ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಅಂತೂ ಇಂತೂುಕ್ಕಳಿಗೆ ಕರ್ನಾಟಕ ದರ್ಶನ ಭಾಗ್ಯ ಕಲ್ಪಿಸಿದ್ದು ಜಿಲ್ಲೆಯಲ್ಲಿ ಬರೋಬ್ಬರಿ 779 ಮಕ್ಕಳು 2023-24ನೇ ಸಾಲಿನ ಕರ್ನಾಟಕ ದರ್ಶನಕ್ಕೆ ಆಯ್ಕೆಗೊಂಡಿದ್ದು ಒಟ್ಟು ನಾಲ್ಕು ದಿನಗಳ ಪ್ರವಾಸಕ್ಕೆ ಸರ್ಕಾರ ಅನುಮತಿ ನೀಡಿದೆ.
ಪ್ರತಿ ವರ್ಷ ನವೆಂಬರ್, ಡಿಸೆಂಬರ್ ತಿಂಗಳಲ್ಲಿಯೆ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಏರ್ಪಡಿಸುತ್ತಿದ್ದ ಸರ್ಕಾರ ಈ ವರ್ಷ ಜನವರಿ ಅಂತ್ಯದಲ್ಲಿ ಕರ್ನಾಟಕ ದರ್ಶನಕ್ಕೆ ಅನುಮತಿ ನೀಡಿದ್ದು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರವಾಸ ವೇಳಾಪಟ್ಟಿ ಪ್ರಕಟಿಸಿದೆ.
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿ ಓದುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಗಂಡ ಹಾಗೂ ಒಬಿಸಿ ಮಕ್ಕಳಿಗೆ ಮಾತ್ರ ಕರ್ನಾಟಕ ದರ್ಶನ ಪ್ರವಾಸ ಹಮ್ಮಿಕೊಂಡಿದ್ದು, ಜನವರಿ 29 ರಿಂದ ಫೆ.1 ರ ವರೆಗೂ ಚಿಕ್ಕಬಳ್ಳಾಪುರ ತಾಲೂಕಿನ ಮಕ್ಕಳು ಪ್ರವಾಸ ಹೊರಟರೆ ಗೌರಿಬಿದನೂರು ತಾಲೂಕಿನ ಮಕ್ಕಳು ಜ.30 ರಿಂದ ಫೆ.2 ರ ವರೆಗೂ ಪ್ರವಾಸ ಹಮ್ಮಿಕೊಂಡಿದ್ದಾರೆ. ಶಿಡ್ಲಘಟ್ಟ ತಾಲೂಕಿನ ವಿದ್ಯಾರ್ಥಿಗಳು ಜ.31 ರಿಂದ ಫೆ.3 ರ ವರೆಗೂ ಹಾಗೂ ಚಿಂತಾಮಣಿ ತಾಲೂಕಿನ ವಿದ್ಯಾರ್ಥಿಗಳು ಫೆ.1 ರಿಂದ ಫೆ.4 ರ ವರೆಗೂ ಹಾಗೂ ಬಾಗೇಪಲ್ಲಿ ತಾಲೂಕಿನ ವಿದ್ಯಾರ್ಥಿಗಳು ಫೆ.2 ರಿಂದ ಪ್ರವಾಸ ಹೊರಟು ಫೆ.4ಕ್ಕೆ ವಾಪಸ್ ಆಗಲಿದ್ದಾರೆ. ಗುಡಿಬಂಡೆ ತಾಲೂಕಿನ ಮಕ್ಕಳು ಫೆ.2 ರಂದು ಪ್ರವಾಸ ಹೊರಟು, ಫೆ.5 ರಂದು ವಾಪಸ್ ಬರಲಿದ್ದಾರೆ. ಕರ್ನಾಟಕ ದರ್ಶನ ಪ್ರವಾಸಕ್ಕೆ ಇಡೀ ಜಿಲ್ಲೆಯಿಂದ ಒಟ್ಟು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು 224, ಪರಿಶಿಷ್ಟ ಪಗಂಡ ವಿದ್ಯಾರ್ಥಿಗಳು 200 ಹಾಗೂ ಒಬಿಸಿ ವಿದ್ಯಾರ್ಥಿಗಳು 355 ಸೇರಿ ಒಟ್ಟು 779 ಮಕ್ಕಳು ಕರ್ನಾಟಕ ದರ್ಶನ ಮಾಡಲಿದ್ದಾರೆ. ಮಕ್ಕಳ ಪ್ರವಾಸದ ಜೊತೆ ಒಟ್ಟು 32 ಶಿಕ್ಷಕರು ತೆರಳಲಿದ್ದಾರೆ. ಒಟ್ಟು 17 ಸರ್ಕಾರಿ ಹಾಗೂ ಪ್ರವಾಸ್ಯೋದ್ಯಮ ಇಲಾಖೆ ಇಲಾಖೆ ಬಸ್‌ಗಳನ್ನು ಪ್ರವಾಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಎಲ್ಲೆಲ್ಲಿ ಕರ್ನಾಟಕ ದರ್ಶನ ಪ್ರವಾಸ :
ಮೊದಲ ದಿನ ಶ್ರೀರಂಗಪಟ್ಟಣ ನೋಡಿಕೊಂಡು ರಾತ್ರಿ ಮೈಸೂರು ವಾಸ್ತವ್ಯ. ಎರಡನೇ ದಿನ ಮೈಸೂರು, ಮಡಿಕೇರಿ, ಭಾಗ ಮಂಡಲ ನೋಡಿಕೊಂಡು ಮೂರನೇ ದಿನ ಶ್ರವಣಬೆಳ ಗೋಳ, ಹೇಳೆಬೀಡು ನೋಡಿಕೊಂಡು ಬೇಲೂರಿನಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದು ನಾಲ್ಕನೇ ದಿನ ಬೇಲೂರು ವೀಕ್ಷಣೆ ಮಾಡಿಕೊಂಡು ಯಡಿಯೂರು ನೋಡಿಕೊಂಡು ವಾಪಸ್ ಬರಲಿದ್ದಾರೆ.
ಉದಯವಾಣಿ ವಿಶೇಷ ವರದಿ :
ಶಾಲಾ ಮಕ್ಕಳಿಗೆ ಸಕಾಲದಲ್ಲಿ ಕರ್ನಾಟಕ ದರ್ಶನ ಪ್ರವಾಸ ಕೈಗೊಳ್ಳದ ಬಗ್ಗೆ ಕಳೆದ 2023ರ ನ.29 ರಂದು ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ಶಾಲಾ ಮಕ್ಕಳಿಗೆ ಕರ್ನಾಟಕ ದರ್ಶನ ಯಾವಾಗ? ಎಂಬ ಶೀರ್ಷಿಕೆಯಡಿ “ವಿಶೇಷ ವರದಿ’ ಪ್ರಕಟಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನ ಸೆಳೆದಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
-ಕಾಗತಿ ನಾಗರಾಜಪ್ಪ