Advertisement

ರೈಸ್‌ಮಿಲ್‌ ನಿಂದ ವಿಧಾನಸೌಧದವರೆಗೆ…

09:30 AM Jul 28, 2019 | Sriram |

ಬೆಂಗಳೂರು: ರೈಸ್‌ಮಿಲ್ನಿಂದ ವಿಧಾನಸೌಧದವರೆಗೆ ಯಡಿಯೂರಪ್ಪ ಪಯಣದಲ್ಲಿ ರಾಜಕೀಯ ಸಾಹಸಗಾಥೆಯೇ ಅಡಗಿದೆ. ಅವರು ಬೆಳೆದುಬಂದ ಬಗ್ಗೆ ಇಲ್ಲಿದೆ ಒಂದು ವಿವರ…

Advertisement

ಮಂಡ್ಯದಲ್ಲಿ ಬಿ.ಎ. ಪದವಿ ಪೂರೈಸಿದ ಮೇಲೆ ಕೆಲಸ ಅರಸಿ ಶಿಕಾರಿಪುರಕ್ಕೆ ಬಂದ ಯಡಿಯೂರಪ್ಪ ಅವರು ವೀರಭದ್ರ ಶಾಸ್ತ್ರೀ ಅವರ ರೈಸ್‌ ಮಿಲ್ನಲ್ಲಿ ಉದ್ಯೋಗ ಆರಂಭಿಸಿದರು. ಶಾಸ್ತ್ರೀ ಅವರ ಪುತ್ರಿ ಮೈತ್ರಾದೇವಿ ಅವರನ್ನು ವರಿಸಿ ಮಾವನ ಮನೆಯಲ್ಲಿ ನೆಲೆಸಿದರು.

ಬಿ.ಎಸ್‌. ಯಡಿಯೂರಪ್ಪ ಅವರಿಗೆ ಇಬ್ಬರುಪುತ್ರರು (ರಾಘವೇಂದ್ರ ಮತ್ತು ವಿಜಯೇಂದ್ರ) ಮತ್ತು ಮೂವರು ಪುತ್ರಿಯರು (ಅರುಣಾದೇವಿ, ಪದ್ಮಾವತಿ ಮತ್ತು ಉಮಾದೇವಿ). 2004ರಲ್ಲಿ ಪತ್ನಿ ಮೈತ್ರಾದೇವಿಯವರು ತೀರಿಕೊಂಡರು.

ಯಡಿಯೂರಪ್ಪ ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದ ಬಡ ರೈತ ಕುಟುಂಬದ ಸಿದ್ಧಲಿಂಗಪ್ಪ ಪುಟ್ಟಮ್ಮ ದಂಪತಿಗೆ 1943ರಲ್ಲಿ ಜನಿಸಿದರು. ತಾಯಿ ಪುಟ್ಟಮ್ಮ ಅವರನ್ನು ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಕಳೆದುಕೊಂಡ ಯಡಿಯೂರಪ್ಪ ತಂದೆಯ ಮಮತೆಯಲ್ಲಿ ಬೆಳೆದವರು.

ಯಡಿಯೂರಪ್ಪ ಅವರ ರಾಜಕೀಯ ಜೀವನ ರೈತ ಹೋರಾಟದ ಮೂಲಕ ಹುಟ್ಟಿಕೊಂಡಿತು. ಸತತ ನಾಲ್ಕು ದಶಕಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದ ಯಡಿಯೂರಪ್ಪ ದಿಢೀರ್‌ ನಾಯಕರಾದವರಲ್ಲ. ಯಾವುದೇ ಗಾಡ್‌ ಫಾದರ್‌ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕನಾಗಿ ಬೆಳೆದರು. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡ ರಾಜ್ಯದ ರಾಜಕೀಯ ಮುತ್ಸದ್ಧಿ ಕೂಡ ಹೌದು.

Advertisement

ಪಕ್ಷ ಸಂಘಟನೆಯಲ್ಲಿ ನಿಪುಣರಾದ ಯಡಿಯೂರಪ್ಪ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಭಾಷಣಕ್ಕೆ ನಿಂತರೆ ಗುಡುಗು ಸಿಡಿಲುಗಳ ಮಳೆಗೈವರು. ರಾಜ್ಯ ಕಂಡ ಅಪರೂಪದ ರಾಜಕಾರಣಿ, ಹೋರಾಟಗಾರ, ಐದು ದಶಕಗಳ ರಾಜಕೀಯ ಅನುಭವ ಹೊಂದಿರುವ ಯಡಿಯೂರಪ್ಪ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಹೋರಾಟದ ಮೂಲಕವೇ ರಾಜಕೀಯದ ಬದುಕು ಕಟ್ಟಿಕೊಂಡಿರುವ ಯಡಿಯೂರಪ್ಪ ಎಂಟು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ, ಉಪ ಮುಖ್ಯಮಂತ್ರಿ, ಹಣಸಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಜೈಲು ವಾಸವನ್ನೂ ಅನುಭವಿಸಿದ್ದರು.

ಜನಪ್ರತಿನಿಧಿಯಾಗಿ ಜವಾಬ್ದಾರಿ
1975ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯ ಸ್ಥಾನಕ್ಕೆ ಆಯ್ಕೆ

1983ರಲ್ಲಿ ಮೊದಲ ಬಾರಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಗೆಲುವು

1983-1994ರಲ್ಲಿ ಸತತ ನಾಲ್ಕು ಬಾರಿ ಶಿಕಾರಿಪುರ ಶಾಸಕರಾಗಿ ಆಯ್ಕೆ

1994ರಲ್ಲಿ ವಿಧಾನಸಭೆ ವಿಪಕ್ಷ ನಾಯಕ

1999ರಲ್ಲಿ ಮೊದಲ ಬಾರಿ ಶಿಕಾರಿಪುರದಲ್ಲಿ ಸೋಲು

2000ರಲ್ಲಿ ವಿಧಾನ ಪರಿಷತ್‌ ಸದಸ್ಯ

2004ರಲ್ಲಿ ಶಿಕಾರಿಪುರದಿಂದ 5ನೇ ಬಾರಿ ಆಯ್ಕೆ, ವಿಪಕ್ಷ ನಾಯಕನ ಜವಾಬ್ದಾರಿ

2004-2018ರಲ್ಲಿ ನಾಲ್ಕು ಬಾರಿ ಶಿಕಾರಿಪುರ ಶಾಸಕರಾಗಿ ಆಯ್ಕೆ

2006ರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಹಣಕಾಸು ಖಾತೆ ನಿರ್ವಹಣೆ

2007ರಲ್ಲಿ ನವೆಂಬರ್‌ 12ರಿಂದ 17ರ ವರೆಗೆ 7 ದಿನದ ಅವಧಿಗೆ ಮುಖ್ಯಮಂತ್ರಿ

2008ರಲ್ಲಿ ಮೇ 30ರಂದು 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

2011ರಲ್ಲಿ ಜುಲೈ 31ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ

2014ರಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯರಾಗಿ ಆಯ್ಕೆ

2018ರಲ್ಲಿ ಶಿಕಾರಿಪುರ ಶಾಸಕರಾಗಿ ಎಂಟನೇ ಬಾರಿ ಆಯ್ಕೆ, ಮೇ 17ರಂದು 29ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

2018ರಲ್ಲಿ ಮೇ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ, ವಿಪಕ್ಷ ನಾಯಕರಾಗಿ ನೇಮಕ

ಪಕ್ಷದ ಜವಾಬ್ದಾರಿ
1970ರಲ್ಲಿ ಆರ್‌ಎಸ್‌ಎಸ್‌ ಶಿಕಾರಿಪುರ ಘಟಕದ ಕಾರ್ಯವಾಹಕ
1970ರಲ್ಲಿ ಜನ ಸಂಘದ ತಾಲೂಕು ಅಧ್ಯಕ್ಷ
1980ರಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ
1985ರಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ
1988ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ
1993ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
1999ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ
2016ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ

ಹೆಚ್ಚು ಯೋಜನೆಯ ಎಚ್ಚರಿಕೆ
ಮುಖ್ಯಮಂತ್ರಿಯಾಗಿದ್ದಾಗ ಮತ್ತು ಹಣಕಾಸು ಸಚಿವರಾಗಿದ್ದಾಗ ಇವರ ಬಜೆಟ್ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ರೈತರ ಸಾಲ ಮನ್ನಾ, ಸಾರಾಯಿ ನಿಷೇಧ. ಲಾಟರಿ ನಿಷೇಧ, ರೈತರಿಗೆ ಶೇ.4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಶಕ್ತೀಕರಣಕ್ಕೆ ಭಾಗ್ಯಲಕ್ಷ್ಮೀ ಯೋಜನೆ, ಉಚಿತ ಬೈಸಿಕಲ್ ವಿತರಣೆ ಯೋಜನೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿ ಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರೆತೆಗೆ ಸಂಧ್ಯಾ ಸುರಕ್ಷಾ ಯೋಜನೆಗಳ ಮೂಲಕ ಕ್ರಾಂತಿಕಾರಿ ನಡೆ ಅನುಸರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next