Advertisement

ಛಲದಂಕ ಮಲ್ಲನ ರಾಜಕೀಯ ಹೋರಾಟಗಾಥೆ

09:26 AM Jul 28, 2019 | Sriram |

ಬೆಂಗಳೂರು: ಛಲಗಾರ, ಹಠವಾದಿ, ಹೋರಾಟಗಾರ, ರೈತ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ನಾಲ್ಕು ದಶಕಗಳ ರಾಜಕೀಯದ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ರೈತ ಹೋರಾಟದಿಂದ ಹಿಡಿದು ವಿಧಾನಸೌಧದ ಗದ್ದಿಗೆ ಏರುವ ವರೆಗಿನ ಅವರ ಬದುಕು ಮುಳ್ಳಿನ ಹಾದಿಯೇ ಹಾಗಿತ್ತು.

Advertisement

ಏಕಾಏಕಿ ನಾಯಕನಾಗಿ ಬೆಳೆದವರಲ್ಲ ಬಿಎಸ್‌ವೈ. ಕಠಿಣ ಪರಿಶ್ರಮ, ಛಲ ಬಿಡದ ಹೋರಾಟ, ಸಂಘಟನಾ ಕೌಶಲ್ಯದ ಮೂಲಕ ಪಕ್ಷ ಸಂಘಟನೆಗಾಗಿ ಜೀವನವನ್ನೇ ಗಂಧದಂತೆ ಸವಿದರು. ಎಲ್ಲ ನೋವನ್ನು ತನ್ನೊಳಗೆ ಹೀರಿಕೊಂಡು, ಪಕ್ಷಕ್ಕೆ ಸುಗಂಧ ನೀಡಿದರು.

ಲೆಕ್ಕವಿಲ್ಲದಷ್ಟು ಹೋರಾಟ ಮಾಡಿ, ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಮಾಡಿದ ರಾಜಕೀಯ ತಂತ್ರಗಾರ.


ಮಂಡ್ಯದಿಂದ ಶಿಕಾರಿಪುರಕ್ಕೆ ಬಂದು, ಪುರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿ, ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿಯಾಗಿದ್ದು ಸ್ವಂತ ಪರಿಶ್ರಮದಿಂದಲೇ ಹೊರತು, ಯಾವುದೂ ತಾನಾಗಿ ಅವರಿಗೆ ಒಲಿದು ಬಂದಿಲ್ಲ. ಕಠಿಣ ಪರಿಶ್ರಮದಿಂದಲೇ ಎಲ್ಲವನ್ನು ಪಡೆದುಕೊಂಡರು. ಅವರ ಪಾಲಿಗೆ ಅದೃಷ್ಟವೂ ಒಮ್ಮೊಮ್ಮೆ ಕೈ ಕೊಟ್ಟಿತ್ತು. ಆದರೆ, ಅವರ ಹುಟ್ಟು ಛಲ, ಹೋರಾಟದ ಗುಣ, ನಾಲ್ಕನೇ ಭಾರಿಗೆ ಮುಖ್ಯಮಂತ್ರಿಯಾಗುವಂತೆ ಮಾಡಿದೆ.

ಶಿಕಾರಿಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾರ್ಯ ನಿರ್ವಾಹಕರಾಗಿ 1970ರಲ್ಲಿ ರಾಜಕೀಯ ಜೀವನ ಆರಂಭಿಸಿದ ಯಡಿಯೂರಪ್ಪ ಅವರು, ಮೂರೇ ವರ್ಷದಲ್ಲಿ ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದರು. ಶಿಕಾರಿಪುರದ ಅಂದಿನ ಶಾಸಕ ಮತ್ತು ತೋಟಗಾರಿಕೆ, ಬಂಧೀಖಾನೆ ಸಚಿವರಾಗಿದ್ದ ಕೆ. ವೆಂಕಟಪ್ಪ ವಿರುದ್ಧ ಹೋರಾಟಕ್ಕೆ ಇಳಿದ ಸಂದರ್ಭಲ್ಲಿ ಯಡಿಯೂರಪ್ಪ ಅವರ ಮೇಲೆ ಹಲ್ಲೆಯೂ ನಡೆದಿತ್ತು. ಯಾವುದಕ್ಕೂ ಕ್ಯಾರೆ ಎನ್ನದೆ ಹೋರಾಟವನ್ನು ಮುಂದುವರಿಸಿದರು. ಇದರ ಪರಿಣಾಮವಾಗಿ ಪಕ್ಷದಲ್ಲಿ ಜೇಷ್ಠ ನಾಯಕರ ಪಟ್ಟಿಗೆ ಸೇರಿಕೊಂಡರು ಹಾಗೂ ಜಾತಿ ಬಲವೂ ಸಿಕ್ಕಿತು.

ಮೊದಲ ಹೋರಾಟ ಕೂಲಿಗಾಗಿ ಕಾಳು

ಸರ್ಕಾರದ ಕೂಲಿಗಾಗಿ ಕಾಳು ಯೋಜನೆಯನ್ನು ವಿರೋಧಿಸಿ ಬಿಎಸ್‌ ಯಡಿಯೂರಪ್ಪ ಅವರು ಮೊದಲು ಹೋರಾಟ ಆರಂಭಿಸಿದರು. ಈ ಯೋಜನೆಯಲ್ಲಿ ದೊಡ್ಡಮಟ್ಟದ ಅವ್ಯವಹಾರ ನಡೆದಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ರಾಜ್ಯಮಟ್ಟದಲ್ಲಿ ಹೋರಾಟ ಸಂಘಟಿಸಿದರು. ಇವರ ಹೋರಾಟದ ಫ‌ಲವಾಗಿ ಅಂದಿನ ಸರ್ಕಾರ ಇದನ್ನು ಸಿಐಡಿ ತನಿಖೆಗೆ ಒಪ್ಪಿಸಿತು. ಯಾವುದೇ ಹೋರಾಟವನ್ನು ಆರಂಭಿಸಿ, ಅರ್ಧಕ್ಕೆ ಕೈ ಬಿಡುವ ಜಾಯವಾನ ಇವರದ್ದಾಗಿರಲಿಲ್ಲ. ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯವನ್ನು ಕಾಣಿಸುತ್ತಿದ್ದರು. ಜೀತ ಪದ್ಧತಿ ವಿರುದ್ಧ ಹೋರಾಡಿ, 1,500ಕ್ಕೂ ಅಧಿಕ ಜೀತದಾಳುಗಳೊಂದಿಗೆ 1981ರಲ್ಲಿ ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಪಾದಯಾತ್ರೆ ಮಾಡಿದ್ದರು. ಹೀಗೆ ಹಲವು ರೀತಿಯ ಹೋರಾಟದ ಮೂಲಕ ರಾಜ್ಯಾದ್ಯಂತ ತಮ್ಮದೆ ಸಂಘಟನಾ ಚಾತುರ್ಯವನ್ನು ಬೆಳೆಸಿಕೊಂಡರು. 1983ರಲ್ಲಿ ಮೊದಲ ಬಾರಿಗೆ ಶಾಸಕರಾದರು. 1987ರಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾದಾಗ ಪಾದಯಾತ್ರೆ ನಡೆಸಿದರು. 1988ರಲ್ಲಿ ರೈತರಿಗಾಗಿ ಬಸವನ ಬಾಗೇವಾಡಿಯಿಂದ ಬೆಂಗಳೂರು, ಬಸವ ಕಲ್ಯಾಣದಿಂದ ಬೆಂಗಳೂರು ಮತ್ತು ಬನವಾಸಿಯಿಂದ ಬೆಂಗಳೂರು ವರೆಗೆ ಜಾಥಾ ನಡೆಸಿ, ರೈತರ ಪರವಾಗಿ ನಿಂತರು. 1994ರಲ್ಲಿ ಗ್ರಾಮ ರಾಜ್ಯ ಉಳಿಸಿ ಹೋರಾಟ ರೂಪಿಸಿ, ಶಿವಮೊಗ್ಗದಿಂದ ಬೆಂಗಳೂರು ವರೆಗೆ ಪಾದಯಾತ್ರೆ ನಡೆಸಿದ್ದರು. ಅರಣ್ಯ ಭೂಮಿಯಲ್ಲಿನ ಬಗರ್‌ ಹುಕುಂ ರೈತರಿಗಾಗಿ ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿ, ಮೂರು ದಿನಗಳ ಅಹೋರಾತ್ರಿ ಧರಣಿ ಮಾಡಿದರು. 1975ರ ತುರ್ತು ಪರಿಸ್ಥಿತಿ ವೇಳೆ 45 ದಿನಗಳ ಕಾಲ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಸೆರೆವಾಸ ಅನುಭವಿಸಿದರು. 1987ರಲ್ಲಿ ಸೈಕಲ್ ಜಾಥಾ ಮುಖಾಂತರ ಶಿಕಾರಿಪುರ ತಾಲೂಕಿನಾದ್ಯಂತ ಸಂಚರಿಸಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರದ ಗಮನ ಸೆಳೆದು ಸಂತ್ರಸ್ತರಿಗೆ ನ್ಯಾಯ ದೊರಕಿಸಿದರು.

ಕೆಜೆಪಿ ಸ್ಥಾಪನೆ
ಏಳು, ಬೀಳುಗಳ ನಡುವೆ ಸಾಕಷ್ಟು ಯಾತನೆ ಅನುಭವಿಸಿದರೂ, ಛಲ ಬಿಡಲಿಲ್ಲ. ರಾಜ್ಯ ಸುತ್ತಿ ಸಂಘಟನೆ ಮಾಡಿ ಪಕ್ಷವನ್ನೇ ತೊರೆದರು. ಕರ್ನಾಟಕ ಜನತಾಪಕ್ಷ ಸ್ಥಾಪಿಸಿ, ಕೆಜೆಪಿ ಮೂಲಕವೇ ಒಂದು ಚುನಾವಣೆಯನ್ನು ಎದುರಿಸಿದರು. ನಂತರ ಪುನ: ಮಾತೃಪಕ್ಷಕ್ಕೆ ಮರಳಿದರು. ರಾಜ್ಯಾಧ್ಯಕ್ಷರಾದರೂ, ರಾಜ್ಯಾದ್ಯಂತ ಹೋರಾಟವನ್ನು ಯಥಾಸ್ಥಿತಿಯಲ್ಲಿ ನಡೆಸಲಾರಂಭಿಸಿದರು. ಪರಿಣಾಮ 2018ರ ವಿಧಾನಸಭೆ ಚುನಾವಣೆಯಲ್ಲಿ 105 ಸ್ಥಾನ ಹಾಗೂ ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲುವಂತೆ ಮಾಡಿದರು. ಹೋರಾಟಗಾರನಿಗೆ ಛಲವಿದ್ದರೆ ಏನೂ ಬೇಕಾದರೂ ಸಾಧಿಸಬಲ್ಲ ಎನ್ನುವ ಮಾತಿಗೆ ಬಿ.ಎಸ್‌.ಯಡಿಯೂರಪ್ಪ ಜೀವಂತ ನಿದರ್ಶನ. ಸೋಲು, ನೋವು, ಯಾತನೆಗಳ ಜತೆಗೆ ಗೆಲುವನ್ನು ಚುಂಬಿಸುತ್ತಿದ್ದ ಧೀಮಂತ ರಾಜಕಾರಣಿ ಬಿ.ಎಸ್‌.ಯಡಿಯೂರಪ್ಪ.

ರೈತ ಹೋರಾಟದ ಮೂಲಕ ರಾಜಕೀಯ ಹೋರಾಟ ಆರಂಭ
ರೈತ ಹೋರಾಟದಿಂದ ರಾಜಕೀಯ ಹೋರಾಟದೆಡೆಗೆ ತಮ್ಮನ್ನು ತೊಡಗಿಸಿಕೊಂಡರು. 1992ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆಗೊಂಡರು. 1994ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದರು. 1998ರಲ್ಲಿ ತಲಕಾವೇರಿಯಿಂದ ಕೆಆರ್‌ಎಸ್‌ವರೆಗೆ ರೈತ ಜಾಥಾ ನಡೆಸಿ, 2000ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾದರು. 2004ರಲ್ಲಿ ಪ್ರತಿಪಕ್ಷದ ನಾಯಕರಾಗಿ, ಜೆಡಿಎಸ್‌-ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ಚೊಚ್ಚಲ ಬಜೆಟ್ ಮಂಡನೆ ಮಾಡಿದರು. ಮೈತ್ರಿ ಒಪ್ಪಂದದಂತೆ ಜೆಡಿಎಸ್‌ ಅಧಿಕಾರ ಬಿಟ್ಟು ಕೊಡಲಿಲ್ಲ. ಆಗ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ರಾಜಕೀಯ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದರು. ಜೆಡಿಎಸ್‌ ಮಾಡಿದ ದ್ರೋಹವನ್ನು ಅಸ್ತ್ರವಾಗಿ ಮಾಡಿಕೊಂಡು ಹೋರಾಟ ಆರಂಭಿಸಿ, ಊರೂರು ಸುತ್ತಿ ಪಕ್ಷ ಸಂಘಟನೆ ಮಾಡಿದರು. ಪರಿಣಾಮ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 110 ಸೀಟು ಗೆದ್ದು, ರಾಜ್ಯದ ಮುಖ್ಯಮಂತ್ರಿಯಾದರು. ಈ ಮಧ್ಯೆ ಲೋಕಾಯುಕ್ತ ವರದಿಯ ಪರಿಣಾಮ ಮತ್ತು ಸ್ವಪಕ್ಷೀಯರ ಕುತಂತ್ರದಿಂದ ನ್ಯಾಯಾಂಗ ಬಂಧನಕ್ಕೂ ಹೋಗಬೇಕಾದ ದು:ಸ್ಥಿತಿಯನ್ನು ಅನುಭವಿಸಿದರು.
-ರಾಜು ಖಾರ್ವಿ ಕೊಡೇರಿ
Advertisement

Udayavani is now on Telegram. Click here to join our channel and stay updated with the latest news.

Next