Advertisement

ಅಚ್ಚರಿ ತಂದಿದ್ದ ಬಿಎಸ್‌ವೈ ಮೌನಿ ಬಾಬಾ ನಡೆ

09:26 AM Jul 28, 2019 | Sriram |

ಬೆಂಗಳೂರು: ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ಮಂಡಿಸಿದ್ದಾಗ ನಾಲ್ಕು ದಿನಗಳ ಕಾಲ ನಡೆದ ಕಲಾಪದಲ್ಲಿ ಅಕ್ಷರಶಃ ಬಿ.ಎಸ್‌. ಯಡಿಯೂರಪ್ಪ ‘ಮೌನಿ ಬಾಬಾ’ ಆಗಿದ್ದರು.

Advertisement

ಯಡಿಯೂರಪ್ಪ ಅವರ ‘ಆಕ್ರಮಣಕಾರಿ ಸ್ವಭಾವ’ ಕಂಡಿದ್ದವರಿಗೆ ನಿಜಕ್ಕೂ ಇದು ಅಚ್ಚರಿ ಸಹ ಮೂಡಿಸಿತ್ತು. ಎಂಥ ಸಂದರ್ಭದಲ್ಲಿಯೂ ಕಾಂಗ್ರೆಸ್‌- ಜೆಡಿಎಸ್‌ ಸದಸ್ಯರು ಟೀಕಾಸ್ತ್ರಗಳ ಸುರಿಮಳೆಗೈದರೂ ಯಡಿಯೂರಪ್ಪ ಮಾತ್ರ ‘ಮೌನವೇ ಆಭರಣ’ ಎಂದು ಮುಗುಳ್ನಕ್ಕು ಸುಮ್ಮನಾಗುತ್ತಿದ್ದರು.

ಒಮ್ಮೊಮ್ಮೆ ತೀವ್ರ ಕೋಪಗೊಂಡು ಎದ್ದು ನಿಲ್ಲುತ್ತಿದ್ದರಾದರೂ ಒಂದೆರಡು ಶಬ್ದಗಳಿಗೆ ತಮ್ಮ ಮಾತು ಸೀಮಿತಗೊಳಿಸಿ ಕುಳಿತುಕೊಳ್ಳುತ್ತಿದ್ದರು. ಜತೆಗೆ ತಮ್ಮ ಶಾಸಕರು ಮಧ್ಯಪ್ರವೇಶ ಮಾಡಿದಾಗಲೆಲ್ಲ ಕೈ ಸನ್ನೆ ಮೂಲಕ ಸುಮ್ಮನಾಗುವಂತೆ ಹೇಳುತ್ತಿದ್ದರು.

ಆ ನಾಲ್ಕು ದಿನಗಳಲ್ಲಿ ಯಡಿಯೂರಪ್ಪ ರಾತ್ರಿ 11 ಗಂಟೆಯಾದರೂ ಇಡೀ ದಿನದ ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದರು. ಮೌನವಹಿಸಿ ಎಲ್ಲವನ್ನೂ ಆಲಿಸುತ್ತಿದ್ದರು. ವಿಶ್ವಾಸಮತ ಮತಕ್ಕೆ ಹಾಕುವ ವಿಚಾರದಲ್ಲಿ ಮಾತ್ರ ಪದೇ ಪದೇ ಸ್ಪೀಕರ್‌ ಅವರಿಗೆ ಮನವಿ ಮಾಡುತ್ತಿದ್ದರು. ರಾತ್ರಿ ಎಷ್ಟು ಹೊತ್ತಾದರೂ ನಾವು ಸಿದ್ಧ, ಮತಕ್ಕೆ ಹಾಕಿ ಎಂದು ಕೋರುತ್ತಿದ್ದರು. ಇದನ್ನು ಹೊರತುಪಡಿಸಿದರೆ ನಾಲ್ಕು ದಿನಗಳ ಕಲಾಪದಲ್ಲಿ ಮೌನ ವಹಿಸಿ ಛಲ ಸಾಧಿಸಿದ್ದರು.

ರಾಜಕೀಯವಾಗಿಯೂ ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡಿದ್ದ ಬಹುತೇಕ ನಾಯಕರು ಅವರ ಈ ಮೌನ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಈಶ್ವರಪ್ಪ ಅವರಂತೂ ನನ್ನ ಜೀವನದಲ್ಲಿ ಯಡಿಯೂರಪ್ಪ ಸುಮ್ಮನೆ ಕುಳಿತಿದ್ದನ್ನು ಕಂಡದ್ದು ಇದೇ ಮೊದಲು ಎಂದಿದ್ದರು.

Advertisement

ನಿರಂತರ ಲೆಕ್ಕಾಚಾರ
ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಮೌನವಾಗಿದ್ದರೂ ನಿರಂತರ ಲೆಕ್ಕಾಚಾರ, ಆಲೋಚನೆಗಳಲ್ಲಿ ತಲ್ಲೀನರಾಗಿದ್ದರು. ಆಡಳಿತ ಪಕ್ಷದವರು ಮಾಡುತ್ತಿದ್ದ ಪ್ರಬಲ ಆರೋಪಗಳ ಸಂದರ್ಭವೂ ಮನಸಿನೊಳಗೆ ಕಿಡಿ ಕಾರಿದಂತೆ ಕಾಣುತ್ತಿದ್ದರೂ ಅದನ್ನು ಹೊರಗೆ ತೋರ್ಪಡಿಸುತ್ತಿರಲಿಲ್ಲ. ಕೆಲವೊಮ್ಮೆ ಸಮಯ ದೂಡಲು ಎಂಬಂತೆ ಸಾಗುತ್ತಿದ್ದ ಚರ್ಚೆಯ ಸಂದರ್ಭ ಗಾಢ ಆಲೋಚನೆಯಲ್ಲಿದ್ದು, ಮುಂದಿನ ಆಟದ ಕುರಿತು ಲೆಕ್ಕಾಚಾರ ಮಾಡುತಿದ್ದಂತೆ ಕಾಣಿಸುತ್ತಿತ್ತು. ಇನ್ನು ಕೆಲವೊಮ್ಮೆ ಕಾಗದದಲ್ಲಿ ಕೆಲವೊಂದು ಅಂಶಗಳನ್ನು ಬರೆದುಕೊಳ್ಳುತ್ತಾ ಮುಂದಿನ ನಡೆಗೆ ಮುಹೂರ್ತ ಇಡುತ್ತಿದ್ದಂತೆ ಕಂಡುಬರುತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next