Advertisement

ಸಿಎಂ ಬೊಮ್ಮಾಯಿ ಮೇಲೆ ಅತೃಪ್ತರ ತೂಗುಗತ್ತಿ… ಕಾಂಗ್ರೆಸ್ ಗೆ ವರದಾನವಾಗಲಿದೆಯೇ?

04:31 PM Aug 06, 2021 | ಶ್ರೀರಾಜ್ ವಕ್ವಾಡಿ |
ಮಾಜಿ ಬಿಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಬಹಿರಂಗವಾಗಿ ಭಿನ್ನಮತವೆಬ್ಬಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್... ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದು ಯಡಿಯೂರಪ್ಪರನ್ನು ಸಮಾಧಾನ ಮಾಡುವುದಕ್ಕೆ ಹೈಕಮಾಂಡ್ ಮಾಡಿದ ತಂತ್ರ.ಈಶ್ವರಪ್ಪ ಈಗಾಗಲೇ ಅಸಮಧಾನ ವ್ಯಕ್ತ ಪಡಿಸಿದ್ದು, ಈವರೆಗೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಮುಂದೆ ಪೂರ್ಣ ಬಹುಮತ ಸಿಗಲಿದೆ. ಆಗ  ರಾಷ್ಟ್ರವಾದಿ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಗಾಗಲೇ ಬೊಮ್ಮಾಯಿ, ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದು, ಬಂಡಾಯದ ಸುಳಿವು ನೀಡಿದ್ದಾರೆ. ಆ ರಾಷ್ಟ್ರವಾದಿ ನಾಯಕ ಯಾರು..? ಆ ರಾಷ್ಟ್ರವಾದಿ ನಾಯಕ ಈಶ್ವರಪ್ಪನವರೇ..? ಅಥವಾ ಇನ್ಯಾರು..?
Now pay only for what you want!
This is Premium Content
Click to unlock
Pay with

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ರಾಜ್ಯ ಬಿಜೆಪಿ ಸರ್ಕಾರದ ನೊಗ ಹೊತ್ತುಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ನೊಗ ಭಾರವಾಗಿದ್ದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಎಲ್ಲಿಯೂ ಇಲ್ಲದ ಮಹತ್ತರವಾದ ಬದಲಾವಣೆ ಆಗುತ್ತದೆ ಎಂಬ ದೊಡ್ಡ  ನಿರೀಕ್ಷೆಗಳೆಲ್ಲಾ ಹುಸಿ ಆಗಿ ಹೋಗಿವೆ.

Advertisement

ರಾಜ್ಯ ಸರ್ಕಾರದ ಸಚಿವ ಸಂಪುಟ ಹೇಗಾಗಿದೆ ಎಂದರೇ, ಹಿರಿತನ, ಸಮುದಾಯಗಳ ಮಾನದಂಡದಲ್ಲಿ ನೀಡಿದ ಸಮಾಧಾನದ ಪರಿಹಾರದಂತಾಗಿದೆ. ಬಿಜೆಪಿ ಹೈಕಮಾಂಡ್ ಗೆ ಕರ್ನಾಟಕದ ಬಿಜೆಪಿ ನಾಯಕರನ್ನು ಸಮಾಧಾನ ಪಡಿಸುವುದೇ ಒಂದು ರೀತಿಯಲ್ಲಿ ಮೂಲಮಂತ್ರದಂತಾಗಿದೆ. ಅತ್ತ ಯಡಿಯೂರಪ್ಪರವರನ್ನು ಮೂಲೆಗುಂಪು ಮಾಡುವುದಕ್ಕೆ ಸಾಧ್ಯವಿಲ್ಲದೇ ಅವರನ್ನು ಸಮಾಧಾನ ಪಡಿಸುವುದರಲ್ಲೇ ಹೈಕಮಾಂಡ್ ಜಾಣತನದ ಪರಿಹಾರ ಒದಗಿಸಿದೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಪಿತಾಮಹ ಇದ್ದ ಹಾಗೆ. ಯಡಿಯೂರಪ್ಪ ಅವರಿಗೆ ಸಮನಾದಂತಹ ನಾಯಕ ಬಿಜೆಪಿ ಕರ್ನಾಟಕದಲ್ಲಿ ಇಲ್ಲದಿರುವುದರಿಂದ ಯಡಿಯೂರಪ್ಪರನ್ನು ಬದಿಗೊತ್ತಿ ಪಕ್ಷ ಬೆಳೆಸುತ್ತೇವೆ ಎಂದರೇ, ದಕ್ಷಿಣ ಭಾರತದಲ್ಲಿಯೇ ಬಿಜೆಪಿ ದೊಡ್ಡ  ಆಘಾತ ಕಾಣಬೇಕಾಗುತ್ತದೆ ಎಂಬ ಭಿತಿಯಲ್ಲಿಯೇ ಹೈಕಮಾಂಡ್ ಜಾಣತನ ತೋರಿಸಬೇಕಾದ ಸ್ಥಿತಿಯಲ್ಲಿದೆ. ಅತ್ತ ಕೋಲು ಮುರಿಯಬಾರದು, ಇತ್ತ ಹಾವು ಸಾಯಬಾರದು ಹಾಗಾಗಿದೆ ಬಿಜೆಪಿ ಹೈಕಮಾಂಡ್ ಕಥೆ.

ಅಳೆದು ತೂಗಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಅತೃಪ್ತ ಬಿಜೆಪಿ ನಾಯಕರ ಅಸಮಾಧಾನದ ಕಿಡಿ ರಾಜ್ಯ ಬಿಜೆಪಿ ವಲಯದಲ್ಲಿ ಜೀವ ಪಡೆದಿದ್ದು, ಸರ್ಕಾರದ ಅಸ್ತಿತ್ವದ ಮೇಲೆ ದೊಡ್ಡ ಪ್ರಶ್ನೆಯೆಬ್ಬಿಸಿದೆ. ಇದುವರೆಗೆ ಪೂರ್ಣ ಬಹುಮತ ಇಲ್ಲದೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಮಾಡಿರುವುದರಿಂದ ಸರ್ಕಾರ ರಚನೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೊಟ್ಟಿದ್ದ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ಬಿ. ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಬೊಮ್ಮಾಯಿ ಮೇಲೆ ಇತ್ತು ಎನ್ನುವುದು ಈಗ ಸಚಿವ ಸಂಪುಟದಲ್ಲಿ ಮತ್ರಿಗಿರಿ ಪಡೆದ ವಲಸಿಗರ ಪಟ್ಟಿ ನೋಡಿದರೆ ತಿಳಿಯುತ್ತದೆ.

ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ, ಬಿ. ಎಸ್ ಯಡಿಯೂರಪ್ಪ ಅವರ ಸಲಹೆಯನ್ನು ಪಡೆಯುವುದು ಬೇಡ, ನೀವು ನಿಮ್ಮ ನೇತೃತ್ವದಲ್ಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸಿ ಎಂದಿದ್ದರೂ, ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ವೈ ಅವರನ್ನು ‘ನಮ್ಮ ನಾಯಕರು’ ಎಂದು ಸಂಭೋದಿಸುತ್ತಿರುವುದನ್ನು ಗಮನಿಸಿದರೇ, ಯಡಿಯೂರಪ್ಪ ಅವರ ಕೈಯಲ್ಲೇ ಇನ್ನೂ ಸೂತ್ರ ಇದೆ. ಸಚಿವ ಸಂಪುಟವೂ ಬಿ. ಎಸ್ ವೈ ನಿರ್ದೇಶನದಲ್ಲಿಯೇ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

Advertisement

ತ್ರಿಶಂಕು ಸ್ಥಿತಿಯಲ್ಲಿ ಬೊಮ್ಮಾಯಿ :

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಗ ತ್ರಿಶಂಕು ಸ್ಥಿತಿ. ಅತ್ತ ಹೈಕಮಾಂಡ್, ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕೇಳಿಕೊಂಡೇ ಮುಂದುವರಿಯಬೇಕಾದ ಸ್ಥಿತಿ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಹಗ್ಗದ ಮೇಲೆ ನಡಿಗೆ ಆರಂಭಿಸಿದ್ದಾರೆ ಎನ್ನುವುದು ಸತ್ಯ.

ಸಮುದಾಯ, ಜಾತಿ ಲೆಕ್ಕಾಚಾರ, ಹಿರಿತನ, ಸರ್ಕಾರದ ರಚನೆಯಲ್ಲಿ ಪಾಲು, ಪಕ್ಷ ಸಂಘಟನೆ ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆ ಮಾಡಲಾಗಿದೆ.  ಸರ್ಕಾರವನ್ನು ಅರ್ಧದಾರಿಯಿಂದ ಪೂರ್ಣತ್ವದೆಡೆಗೆ ಸಾಗಿಸುವ ಹೊಣೆಗಾರಿಗೆ ಬೊಮ್ಮಾಯಿ ಅವರಿಗಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ವಿಶ್ವಾಸ, ಗೌರವ ಇರಿಸಿಕೊಳ್ಳಬೇಕಾದ ಅನಿವಾರ್ಯವಿದೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕೆಲವು ಸಚಿವರು ಭ್ರಷ್ಟಾಚಾರದ ಆರೋಪವನ್ನು ಹೊತ್ತಿದ್ದರು. ಆ ಎಲ್ಲಾ ಕಳಂಕದಿಂದ ಮುಕ್ತವಾಗಿ ಸರ್ಕಾರವನ್ನು ಮುನ್ನಡೆಸುವ ನೇತೃತ್ವ ಬೊಮ್ಮಾಯಿ ಅವರ ಮೇಲಿದೆ. ಹೈಕಮಾಂಡ್ ಕೂಡ ಅದೇ ಸಲಹೆಯನ್ನು ಬೊಮ್ಮಾಯಿಗೆ ನೀಡಿದ್ದಾರೆ. ಆದರೇ, ಈಗಾಗಲೇ ಇತ್ತೀಚೆಗಷ್ಟೇ ‘ಮೊಟ್ಟೆ ಕೇಸ್’ ನಲ್ಲಿ ಸಿಲುಕಿಕೊಂಡಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸ್ಥಾನ ಸಿಕ್ಕಿದ್ದು, ಅತೃಪ್ತ ಶಾಸಕರಿಗೆ, ಪ್ರತಿಪಕ್ಷಗಳಿಗೆ ಈ ವಿಚಾರ ಆಹಾರವಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಈಶ್ವರಪ್ಪ ಅಸಮಾಧಾನ, ಕಾಂಗ್ರೆಸ್ ಗೆ ವರದಾನ..?

ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಈಶ್ವರಪ್ಪರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕದೇ ಇರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಕೊನೆಯ ಪಕ್ಷ ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ನೀಡಲಿ ಎಂದು ಈಶ್ವರಪ್ಪ ಪಕ್ಷದ ಹೈಕಮಾಂಡ್ ನನ್ನು ಬಹಿರಂಗವಾಗಿ ಬೇಡಿಕೊಂಡಿದ್ದರು. ಅದು ಕೂಡ ಫಲಿಸಲಿಲ್ಲ.

ಕಳೆದ ಸಚಿವ ಸಂಪುಟದಲ್ಲಿ, ಅಂದರೇ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಉಪ ಮುಖ್ಯಮಂತ್ರಿ ಸ್ಥಾನ ರಚಿಸಿ ರಾಜ್ಯ ಬಿಜೆಪಿಯಲ್ಲಿ ಹೇಳುವಂತದ್ದೇನೂ ಬದಲಾವಣೆಯಾಗಿರಲಿಲ್ಲ. ಈಶ್ವರಪ್ಪ ಅವರಿಗೂ ಆ ಸಂದರ್ಭದಲ್ಲಿಯೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿಲ್ಲ. ಆಗ ಅಸಮಧಾನ ತೋರ್ಪಡಿಸಿಕೊಳ್ಳುವುದಕ್ಕೆ ಆಗದ ಸ್ಥಿತಿಯಲ್ಲಿ ಈಶ್ವರಪ್ಪ ಇದ್ದಿದ್ದರು. ಗೋವಿಂದ ಕಾರಜೋಳ, ಡಾ. ಸಿ ಎನ್. ಅಶ್ವಥ್ ನಾಯಾರಣ  ಲಕ್ಷ್ಮಣ ಸವದಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಾಲಾಗಿತ್ತು.

ಸಮುದಾಯವವನ್ನು ಬಿಟ್ಟು ಬಿಡಬಾರದು, ಯಾವ ನಾಯಕರಿಗೂ ಅಸಮಾಧಾನ ಉಂಟಾಗಬಾರದೆಂಬ ಉದ್ದೇಶದಿಂದಲೇ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಅವಕಾಶವನ್ನೇ ನೀಡಿಲ್ಲ. ಇದು ಉಪ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿದ್ದ ಈಶ್ವರಪ್ಪ, ಸುನಿಲ್ ಕುಮಾರ್, ಆರ್. ಅಶೋಕ್, ಶ್ರೀರಾಮುಲು ಪಾಲಿಗೆ ಕಹಿಯಾಗಿತ್ತು ಎನ್ನುವುದು ಸತ್ಯ.

ಈಶ್ವರಪ್ಪ ಈ ಬಗ್ಗೆ ಈಗಾಗಲೇ ಅಸಮಧಾನ ವ್ಯಕ್ತ ಪಡಿಸಿದ್ದು, ಈವರೆಗೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಮುಂದೆ ಪೂರ್ಣ ಬಹುಮತ ಸಿಗಲಿದೆ. ಆಗ  ರಾಷ್ಟ್ರವಾದಿ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಗಾಗಲೇ ಬೊಮ್ಮಾಯಿ, ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದು, ಬಂಡಾಯದ ಸುಳಿವು ನೀಡಿದ್ದಾರೆ. ಆ ರಾಷ್ಟ್ರವಾದಿ ನಾಯಕ ಯಾರು..? ಆ ರಾಷ್ಟ್ರವಾದಿ ನಾಯಕ ಈಶ್ವರಪ್ಪನವರೇ..? ಅಥವಾ ಇನ್ಯಾರು..? ಒಂದು ವೇಳೆ  ಈಶ್ವರಪ್ಪ ನಾಯಕತ್ವದಲ್ಲಿ ಮುಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದರೂ, ಸಮರ್ಥ ಆಡಳಿತ ನೀಡುವಲ್ಲಿ ಹಿನ್ನಡೆ ಅನುಭವಿಸಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದಕ್ಕೆ ಈಶ್ವರಪ್ಪ ವೃದ್ಧಿಸಿಕೊಳ್ಳದ ವಿಶ್ವಾಸಾರ್ಹ ರಾಜಕೀಯದ ಮುಖವೇ ಸಾಕ್ಷಿ.

ಪಕ್ಷದಲ್ಲಿನ ಹಿರಿಯ ನಾಯಕ ಈಶ್ವರಪ್ಪ ಅವರನ್ನೊಳಗೊಂಡು ಕೆಲವರ ಅಸಮಾಧಾನವನ್ನೇ ಕಾಂಗ್ರೆಸ್ ಲಾಭ ಮಾಡಿಕೊಳ್ಳಬಹುದು. ಆದರೂ, ಯಡಿಯೂರಪ್ಪ ಅವರ ಇರುವ ತನಕ ಅಷ್ಟು ಸುಲಭವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಬಹುಮತದೊಂದಿಗೆ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಿಲ್ಲ ಎನ್ನುವ ರಾಜಕೀಯ ವಿಶ್ಲೇಷಣೆಯನ್ನು ತೆಗೆದು ಹಾಕುವಂತಿಲ್ಲ. ಆದರೇ, ಯಡಿಯೂರಪ್ಪ ಕೂಡ ಒಂದು ವೇಳೆ ಪಕ್ಷ ನೀಡುತ್ತಿರುವ ಗೌರವ ಕಡಿಮೆಯಾಗಿಯೋ, ಅಸಮಧಾನದಿಂದಲೋ ಬಿಜೆಪಿ ವಿರುದ್ಧ 2011 ರಂತೆ ತಿರುಗಿ ಬಿದ್ದರೇ, ಕಾಂಗ್ರೆಸ್ ಗೆ ಲಾಭ ಆಗುವುದಂತೂ ಸತ್ಯ.

ಇನ್ನು, ಬಿ. ಎಸ್ ವೈ ಸರ್ಕಾರದಲ್ಲಿ ಸವದಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು, ಸಮುದಾಯದ ಲೆಕ್ಕಾಚಾರದಲ್ಲಿ ಬಿ. ಎಸ್. ವೈ ಅವರ ಉತ್ತರಾಧಿಕಾರಿಯಾಗಬಹುದೇನೋ ಎಂಬ ಯೋಚನೆಯಲ್ಲಿ ಹೈಕಮಾಂಡ್ ಇದ್ದಿತ್ತೇನೋ ಎಂದು ನಾವು ಅರ್ಥೈಸಿಕೊಂಡರೂ, ಸವದಿ ಒಬ್ಬ ಸಮುದಾಯದ ನಾಯಕರಾಗಿ, ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರಲಿಲ್ಲ. ಅವರ ಮೇಲೆ ಹಿಂದೆ ಇದ್ದ ವಿವಾದಗಳು ಅವರಿಗೆ ಆ ವರ್ಚಸ್ಸನ್ನು ತಂದುಕೊಟ್ಟಿಲ್ಲ. ಇತ್ತ, ಅರವಿಂದ ಬೆಲ್ಲದ ಅವರ ಕಥೆಯೂ ಹಾಗೆ ಆಗಿ ಹೋಯಿತು. ಜಿಂದಾಲ್ ಒಳಗೊಂಡು ಇತರೆ ವಿಷಯಗಳನ್ನು ಮುಂದಿಟ್ಟುಕೊಂಡು ಬಿ ಎಸ್ ವೈ ಅವರ ವಿರುದ್ಧ ಮಾತನಾಡಿ, ಎದುರು ಹಾಕಿಕೊಂಡರು. ಹಾಗಾಗಿ ಯಡಿಯೂರಪ್ಪ ಅವರ ಆಪ್ತ ಬಣದಲ್ಲೊಬ್ಬರಾದ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಲಾಯಿತು. ಹಾಗಾಗಿ ಸಂಪುಟದಲ್ಲಿ ಈ ಇಬ್ಬರನ್ನೂ ಸೇರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈಗ ಈ ಎಲ್ಲಾ ಅತೃಪ್ತರ ಗುಂಪು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದೇ ಎನ್ನುವುದು ಪ್ರಶ್ನೆಯಾಗಿದೆ.

ಯಡಿರೂಪ್ಪರ ಸಿಟ್ಟಿನಿಂದ ಸ್ಥಾನ ಕಳೆದುಕೊಂಡ ಯತ್ನಾಳ್, ಬೆಲ್ಲದ, ಯೋಗೇಶ್ವರ್ :

ಮಾಜಿ ಬಿಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಬಹಿರಂಗವಾಗಿ ಭಿನ್ನಮತವೆಬ್ಬಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್… ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದು ಯಡಿಯೂರಪ್ಪರನ್ನು ಸಮಾಧಾನ ಮಾಡುವುದಕ್ಕೆ ಹೈಕಮಾಂಡ್ ಮಾಡಿದ ತಂತ್ರ. ಆದರೇ, ಹೈಕಮಾಂಡ್ ಹೆಣೆದ ತಂತ್ರದ ವಿರುದ್ಧ ಈ ಮೂವರು ತಿರುಗಿ ಬೀಳಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೈಕಮಾಂಡ್ ಈ ಮೂವರಿಗೆ ಸಮಾಧಾನ ತರಿಸುವ ಕೆಲಸ ಮಾಡದಿದ್ದರೇ, ಸರ್ಕಾರವನ್ನು ಮತ್ತೆ ಅಲುಗಾಡಿಸುವ ಪ್ರಯತ್ನವನ್ನಂತೂ ಮಾಡಿಯೇ ಮಾಡುತ್ತಾರೆ ಎನ್ನುವುದು ಸತ್ಯ.

ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸ್ಥಾನ ತನ್ನ ಪಾಲಿಗಾಗುತ್ತಿದ್ದದ್ದನ್ನು ತಪ್ಪಿಸಿದ್ದು ಯಡಿಯೂರಪ್ಪ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಆ ಕೋಪ ಮತ್ತಷ್ಟು ರೌದ್ರತೆಯನ್ನು ಕೂಡ ಕಂಡುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

ಇನ್ನು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಸುತ್ತಬೇಕು. ಇದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ.  ನನ್ನನ್ನು ಗುರುತಿಸಿರುವ ಕ್ಷೇತ್ರ ವರುಣಾ, ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಹೇಳಿಕೆ ನೀಡಿದ ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಅವರ ಮೇಲೆ ಈ ಅತೃಪ್ತರ ವಕ್ರ ದೃಷ್ಟಿಯಂತೂ ಇದ್ದೇ ಇರುತ್ತದೆ.

ಸರ್ಕಾರ ರಚನೆಗೆ ಸಹಾಯ ಮಾಡಿದವರಿಗೆ ಸ್ಥಾನಮಾನ..!

ಸರ್ಕಾರ ವಿಶ್ವಾಸ ಕಳೆದುಕೊಂಡಾಗ, ಬಹುಮತವಿಲ್ಲದ ಸಂದರ್ಭದಲ್ಲಿ ಸರ್ಕಾರದ ರಚನೆಗೆ ಸಹಾಯ ಮಾಡಿರುವ ಹಾಗೂ ಪಕ್ಷಕ್ಕೆ ನಿಷ್ಠೆಯಿಂದಿರುವ ಕಾರಣಕ್ಕೆ ಡಾ. ಕೆ. ಸುಧಾಕರ್, ಎಸ್ ಟಿ. ಸೋಮಶೇಖರ್, ಆನಂದ್ ಸಿಂಗ್, ಶಿವರಾಂ ಹೆಬ್ಬಾರ್, ಬಿ. ಸಿ ಪಾಟೀಲ್, ಬೈರತಿ ಬಸವರಾಜ್, ಕೆ. ಗೋಪಾಲಯ್ಯ, ಎಂ. ಟಿ. ಬಿ ನಾಗಾರಾಜ್, ಕೆ. ಸಿ ನಾರಾಯಣ ಗೌಡ, ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಹೈ ಕಮಾಂಡ್ ಮಣೆ ಹಾಕಿದ್ದು, ಇದಕ್ಕೆ ಯಡಿಯೂರಪ್ಪರ ಶಿಫಾರಸ್ಸು ಕೂಡ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸರ್ಕಾರ ರಚನೆಗೆ ಸಹಕರಿಸಿದ ವಲಸಿಗರಿಗೆ ಬೊಮ್ಮಾಯಿ ನೇತೃತ್ವದ ಮೂಲಕ ಯಡಿಯೂರಪ್ಪ ಮತ್ತೆ ಋಣ ತೀರಿಸಿಕೊಂಡಿದ್ದಾರೆ. ಆದರೇ, ಅತೃಪ್ತರು, ಪಕ್ಷದಲ್ಲಿ ಹಲವಾರು ವರ್ಷಗಳಿಂದ ಇದ್ದ ಹಿರಿಯ ನಾಯಕರು ಪಕ್ಷದ ವಿರುದ್ಧ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ, ಮುಂದಿನ ಚುನಾವಣೆಯ ಸಂದರ್ಭದಲ್ಲಾದರೂ  ಅಸಮಾಧಾನ ತೋರಿಸಿಕೊಳ್ಳಬಹುದು. ಇದು ಬಿಜೆಪಿಗೆ ಕೆಟ್ಟ ಪರಿಣಾಮವನ್ನು ಕೂಡ ಉಂಟು ಮಾಡಬಹುದು.

ಈ ಎಲ್ಲಾ ಸಮಾಧಾನ, ಅಸಮಾಧಾನಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಸಚಿವರ, ಶಾಸಕರ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ. ಜೊತೆಗೆ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಬೇಕಾಗಿದೆ. ಈ ವಿಶ್ವಾಸ ಕಳೆದುಕೊಂಡರೇ, ಮತ್ತೆ ಸರ್ಕಾರದಲ್ಲಿ ಗೊಂದಲ ಸೃಷ್ಟಿ ಆಗುವುದಂತೂ ಖಚಿತ. ಬಹಳ ಮುಖ್ಯವಾಗಿ ಬಿ. ಎಸ್. ಯಡಿಯೂರಪ್ಪರಿಗೆ ಯಾವ ಸಂದರ್ಭದಲ್ಲಿಯೂ ನೋವಾಗದ ಹಾಗೆ ನೋಡಿಕೊಳ್ಳಬೇಕಾಗಿದೆ. ಈ ಎಲ್ಲಾ ಒತ್ತಡದ ನಡುವೆ ಬೊಮ್ಮಾಯಿ ಸರ್ಕಾರವನ್ನು ಹೇಗೆ ನಡೆಸುತ್ತಾರೆ ಎನ್ನುವುದರಲ್ಲಿ ಕುತೂಹಲ ಮೂಡಿಸಿದೆ.

-ಶ್ರೀರಾಜ್ ವಕ್ವಾಡಿ  

Advertisement

Udayavani is now on Telegram. Click here to join our channel and stay updated with the latest news.