Advertisement

Karnataka: ಹೊಸ ವರ್ಷದಂದೇ ಸಿಎಂ ಸಿದ್ದರಾಮಯ್ಯ ಆರ್ಥಿಕ ಪಾಠ!

11:40 PM Jan 01, 2025 | Team Udayavani |

ಬೆಂಗಳೂರು: ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಇಲಾಖೆ
ಗಳಲ್ಲಿರುವ ಹಣ ಸೋರಿಕೆಯಾಗದಂತೆ ತಡೆಗಟ್ಟುವುದರ ಜತೆಗೆ ಸಮತೂಕದ ನಿರ್ವಹಣೆ ನಿಮ್ಮದಾಗಬೇಕು ಎಂದು ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಆರ್ಥಿಕ ಶಿಸ್ತಿನ ಪಾಠ ಮಾಡಿದ್ದಾರೆ. ಜತೆಗೆ ಪ್ರಾದೇಶಿಕ ಅಸಮತೋಲನ, ಅಸಮಾನತೆ ತೊಡೆಯಲು ನಿಮ್ಮ ಸಹಕಾರ ಹೆಚ್ಚಬೇಕು ಎಂದೂ ಕರೆ ನೀಡಿದ್ದಾರೆ.

Advertisement

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿ ಅವರು ಮಾತನಾಡಿ, ಇಲಾಖೆಗಳಲ್ಲಿರುವ ಹಣ ಹೆಚ್ಚು ಸೋರಿಕೆ ಆಗದಂತೆ ತಡೆಯುವ ಜವಾಬ್ದಾರಿ ಮತ್ತು ಕರ್ತವ್ಯ ನಿಮ್ಮ ಮೇಲಿದೆ. ಹಣ ಸಂಗ್ರಹಿಸುವ ಇಲಾಖೆಗಳು ಮತ್ತು ಹಣ ಖರ್ಚು ಮಾಡುವ ಇಲಾಖೆಗಳೆರಡೂ ಸಮತೂಕದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಆಡಳಿತದಲ್ಲಿ ಐಎಎಸ್‌, ಐಪಿಎಸ್‌ ಹಾಗೂ ಐಎಫ್ಎಸ್‌ ಅಧಿಕಾರಿಗಳ ಜವಾಬ್ದಾರಿ ಹೆಚ್ಚು. ನಾವು ಕಾನೂನುಗಳನ್ನು ರಚಿಸಿ, ಜಾರಿ ಆಗುವ ದಿಕ್ಕಿನಲ್ಲಿ ನಿರಂತರ ನಿಗಾ ವಹಿಸುತ್ತೇವೆ. ಅಧಿಕಾರಿ ವರ್ಗ ಸಮಾಜಕ್ಕೆ ಪೂರಕವಾಗಿ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಮಾಜದ ಎಲ್ಲ ವರ್ಗಗಳಿಗೆ ಸಾಮಾಜಿಕ-ಆರ್ಥಿಕ ಸ್ವಾತಂತ್ರ್ಯ ಒದಗಿಸಬೇಕು. ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುವುದಿಲ್ಲ ಎಂದು ಸಲಹೆ ನೀಡಿದರು.

ಪರಿಣಾಮಕಾರಿಯಾಗಿ ಗ್ಯಾರಂಟಿ ತಲುಪಿಸಿ
ಸಮಾನ ಅವಕಾಶಗಳು ಸಿಕ್ಕಾಗ ಸಮಾನತೆ ದಿಕ್ಕಿಗೆ ನಾವು ಸಾಗಬಹುದು ಎನ್ನುವ ಕಾರಣದಿಂದಲೇ ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ಜನರ ಕೈಯಲ್ಲಿ ಕಾಸು ಇರಬೇಕು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಇದಕ್ಕೆ ತಕ್ಕಂತೆ ರಾಜ್ಯದ ಜನರ ಜೇಬಲ್ಲಿ ಹಣ ಇರುವ ಗ್ಯಾರಂಟಿಗಳನ್ನು ನಾವು ಜಾರಿ ಮಾಡಿದೆವು. ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರ ಜನರಿಗೆ ಹಣ ತಲುಪಿಸುತ್ತಿದ್ದೇವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಯುವ ಜನತೆ ನಮ್ಮ ಸಮಾಜದ ಆಸ್ತಿ. ಇವರ ಭವಿಷ್ಯ ಹಾಳಾಗದಂತೆ ಎಚ್ಚರ ವಹಿಸುವ ಸವಾಲನ್ನು ಅಧಿಕಾರಿಗಳು ಸ್ವೀಕರಿಸಬೇಕು. ಡ್ರಗ್ಸ್‌ ಹಾವಳಿ, ಅಪರಾಧಿಕ ಜಗತ್ತಿನ ಕಡೆಗೆ ಯುವ ಜನತೆ ಆಕರ್ಷಿತರಾಗದಂತೆ ಎಚ್ಚರ ವಹಿಸಿ. ತಂತ್ರಜ್ಞಾನ ಮತ್ತು ವಿಜ್ಞಾನದ ಪ್ರಗತಿ ಆಗುತ್ತಿದೆ. ಈ ಪ್ರಗತಿ ಅಪರಾಧಗಳಿಗೆ ಬಳಕೆ ಆಗದೆ ಯುವ ಜನರ ಭವಿಷ್ಯ ರೂಪಿಸಲು ಸಹಕಾರಿ ಆಗುವಂತೆ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

Advertisement

ಸರಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್‌ ಅಹಮದ್‌, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಮೋಹನ್‌, ಸಚಿವ ಜಮೀರ್‌ ಅಹಮದ್‌ ಖಾನ್‌, ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಉಪಸ್ಥಿತರಿದ್ದರು.

ಸುಳ್ಳಿಗೆ ಉತ್ತರ ನೀಡಿ: ಸಿಎಂ
ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಸುಳ್ಳನ್ನು ಪದೇ ಪದೆ ಹರಡಿಸುತ್ತಿದ್ದಾರೆ. ಇದು ಸುಳ್ಳು ಎನ್ನುವುದು ನಿಮಗೇ ಗೊತ್ತಿದೆ. ಹಿಂದಿನ ಸರಕಾರ ಬಜೆಟ್‌ ಒಪ್ಪಿಗೆ ಪಡೆಯದೆ ಯದ್ವಾ ತದ್ವಾ ಟೆಂಡರ್‌ ಕರೆದು ಹಾನಿ ಮಾಡಿತ್ತು. ಸುಮಾರು 39 ಸಾವಿರ ಕೋಟಿ ರೂ. ಬಿಲ್‌ ಬಾಕಿ ಉಳಿಸಿ ಹೋಗಿದ್ದರು. ಜತೆಗೆ ಕೇಂದ್ರ ಸರಕಾರದಿಂದ ನಮಗೆ ಅನ್ಯಾಯ ಮುಂದುವರಿದಿದೆ. ಇದೆಲ್ಲವನ್ನೂ ಸರಿದೂಗಿಸಿಕೊಂಡು ಅಭಿವೃದ್ಧಿಗೂ ಹಣ ಒದಗಿಸುತ್ತಿದ್ದೇವೆ. ಇದಕ್ಕೆ ಉತ್ತರ ನೀಡಿ ಎಂದು ಅಧಿಕಾರಿಗಳಿಗೆ ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next