ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸುವ ಬಗ್ಗೆ ನಾವು ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದೆವು. ಅದರಂತೆ ಈಗ ರಾಜ್ಯ ಶಿಕ್ಷಣ ನೀತಿಯ ಅಳವಡಿಕೆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಶುಕ್ರವಾರ ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಆವರಣದಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಉದ್ಯೋಗ ಮತ್ತು ನೇಮಕಾತಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಯುತ್ತಿವೆ. ನಾವು ಎನ್‌ಇಪಿ ಮತ್ತು ನಮ್ಮ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ ಪರಾಮರ್ಶೆ ನಡೆಸುತ್ತೇವೆ. ಹೊಸ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಿತವನ್ನು ಗಮನದಲ್ಲಿಟ್ಟು, ಯಾವುದೇ ರೀತಿಯ ಗೊಂದಲವಾಗದಂತೆ ಅನುಷ್ಠಾನ ಮಾಡಬೇಕಿದೆ ಎಂದು ಹೇಳಿದರು.
ರಾಷ್ಟೀಯ ಶಿಕ್ಷಣ ನೀತಿ 2 ವರ್ಷಗಳ ಹಿಂದೆ ಅನುಷ್ಠಾನವಾಗಿದೆ. ಇದರ ಪರ ಮತ್ತು ವಿರೋಧ ಮಾಡುವವರು ಬಹಳ ಜನ ಇದ್ದಾರೆ. ಅದರಲ್ಲೂ ಮುಖ್ಯವಾಗಿ ನಮ್ಮ ಪಕ್ಷದ ನಿಲುವು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊರತು ಪಡಿಸಿ, ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸುವ ವಿಚಾರವನ್ನು ನಮ್ಮ ಪಕ್ಷ ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಗೋಮತಿ ದೇವಿ, ರೋಟರಿ ಕ್ಲಬ್ ಅಧ್ಯಕ್ಷ ಸಂಜಯ್ ಉದಾನಿ, ಸಿಂಡಿಕೇಟ್ ಸದಸ್ಯ ಡಾ.ಎಂ.ಚಿಕ್ಕಮುನಿಯಪ್ಪ ಮುಂತಾದವರಿದ್ದರು.