Advertisement

ಸಿದ್ದು ದುರಹಂಕಾರವೇ ಕೈ ಸೋಲಿಗೆ ಕಾರಣ

12:55 AM May 22, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿದರೆ ಅದಕ್ಕೆ ಸಿದ್ದರಾಮಯ್ಯ ಅವರ ದುರಹಂಕಾರವೇ ಕಾರಣ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್ ಬಫ‌ೂನ್‌ ಇದ್ದ ಹಾಗೆ. ಅವರಿಗೆ ಏನೂ ಗೊತ್ತಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ರೋಷನ್‌ ಬೇಗ್‌ ವಾಗ್ಧಾಳಿ ನಡೆಸಿದ್ದಾರೆ.

Advertisement

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಮತಗಟ್ಟೆ ಸಮೀಕ್ಷೆ ನೋಡಿ ಬೇಸರವಾಯಿತು. ಸಿದ್ದರಾಮಯ್ಯ ಅವರ ದುರಹಂಕಾರದಿಂದಲೇ ಪಕ್ಷಕ್ಕೆ ಈ ಗತಿ ಬಂದಿದೆ. ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷಕ್ಕೆ ಈ ಗತಿ ತಂದರಲ್ಲಾ ಎಂದು ಬೇಸರವಾಗುತ್ತಿದೆ ಎಂದರು.

‘ಸಿದ್ದರಾಮಯ್ಯ ಅವರೇ ಜೆಡಿಎಸ್‌ನವರ ಮನೆಯ ಬಾಗಿಲಿಗೆ ಹೋಗಿ ಅಧಿಕಾರ ಕೊಟ್ಟು ಮುಖ್ಯಮಂತ್ರಿ ಮಾಡಿದ್ದಾರೆ. ಈಗ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎನ್ನುವುದು ಎಷ್ಟು ಸರಿ?. ಈಗ ಮುಖ್ಯಮಂತ್ರಿಯಾಗಲು ಹೇಗೆ ಸಾಧ್ಯ?. ಸಿದ್ದರಾಮಯ್ಯ ಅವರಿಗೆ ಕಾಮನ್‌ಸೆನ್ಸ್‌ ಬೇಡವೇ?. ಇದೆಲ್ಲವನ್ನೂ ಜನರು ನೋಡುತ್ತಾರೆ’ ಎಂದು ಆರೋಪಿಸಿದರು.

ಧರ್ಮ ಒಡೆದಿರುವುದಕ್ಕೆ ಸೋಲು: ಸಿದ್ದರಾಮಯ್ಯ ಅವರು ಲಿಂಗಾಯತರ ಹೆಸರಿನಲ್ಲಿ ಧರ್ಮವನ್ನು ಒಡೆಯಲು ಮುಂದಾಗಿರುವುದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳುವಂತಾಯಿತು. ಅದರಿಂದ ಸುಮಾರು ಇಪ್ಪತ್ತರಿಂದ ಮೂವತ್ತು ಸ್ಥಾನಗಳು ಕಡಿಮೆ ಬಂದವು. ವಿಧಾನಸಭೆ ಚುನಾವಣೆಯಲ್ಲಿ 120 ರಿಂದ 79ಕ್ಕೆ ಇಳಿಯಲು ಧರ್ಮ ಒಡೆದಿರುವುದೇ ಕಾರಣ. ಅಲ್ಲದೆ, ಸಿದ್ದರಾಮಯ್ಯ ಪ್ರತಿ ದಿನ ಒಕ್ಕಲಿಗ ನಾಯಕರನ್ನು ಬಾಯಿಗೆ ಬಂದಂತೆ ಬೈದರೆ, ಆ ಸಮುದಾಯದವರು ಕಾಂಗ್ರೆಸ್‌ಗೆ ಮತ ಹಾಕುತ್ತಾರಾ?. ಹೀಗಾಗಿಯೇ ಒಕ್ಕಲಿಗರು ಹಾಗೂ ಲಿಂಗಾಯತರು ಧ್ರುವೀಕರಣಗೊಂಡರು. ಇದರಿಂದ ಕಾಂಗ್ರೆಸ್‌ಗೆ ಸೋಲಾಯಿತು ಎಂದರು.

ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ. ರಾಮಲಿಂಗಾ ರೆಡ್ಡಿ ಹಾಗೂ ನನ್ನಂತ ಹಿರಿಯರನ್ನು ನಿರ್ಲಕ್ಷ್ಯ ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಲ್ಲಿಯೂ ಅನ್ಯಾಯ ಮಾಡಲಾಯಿತು. ಪ್ರತಿ ಬಾರಿಯೂ ಮೂವರು ಅಲ್ಪಸಂಖ್ಯಾñ‌ರಿಗೆ ಟಿಕೆಟ್ ನೀಡುತ್ತಿದ್ದರು. ಈ ಬಾರಿ ಸಮುದಾಯವನ್ನು ಕಡೆಗಣಿಸಲಾಯಿತು. ಕಾಂಗ್ರೆಸ್‌ ಪಕ್ಷ ಮುಸ್ಲಿಂ ಸಮುದಾಯವನ್ನು ಓಟ್ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದೆ. ಮುಸ್ಲಿಂ ಸಮುದಾಯದ ನಾಯಕರು ಒಂದೇ ಕಡೆ ಇರುವುದು ಒಳ್ಳೆಯದಲ್ಲ. ಮುಸ್ಲಿಂ ಸಮುದಾಯ ಪಶು ಬಲಿಯಂತೆ ಆಗಬಾರದು. ಹಲಾತ್‌ ಸೇ ಸಮಜೋತಾ ಕರೋ ಎನ್ನುವ ಮೂಲಕ ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದಾರೆ. ಬಿಜೆಪಿ ಸೇರುವ ಬಗ್ಗೆಯೂ ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿದರು.

Advertisement

ಕಾಂಗ್ರೆಸ್‌ ಉಸ್ತುವಾರಿ ವಿರುದ್ಧವೂ ವಾಗ್ಧಾಳಿ
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧವೂ ಬೇಗ್‌ ನೇರವಾಗಿಯೇ ಆರೋಪ ಮಾಡಿದ್ದು, ‘ಅವರೊಬ್ಬ ಬಫ‌ೂನ್‌’ ಎಂದು ಜರಿದರು. ರಾಜ್ಯ ರಾಜಕೀಯದ ತಳಮಟ್ಟದ ವಾಸ್ತವ ಚಿತ್ರಣ ಅವರಿಗೆ ಗೊತ್ತಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವುದಷ್ಟೇ ಅವರ ಕೆಲಸವಾಗಿದೆ. ಅವರಿಂದ ರಾಜ್ಯದಲ್ಲಿ ಪಕ್ಷಕ್ಕೆ ಯಾವುದೇ ಅನುಕೂಲವಾಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದಲ್ಲಿದ್ದ ಪಕ್ಷ 78 ಸ್ಥಾನಕ್ಕೆ ಕುಸಿದಾಗಲೇ ಅವರು ರಾಜೀನಾಮೆ ನೀಡಬೇಕಿತ್ತು ಎಂದರು.

ತಾಕತ್ತಿದ್ದರೆ ರಾಜೀನಾಮೆ ನೀಡಲಿ
ಬೆಂಗಳೂರು:
ರೋಷನ್‌ ಬೇಗ್‌ ಅವರು ಚುನಾವಣೆಯಲ್ಲಿ ಯಾವ ಪಕ್ಷದ ಪರ ಕೆಲಸ ಮಾಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ನಂತರ ಅವರು ಪಕ್ಷದ ನಾಯಕರ ವಿರುದ್ಧ ಆರೋಪ ಮಾಡಲಿ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಸರಿ ಇಲ್ಲ ಎಂದು ಹೇಳಿರುವ ಬೇಗ್‌ಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಯಿಂದ ಶಿವಾಜಿನಗರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು. ಜನತಾದಳದಿಂದ ಬಂದಾಗ ಕಾಂಗ್ರೆಸ್‌ ಅವರನ್ನು ಶಾಸಕರನ್ನಾಗಿ ಮಾಡಿತು. ಹತ್ತು ವರ್ಷ ಮಂತ್ರಿಯಾಗಿಯಾಗಿದ್ದಾರೆ. ನಿಮಗೆ ಅವಕಾಶ ಸಿಗದಿದ್ದರೆ, ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತೀರಿ. ಕಾಂಗ್ರೆಸ್‌ ಪಕ್ಷಕ್ಕೆ ನಿಮ್ಮ ಕೊಡುಗೆ ಏನು? ಎಂದು ರಿಜ್ವಾನ್‌ ಪ್ರಶ್ನಿಸಿದ್ದಾರೆ.

ಕಾರಣ ಕೇಳಿ ನೋಟಿಸ್‌

ಬೆಂಗಳೂರು: ಪಕ್ಷ ಹಾಗೂ ನಾಯಕರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ರೋಷನ್‌ ಬೇಗ್‌ಗೆ ಕಾರಣ ಕೇಳಿ ಕಾಂಗ್ರೆಸ್‌ ನೋಟಿಸ್‌ ಜಾರಿ ಮಾಡಿದೆ.

ಕೆ.ಸಿ.ವೇಣುಗೋಪಾಲ್, ದಿನೇಶ್‌ ಗುಂಡೂರಾವ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡಿರುವುದು ವರದಿಯಾಗಿದೆ. ಪಕ್ಷಕ್ಕೆ ಮುಜುಗರವಾಗುವಂತ ಹೇಳಿಕೆ ನೀಡಿ, ಪಕ್ಷದ ವಿರುದ್ಧ ನಡೆದುಕೊಂಡಿದ್ದೀರಿ. ಇದರಿಂದ ಪಕ್ಷದ ಘನತೆಗೆ ಧಕ್ಕೆಯುಂಟಾಗಿದೆ. ಹೀಗಾಗಿ, ತಮ್ಮ ಹೇಳಿಕೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಏಕೆ ಪರಿಗಣಿಸಬಾರದು?. ಈ ಬಗ್ಗೆ ಒಂದು ವಾರದಲ್ಲಿ ಸೂಕ್ತ ವಿವರಣೆ ನೀಡಿ ಎಂದು ಸೂಚಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಗೋರ್ಪಡೆ ಅವರು ನೋಟಿಸ್‌ ನೀಡಿದ್ದಾರೆ.

ಅವರ ನೋಟಿಸ್‌ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ರೋಷನ್‌ ಬೇಗ್‌, ‘ಅಸಮರ್ಥ ನಾಯಕರು ನೀಡಿರುವ ನೋಟಿಸ್‌ನ್ನು ಓದುವುದಕ್ಕೆ ಹೋಗುವುದಿಲ್ಲ. ಇವರು ಮಂತ್ರಿ ಸ್ಥಾನಗಳನ್ನು ಹೇಗೆ ಮಾರಿಕೊಂಡಿದ್ದಾರೆ ಎಂಬುದು ಗೊತ್ತಿದೆ. ಇಂತವರು ಕುದುರೆ ವ್ಯಾಪಾರವನ್ನು ವಿರೋಧಿಸುತ್ತಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ನಾಯಕತ್ವ, ಪಕ್ಷ ಏನು ಎನ್ನುವುದನ್ನು ವ್ಯಾಖ್ಯಾನಿಸುತ್ತದೆ. ಹಾಗಾಗಿ, ನಾನು ಅಂತಹ ನಾಯಕರ ಕುರಿತು ಮಾತನಾಡಿದ್ದೇನೆ. ಪಕ್ಷ ನಡೆಸಲು ಅನೇಕ ಹಿರಿಯ ನಾಯಕರು ಸಮರ್ಥರಾಗಿದ್ದಾರೆ. ಆದರೆ, ಅವರನ್ನೆಲ್ಲ ಸೈಡ್‌ಲೈನ್‌ ಮಾಡಲಾಗಿದೆ. ಡಿ.ಕೆ.ಶಿವಕುಮಾರ್‌, ಎಂ.ಬಿ. ಪಾಟೀಲ್, ಕೆ.ಜೆ.ಜಾರ್ಜ್‌ ಸ್ವಂತ ಶಕ್ತಿ ಮೇಲೆ ಇನ್ನೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಆದರೆ, ನಾನು ಮಾತನಾಡಿರುವುದು ದುರಾಡಳಿತದಿಂದ ಪಕ್ಷವನ್ನು ಹಾಳು ಮಾಡುತ್ತಿರುವವರ ಬಗ್ಗೆ. ದುರಾಡಳಿತ ನಡೆಸುತ್ತಿರುವ ನಾಯಕರು ಪಕ್ಷದ ಮುಖಂಡರನ್ನು ಎಟಿಎಂ ಹಾಗೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಪುತ್ರನಿಂದಲೂ ವಾಗ್ಧಾಳಿ
ರೋಷನ್‌ ಬೇಗ್‌ ಅವರ ಪುತ್ರ ರುಮಾನ್‌ ಬೇಗ್‌ ಕೂಡ ಕಾಂಗ್ರೆಸ್‌ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ‘ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಕೇವಲ ಓಟ್ ಬ್ಯಾಂಕ್‌ ಆಗಿ ಬಳಕೆಯಾಗುತ್ತಿದ್ದಾರೆ. ಅಲ್ಪಸಂಖ್ಯಾ ತರಲ್ಲಿ ಕಾಂಗ್ರೆಸ್‌ ಭಯದ ವಾತಾವರಣ ಸೃಷ್ಠಿಸಿದೆ. ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡಲು ನಿರ್ಧರಿಸಿ ದರೆ, ಅಂತವರನ್ನು ಕಾಂಗ್ರೆಸ್‌ ಅಪರಾಧಿ ಸ್ಥಾನದಲ್ಲಿ ಇಡುತ್ತದೆ’ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳನ್ನು ನಂಬಿಕೊಂಡು ರೋಷನ್‌ ಬೇಗ್‌ ಹೇಳಿಕೆ ಕೊಡುವುದು ಸರಿಯಲ್ಲ. ಅನೇಕ ವರ್ಷಗಳಿಂದ ಪಕ್ಷದಲ್ಲಿರುವ ಅವರಿಗೆ ಹೈಕಮಾಂಡ್‌ ನೊಂದಿಗೆ ಒಡನಾಟ ಇದೆ. ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ಹೈಕಮಾಂಡ್‌ ಬಳಿ ಹೇಳಲಿ. ಅದು ಬಿಟ್ಟು ಯಾರ ಮೇಲೂ ನೇರ ಆಪಾದನೆ ಮಾಡುವುದು ಸೂಕ್ತವಲ್ಲ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಹಿರಿಯ ನಾಯಕ

ರೋಷನ್‌ ಬೇಗ್‌ ಹೊಸ ಸಿನಿಮಾ ಟೀಸರ್‌ ಬಿಟ್ಟಿದ್ದಾರೆ. ಪೂರ್ಣ ಪ್ರಮಾಣದ ಸಿನಿಮಾ ಸದ್ಯದಲ್ಲೇ
ರಿಲೀಸ್‌ ಆಗಲಿದೆ. ಜತೆಗೆ ಇನ್ನೂ ಹಲವು ಸಿನಿಮಾ ಟೀಸರ್‌ಗಳು ಹೊರ ಬರಲಿವೆ.
● ಆರ್‌.ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ

ಬೇಗ್‌ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಎಕ್ಸಿಟ್‌ ಪೋಲ್‌ ನೋಡಿ ಆತಂಕಪಡುವ ಅಗತ್ಯವಿಲ್ಲ. ಎಲ್ಲರೂ ಸಂಯಮ ಕಾಪಾಡಿಕೊಳ್ಳಬೇಕು.
● ಎಚ್‌.ಕೆ.ಪಾಟೀಲ್‌,ಮಾಜಿ ಸಚಿವ

ಸಿದ್ದರಾಮಯ್ಯ ವಿರುದಟಛಿ ರೋಷನ್‌ ಬೇಗ್‌ ಆಕ್ಷೇಪಾರ್ಹವಾಗಿ ಮಾತನಾಡುವುದು ಸರಿಯಲ್ಲ.
ದಿನೇಶ್‌ ಗುಂಡೂರಾವ್‌ ಸರಿಯಿಲ್ಲ ಎನ್ನುವುದಾದರೆ, ಅವರೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲಿ.
● ಎಂ.ಟಿ.ಬಿ.ನಾಗರಾಜ್‌, ವಸತಿ ಸಚಿವ.

ಹೇಳಿಕೆಗೆ ಉತ್ತರ ನೀಡಲು ನಾನು ಬಸ್‌ಸ್ಟಾಂಡ್‌ ಬಸವಣ್ಣ ಅಲ್ಲ. ಅವರ ಹೇಳಿಕೆ ನೋಡಿ ಪ್ರತಿಕ್ರಿಯೆ
ನೀಡುತ್ತೇನೆ. ಅವರು ಏನು ಮಾತನಾಡಿದ್ದಾರೋ ಗೊತ್ತಿಲ್ಲ.
● ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್‌ ಸದಸ್ಯ.

Advertisement

Udayavani is now on Telegram. Click here to join our channel and stay updated with the latest news.

Next