ಬೆಂಗಳೂರು: ಪಕ್ಷದ ಸರಣಿ ಸಭೆಗಳ ನಡುವೆಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಮತ್ತು
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಗುರುವಾರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ
ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಸುದೀರ್ಘ ಚರ್ಚೆ ನಡೆಸಿದರು.
ಬೆಳಿಗ್ಗೆ 8 ಗಂಟೆಗೇ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು, ಸ್ವಾಮೀಜಿ ಆಶೀರ್ವಾದ ಪಡೆದು, ನಂತರ
ತಿಂಡಿ ಸೇವಿಸಿದರು. ಸುಮಾರು ಒಂದೂವರೆ ತಾಸು ಮಾತುಕತೆ ನಡೆಸಿ, ಪ್ರಸ್ತುತ ರಾಜಕೀಯ ಬೆಳವಣಿಗೆಗಳು
ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.
ಚರ್ಚೆ ವೇಳೆ ಬೇರೆ ಯಾವ ನಾಯಕರಿಗೂ ಪ್ರವೇಶ ಇರಲಿಲ್ಲ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಸ್ವಾಮೀಜಿ ಯೊಂದಿಗಿನ ಈ ಸುದೀರ್ಘ ಚರ್ಚೆ ಕುತೂಹಲ ಮೂಡಿಸಿದೆ. ಸ್ವಾಮೀಜಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, “ಈ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ಇದೊಂದು ಔಪಚಾರಿಕ ಭೇಟಿ. ಸ್ವಾಮೀಜಿಯಿಂದ ಆಶೀರ್ವಾದ ಪಡೆಯಲು ಬಂದಿದ್ದೆವು. ಭೇಟಿ ವೇಳೆ ಯಾವುದೇ ರಾಜಕೀಯ ವಿಷಯಗಳು ಚರ್ಚೆಗೆ ಬರಲಿಲ್ಲ’ ಎಂದು ತಿಳಿಸಿದರು.
ಚುನಾವಣೆ ಹತ್ತಿರ ಇರುವಾಗ ಮಠಗಳಿಗೆ ಭೇಟಿ ನೀಡುತ್ತಿರುವುದರ ಹಿಂದಿನ ಉದ್ದೇಶವೇನು ಎಂದು ಕೇಳಿದಾಗ, “ಚುನಾವಣೆ ಮುಂದಿರುವುದರಿಂದ ಭೇಟಿ ನೀಡುತ್ತಿಲ್ಲ. ನಾನು ಆಗಾಗ್ಗೆ ಮಠಗಳಿಗೆ ಹೋಗುತ್ತಿರುತ್ತೇನೆ. ಕೇವಲ ಆದಿಚುಂಚನಗಿರಿ ಮಠವಲ್ಲ, ತುಮಕೂರಿನ ಸಿದ್ಧಗಂಗಾ ಮಠ, ಸುತ್ತೂರು ಮಠ ಸೇರಿ ರಾಜ್ಯದ ವಿವಿಧ ಮಠಗಳಿಗೆ ಭೇಟಿ ನೀಡಿ, ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತಿರುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಸಂಬಂಧ ಇಲ್ಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಈಚೆಗೆ ಭೇಟಿ ನೀಡಿದ್ದರು. ಅದರ ಬೆನ್ನಲ್ಲೇ ರಾಜ್ಯ
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಜತೆ ತಾವೂ ಭೇಟಿ ನೀಡುತ್ತಿದ್ದೀರಿ ಎಂದಾಗ, “ಅದಕ್ಕೂ ಇದಕ್ಕೂ
ಸಂಬಂಧವಿಲ್ಲ. ಅಮಿತ್ ಶಾ ಯಾಕೆ ಮಠಕ್ಕೆ ಭೇಟಿ ನೀಡಿದ್ದರು? ಏನು ಮಾತನಾಡಿದರು ಎಂಬುದು ನನಗೆ ಗೊತ್ತಿಲ್ಲ. ಆದರೆ, ನನಗೆ ಮಾತ್ರ ಮಠಗಳಿಗೆ ಭೇಟಿ ನೀಡುವುದು ಒಂದು ಸಂಪ್ರದಾಯ. ಹಾಗಾಗಿ, ಭೇಟಿ ನೀಡುತ್ತೇನೆ’ ಎಂದರು.