Advertisement
ಇನ್ನು ಒಂದು ವರ್ಷ 9 ತಿಂಗಳು ವಿಧಾನಸಭೆಗೆ ಚುನಾವಣೆ ಇದ್ದರೂ, ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಪ್ರಾದೇಶಿಕತೆ ಮತ್ತು ಜಾತಿ ಲೆಕ್ಕಾಚಾರಕ್ಕೆ ಹೆಚ್ಚಿನ ಆದ್ಯತೆ ನೀಡದೇ, ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವಿನ ಪ್ರತಿಷ್ಠೆಗೆ ನೂತನ ಸಚಿವರ ಆಯ್ಕೆಯಾಗಿರುವುದು ಎದ್ದು ಕಾಣಿಸುತ್ತದೆ.
Related Articles
Advertisement
ಸಂಪುಟದಲ್ಲಿ ಯಡಿಯೂರಪ್ಪ ಅವರ ನೆರಳು ಇರದಂತೆ ನೋಡಿಕೊಳ್ಳಲು ಬಿಜೆಪಿ ಹೈಕಮಾಂಡ್ ಸಾಕಷ್ಟು ಕಸರತ್ತು ನಡೆಸಿದ್ದರೂ, ಸಾಧ್ಯವಾಗಿಲ್ಲ. ಆದರೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಸಂಪುಟದಿಂದ ಹೊರಗಿಡುವಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದೆ. ಅದೂ ಕೂಡ ಯಡಿಯೂರಪ್ಪ ತಮ್ಮ ವಿರೋಧಿಗಳಿಗೆ ಅವಕಾಶ ನೀಡಬಾರದು ಎಂದು ಹಠ ಹಿಡಿದಿದ್ದರಿಂದ ತಮ್ಮ ಪುತ್ರನಿಗೆ ಅವಕಾಶ ಕೊಡಿಸುವಲ್ಲಿ ವಿಫಲರಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಬೀಸೋ ದೊಣ್ಣೆಯಿಂದ ಪಾರಾಗುವ ಲೆಕ್ಕ: ನೂತನ ಸಂಪುಟ ದಲ್ಲಿ ಹೊಸಬರು, ಯುವಕರು ಹಾಗೂ ಪ್ರಾದೇಶಿಕವಾರು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದರು. ಆದರೆ, ಹೊಸಬರ ಸೇರ್ಪಡೆ ಹಾಗೂ ಹಳಬರನ್ನು ಕೈ ಬಿಟ್ಟಿರುವುದಕ್ಕೆ ನಿರ್ದಿಷ್ಟ ಕಾರಣ ಕಾಣಿಸುತ್ತಿಲ್ಲ. ಹೊಸಬರಲ್ಲಿ ಸುನಿಲ್ ಕುಮಾರ್ ಹಾಗೂ ಬಿ.ಸಿ. ನಾಗೇಶ್ ಅವರನ್ನು ಸಂಘಟನೆಯ ಹಿನ್ನೆಲೆಯ ಲೆಕ್ಕಾಚಾರದಲ್ಲಿ ಸಂಪುಟಕ್ಕೆ ತೆಗೆದು ಕೊಂಡರೂ, ಅದೇ ಸಂಘಟನೆಯ ಹಿನ್ನೆಲೆಯುಳ್ಳ ಅರವಿಂದ ಲಿಂಬಾವಳಿ ಹಾಗೂ ಸುರೇಶ್ ಕುಮಾರ್ ಅವರನ್ನು ಕೈ ಬಿಡಲಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿ ಅನೇಕ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಸಿಡಿ ಪ್ರಕರಣಗಳ ಆರೋಪಗಳು ಕೇಳಿಬಂದಿತ್ತು.ಆ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಹೊರಗಿಡಬೇಕೆಂಬ ಆರ್‌ಎಸ್‌ಎಸ್‌ನ ಸೂಚನೆಯೂ ಇಲ್ಲಿ ವರ್ಕೌಟ್ ಆದಂತೆ ಕಾಣಿಸುತ್ತಿಲ್ಲ.
ಸಮತೋಲನ ಸಿಎಂ ಪಾತ್ರ: ನೂತನ ಸಂಪುಟದಲ್ಲಿ ಬೊಮ್ಮಾಯಿ ಪಾತ್ರ ಕೇವಲ ಹೈಕಮಾಂಡ್ ಮತ್ತು ಯಡಿಯೂರಪ್ಪ ಅವರ ನಡುವಿನ ಕೊಂಡಿಯಂತೆ ಕೆಲಸ ಮಾಡಿದಂತೆ ಕಾಣಿಸುತ್ತದೆ. ಬೊಮ್ಮಾಯಿ ಸಂಪುಟದಲ್ಲಿ ಅವರ ಆಯ್ಕೆಯ ಯಾವ ಮುಖಗಳೂ ಕಾಣಿಸುತ್ತಿಲ್ಲ. ಈ ಮೂಲಕ ಹೈಕಮಾಂಡ್ ಮತ್ತು ಯಡಿಯೂರಪ್ಪ ಇಬ್ಬರ ವಿಶ್ವಾಸವನ್ನು ಗಳಿಸಿಕೊಂಡು ಗೊಂದಲ ಗಳಿಲ್ಲದೆ ಸಂಪುಟ ರಚನೆಗೆ ದಾರಿ ಮಾಡಿಕೊಂಡಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ನೂತನ ಸಂಪುಟದಲ್ಲಿ ಯಡಿಯೂರಪ್ಪ ಬೆನ್ನಿಗೆ ನಿಂತ ರೇಣುಕಾಚಾರ್ಯ, ರಾಜುಗೌಡ, ಎಸ್.ಆರ್. ವಿಶ್ವನಾಥ, ಮಾಡಾಳು ವಿರೂಪಾಕ್ಷಪ್ಪ ಹಾಗೂ ಬಿಎಸ್ ವೈ ವಿರುದ್ಧವಾಗಿ ಬಂಡಾಯ ಸಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಹಾಗೂ ಸಿ.ಪಿ. ಯೋಗೇಶ್ವರ್ ಅವರನ್ನು ಸಂಪುಟದಿಂದ ಹೊರಗಿಡುವ ಮೂಲಕ ಬಿಜೆಪಿ ಹೈಕಮಾಂಡ್ ಪಕ್ಷ ಮತ್ತು ಸರ್ಕಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಶಂಕರ ಪಾಗೋಜಿ