Advertisement

“ಕೈ”ಗೆ ಮಹತ್ವದ ಸರ್ಜರಿ: ರಾಜ್ಯಕ್ಕೆ ಸುರ್ಜೇವಾಲ; ದಿನೇಶ್‌, ಎಚ್‌ಕೆಪಿ ಎಐಸಿಸಿಗೆ

12:17 AM Sep 12, 2020 | mahesh |

ಬೆಂಗಳೂರು/ಹೊಸದಿಲ್ಲಿ: ನಾಯಕತ್ವ ಬದಲಾವಣೆ ಸಂಬಂಧ ಎದ್ದಿದ್ದ ಕಿಡಿ ಆರಿಸಲು ಮುಂದಾಗಿರುವ ಎಐಸಿಸಿಯ ಮಧ್ಯಾಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರೀ ಸರ್ಜರಿಯನ್ನೇ ಮಾಡಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೈಬಿಡಲಾಗಿದ್ದು, ಸಿಡಬ್ಲ್ಯೂಸಿ ಸದಸ್ಯ ರನ್ನಾಗಿ ಮುಂದುವರಿಸಲಾಗಿದೆ.

Advertisement

ಕರ್ನಾಟಕದ ಉಸ್ತುವಾರಿಯಾಗಿದ್ದ ಕೆ.ಸಿ. ವೇಣುಗೋಪಾಲ್‌ ಅವರನ್ನು ಸಂಪೂರ್ಣವಾಗಿ ಸಂಘಟನಾತ್ಮಕ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲೇ ಬಳಸಿಕೊಳ್ಳಲು ನಿರ್ಧರಿಸಿದಂತಿರುವ ಸೋನಿಯಾ, ಇಲ್ಲಿಗೆ ರಣದೀಪ್‌ ಸುರ್ಜೇವಾಲ ಅವರನ್ನು ನೇಮಿಸಿದ್ದಾರೆ. ರಣದೀಪ್‌ ಇತ್ತೀಚೆಗಷ್ಟೇ ರಾಜಸ್ಥಾನ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ತಮಿಳುನಾಡು, ಪುದುಚೇರಿ ಮತ್ತು ಗೋವಾ ಹಾಗೂ ಎಚ್‌.ಕೆ. ಪಾಟೀಲ್‌ಗೆ ಮಹಾರಾಷ್ಟ್ರದ ಉಸ್ತುವಾರಿ ಹೊಣೆ ನೀಡಲಾಗಿದೆ. ಕೃಷ್ಣ ಬೈರೇಗೌಡ ಅವರನ್ನು ಕೇಂದ್ರ ಚುನಾವಣ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಲಾಗಿದೆ.

ವೇಣುಗೋಪಾಲ್‌ ಬದಲು
ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯಾಗಿದ್ದ ವೇಣುಗೋಪಾಲ್‌ ಅವರನ್ನು ಬದಲಿಸಲಾಗಿದ್ದು, ಅವರ ಜಾಗಕ್ಕೆ ರಣದೀಪ್‌ ಸುರ್ಜೇವಾಲ ಅವರನ್ನು ನೇಮಿಸಲಾಗಿದೆ.

ಸಿಡಬ್ಲ್ಯುಸಿಯಲ್ಲಿ ಸ್ಥಾನ
ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಮಾಜಿ ಸಚಿವರಾದ ಜೈರಾಮ್‌ ರಮೇಶ್‌ ಮತ್ತು ಕೆ.ಎಚ್‌. ಮುನಿಯಪ್ಪ, ಎಚ್‌.ಕೆ. ಪಾಟೀಲ್‌ ಮತ್ತು ದಿನೇಶ್‌ ಗುಂಡೂರಾವ್‌ ಅವರನ್ನು ಸಿಡಬ್ಲ್ಯುಸಿಗೆ ಶಾಶ್ವತ ಆಹ್ವಾನಿತರನ್ನಾಗಿ ನೇಮಿಸಲಾಗಿದೆ. ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ರಾಜ್ಯದ ಬಿ.ವಿ. ಶ್ರೀನಿವಾಸ್‌ಗೆ ಸ್ಥಾನ ನೀಡಲಾಗಿದೆ.

Advertisement

ರಾಹುಲ್‌ ಬೆಂಬಲಿಗರಿಗೆ ಸ್ಥಾನ
ಪದಾಧಿಕಾರಿಗಳ ಪಟ್ಟಿಯಲ್ಲಿ ರಾಹುಲ್‌ ಬೆಂಬಲಿಗರಿಗೆ ಸ್ಥಾನ ಸಿಗುವುದಿಲ್ಲ ಎಂಬ ಆರೋಪಗಳಿದ್ದವು. ಹೀಗಾಗಿಯೇ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ಬಿಟ್ಟು ಬಿಜೆಪಿಗೆ ಸೇರಿದ್ದರು. ಈಗ ಸೋನಿಯಾ ಅವರು ರಾಹುಲ್‌ ಕಟ್ಟಾ ಬೆಂಬಲಿಗ ಕೆ.ಸಿ. ವೇಣುಗೋಪಾಲ್‌ ಮತ್ತು ರಣದೀಪ್‌ ಸುರ್ಜೇವಾಲ ಅವರಿಗೆ ಎಲ್ಲ ಪ್ರಮುಖ ಸಮಿತಿಗಳಲ್ಲಿ ಸ್ಥಾನ ನೀಡಿದ್ದಾರೆ.

ಆರು ಮಂದಿಯ ಸಹಾಯ
ಕಾಂಗ್ರೆಸ್‌ನ ಸಂಘಟನಾತ್ಮಕ ವಿಷಯಗಳಲ್ಲಿ ಸೋನಿಯಾ ಗಾಂಧಿಗೆ ಸಹಾಯ ಮಾಡುವ ಸಂಬಂಧ ಆರು ಮಂದಿಯ ಸಮಿತಿ ರಚಿಸಲಾಗಿದೆ. ಇದರಲ್ಲಿ ನಾಯಕತ್ವ ಬದಲಾವಣೆಗಾಗಿ ಕೂಗು ಎಬ್ಬಿಸಿದ್ದ 23 ಮಂದಿಯಲ್ಲಿ ಒಬ್ಬರಾಗಿರುವ ಮುಕುಲ್‌ ವಾಸ್ನಿಕ್‌ ಮಾತ್ರ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಎ.ಕೆ. ಆ್ಯಂಟನಿ, ಅಹ್ಮದ್‌ ಪಟೇಲ್‌, ಅಂಬಿಕಾ ಸೋನಿ, ಕೆ.ಸಿ. ವೇಣುಗೋಪಾಲ್‌ ಮತ್ತು ರಣದೀಪ್‌ ಸುರ್ಜೇವಾಲ ಈ ಸಮಿತಿಯಲ್ಲಿದ್ದಾರೆ.

ಆಜಾದ್‌ಗೆ ತಾರೀಖ್‌ ಏಟು
ನಾಯಕತ್ವ ಬದಲಾವಣೆಗಾಗಿ ಪತ್ರ ಬರೆದವರಲ್ಲಿ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರಿಗೆ ತಾರೀಖ್‌ ಅನ್ವರ್‌ ಮೂಲಕ ಸೋನಿಯಾ ತಿರುಗೇಟು ನೀಡಿದ್ದಾರೆ. ಆಜಾದ್‌ರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡಲಾಗಿದ್ದರೆ, ತಾರೀಖ್‌ ಅನ್ವರ್‌ರಿಗೆ ಪ್ರಧಾನ ಕಾರ್ಯದರ್ಶಿ, ಸಿಡಬ್ಲ್ಯುಸಿಯಲ್ಲೂ ಸ್ಥಾನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next