲಿ’ ಎಂಬ ಅಭಿಪ್ರಾಯ ಬಹುತೇಕರದ್ದಾಗಿತ್ತು.

ಒಬ್ಬ ಅಭ್ಯರ್ಥಿಗೆ ಗರಿಷ್ಠ 2-3 ಬಾರಿ ಅವಕಾಶ ಸಾಕು. 7-8 ಬಾರಿ ಒಬ್ಬರೇ ಸ್ಪರ್ಧಿಸಿದರೆ, ಹೊಸಬರು ಬೆಳೆಯುವುದು ಹೇಗೆ? ಎಂದು ಕೇಳಿದ್ದು ಮೇರಿಹಿಲ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ರೇವತಿ. “ಕಳೆದ ಬಾರಿ ಮಂಗಳೂರು ದಕ್ಷಿಣ, ಉತ್ತರ, ಬೆಳ್ತಂಗಡಿಗಳಲ್ಲಿ ಕೆಲವು ಪಕ್ಷಗಳು ಹೊಸಬರಿಗೆ ಅವಕಾಶ ನೀಡಿದವು. ಹೆಚ್ಚಿನ ಮಂದಿ ಗೆದ್ದಿದ್ದಾರೆ. ಆ ಬಾರಿಯ ಧನಾತ್ಮಕ ಬೆಳವಣಿಗೆ ಈ ಬಾರಿಯೂ ಮುಂದುವರೆಯಬಹುದು ಎಂದವರು ದೇರೆಬೈಲ್‌ನ ರಾಮಕೃಷ್ಣ.
ವ್ಯಕ್ತಿಯು ಉತ್ತಮ ಹಿನ್ನೆಲೆಯನ್ನು ಹೊಂದಿದ್ದು, ಬಹಳ ವರ್ಷಗಳಿಂದ ಉತ್ತಮ ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದರೆ ಅಂತಹ ಹೊಸಬರಿಗೆ ಆವಕಾಶ ನೀಡಿದರೆ ಸಮಾಜಕ್ಕೆ ಒಳ್ಳೆಯದು ಎಂದು ಹೇಳಿದ್ದು ಓಂ ಶ್ರೀ ಅವರು.

ಕಾವೂರು ಕೆರೆ ಬಳಿ ಮಾತಿಗೆ ಸಿಕ್ಕ ಸದಾಶಿವ ಅವರು, ಹೊಸ ಮುಖಗಳಿಗೆ ರಾಜಕೀಯ ಮತ್ತು ತಮ್ಮ ಕ್ಷೇತ್ರದ ಬಗ್ಗೆ ಆಸಕ್ತಿ ಇರಬೇಕು.ಅದಿರದಿದ್ದರೆ ಅದರಿಂದ ಯಾವುದೇ ಧನಾತ್ಮಕ ಬೆಳವಣಿಗೆಯಾಗದು ಎಂದರು.

ರಾಜಕಾರಣದಲ್ಲಿ ಅನುಭವಿ ಯುವ ನಾಯಕರ ಅಗತ್ಯ ಇದೆ. ಯುವಜನರು ರಾಜಕೀ ಯವನ್ನು ಉದ್ಯೋಗವಾಗಿ ಸದೇ ಸಮಾಜ ಸೇವೆಗೆ ಬಳಸಿ ದರೆ ಖಂಡಿತಾ ಲಾಭ.
-ಆಕಾಶ್‌, ಲ್ಯಾಂ.ಲಿ.ಟೌನ್‌ಶಿಪ್‌

ನವೀನ್‌

Advertisement

Udayavani is now on Telegram. Click here to join our channel and stay updated with the latest news.

Next