Advertisement

ಕೈಗಾರಿಕೆ ಅಭಿವೃದ್ಧಿಗೆ ರಾಜಕೀಯ ಇಚ್ಛಾ ಶಕ್ತಿ ಕೊರತೆ

01:24 PM Apr 05, 2019 | Naveen |

ಕಲಬುರಗಿ: ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕದಲ್ಲಿ ಕೈಗಾರಿಕೆ ಅಭಿವೃದ್ಧಿ ನಿಟ್ಟಿನಲ್ಲಿ ಹೂಡಿಕೆದಾರರನ್ನು ಸೆಳೆಯುವಲ್ಲಿ ಈ ಭಾಗದ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಉದ್ಯಮ ನಡೆಸುವ ವಾತಾವರಣ ಸೃಷ್ಟಿಸುವ ಹೊಣೆ ಸ್ಥಳೀಯ ಜನಪ್ರತಿನಿಧಿಗಳ ಮೇಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಫೆಡರೇಷನ್‌ (ಎಫ್‌ಕೆಸಿಸಿಐ) ಅಧ್ಯಕ್ಷ ಸುಧಾಕರ ಶೆಟ್ಟಿ ಹೇಳಿದರು.

Advertisement

ನಗರದ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಕೈಗಾರೀಕರಣ, ಎಪಿಎಂಸಿ, ಜಿಎಸ್‌ಟಿ, ಬ್ಯಾಂಕಿಂಗ್‌ ಮತ್ತು ವಾಣಿಜ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ಎಫ್‌ ಕೆಸಿಸಿಐ, ಎಚ್‌ಕೆಸಿಸಿಐ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಉದ್ಯಮಗಳು ಯಥೇತ್ಛವಾಗಿವೆ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ ಕರ್ನಾಟಕದಲ್ಲಿ ಹೊಸ
ಉದ್ಯಮ ಸ್ಥಾಪಿಸುವ ಕುರಿತು ಹೂಡಿಕೆದಾರರಿಗೆ ಮನವರಿಕೆ
ಮಾಡಿಕೊಡಲಾಗುತ್ತದೆ. ಕೈಗಾರಿಕೋದ್ಯಮ ಬೆಳೆದಂತೆ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷ ಆರ್ಥಿಕ
ವಲಯ ಸ್ಥಾಪಿಸಬೇಕು. ರಾಜ್ಯ ಸರ್ಕಾರ ಇದಕ್ಕಾಗಿ ನೀರು, ವಿದ್ಯುತ್‌ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸುವುದು ಅತ್ಯವಶ್ಯಕ ಎಂದರು.

ಹೈ.ಕ ಭಾಗಕ್ಕೆ ಜಾರಿಯಾದ 371ನೇ (ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ರಾಜ್ಯ ಸರ್ಕಾರ 2019-2024ರ ಹೊಸ ಕೈಗಾರಿಕಾ ನೀತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಿದೆ. ಭಾವಾಂತರ ಯೋಜನೆ ಜಾರಿಗೆ ಹೋರಾಟ ನಡೆಯುತ್ತಿದೆ. ಈ ಎಲ್ಲ ಅಂಶಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕೆಂದು ಎಫ್‌ಕೆಸಿಸಿಐ ಒತ್ತಡ ಹೇರಲಿದೆ ಎಂದು ಹೇಳಿದರು.

ಕಲಬುರಗಿಯಲ್ಲಿ ದಾಲ್‌ಮಿಲ್‌ಗ‌ಳು ಸಮಸ್ಯೆ ಸುಳಿಯಲ್ಲಿ ಸಿಲುಕಿವೆ. 300ಕ್ಕೂ ಹೆಚ್ಚು ದಾಲ್‌ ಮಿಲ್‌ಗ‌ಳ ಪೈಕಿ ಸುಮಾರು 150 ದಾಲ್‌ ಮಿಲ್‌ಗ‌ಳು ಮುಚ್ಚಿವೆ. ಅಂದಾಜು 100 ದಾಲ್‌ ಮಿಲ್‌ಗ‌ಳು ಬ್ಯಾಂಕ್‌ನವರ ಮುಟ್ಟುಗೋಲಿನ ಭೀತಿಯಲ್ಲಿವೆ. ಆದ್ದರಿಂದ ದಾಲ್‌ ಮಿಲ್‌ ಪುನಶ್ಚೇತನಕ್ಕೆ ಕ್ರಮಕೈಗೊಳ್ಳುವ ಅಗತ್ಯವಿದೆ. ಮಹಿಳಾ ಉದ್ಯಮ ಸ್ಥಾಪನೆಗೂ ಹೆಚ್ಚಿನ ಗಮನ ಹರಿಸಬೇಕು. ಕೈಗಾರಿಕೆಗಳ ಬಗ್ಗೆ ಬ್ಯಾಂಕ್‌ನವರ ಮನೋಭಾವವೂ ಬದಲಾಗಬೇಕಿದೆ ಎಂದರು.

Advertisement

ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ಕೈಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಫ್‌ಕೆಸಿಸಿಐ ಪ್ರತಿ ವರ್ಷ ವಿಭಾಗೀಯ ಮಟ್ಟದಲ್ಲಿ ನಾಲ್ಕು ಕಾರ್ಯಾಗಾರಗಳನ್ನು ನಡೆಸುತ್ತಿದೆ. ಈ ಸಲ ಕಲಬುರಗಿಯಲ್ಲಿ ಕಾರ್ಯಾಗಾರ ನಡೆಸಿದ್ದು, ಈ ಭಾಗದ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ ಎಂದರು.

ಎಫ್‌ಕೆಸಿಸಿಐ ಉಪಾಧ್ಯಕ್ಷ ಸಿ.ಆರ್‌. ಜನಾರ್ಧನ, ಕೈಗಾರಿಕಾ ಸಮಿತಿ ಅಧ್ಯಕ್ಷ ಎನ್‌. ಸತೀಶ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಯಶವಂತರಾವ, ಉಪಾಧ್ಯಕ್ಷ ಚನ್ನಮಲ್ಲಿಕಾರ್ಜುನ ಅಕ್ಕಿ, ವ್ಯವಸ್ಥಾಪಕ ಸಮಿತಿ ಸದಸ್ಯ ರಾಜ ಪುರೋಹಿತ, ಎಚ್‌ಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡುಗಿ, ಎಚ್‌ಕೆಸಿಸಿಐ ಕಾರ್ಯದರ್ಶಿ ಶಶಿಕಾಂತ ಪಾಟೀಲ ಹಾಗೂ ಇತರರು ಇದ್ದರು.

ಕಲಬುರಗಿ ಮತ್ತು ತುಮಕೂರಿನಲ್ಲಿ ರಾಷ್ಟ್ರೀಯ ಬಂಡವಾಳ ಹೂಡಿಕೆ ವಲಯ (ನಿಮ್ಜ್ ) ಸ್ಥಾಪನೆ ಕುರಿತು ಏಕಕಾಲಕ್ಕೆ ಕೇಂದ್ರ
ಸರ್ಕಾರ ಘೋಷಿಸಿತ್ತು. ನಿಮ್ಜ್ ಸ್ಥಾಪನೆಯಿಂದ ಸುಮಾರು 2.50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ತುಮಕೂರಿನಲ್ಲಿ ಈಗಾಗಲೇ ನಿಮ್ಜ್ ಸ್ಥಾಪನೆ ಆಗಿದೆ. ಆದರೆ, ಕಲಬುರಗಿ ಭಾಗದ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರದ ಕಾರಣ ನಿಮ್ಜ್ ಸ್ಥಾಪನೆ ನನೆಗುದಿಗೆ ಬಿದ್ದಿದೆ.
ಸುಧಾಕರ ಶೆಟ್ಟಿ,
ಎಫ್‌ಕೆಸಿಸಿಐ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next