Advertisement

ಉಪಕದನದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಜೈ, ಬಿಜೆಪಿಗೆ ಮುಖಭಂಗ

01:20 PM Nov 06, 2018 | Sharanya Alva |

ಬೆಂಗಳೂರು/ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿದ್ದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಬಳ್ಳಾರಿ, ಮಂಡ್ಯ ಲೋಕಸಭೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೈತ್ರಿ ಕೂಟ ಭದ್ರವಾದಂತಾಗಿದೆ. ಮತ್ತೊಂದೆಡೆ ಭಾರತೀಯ ಜನತಾ ಪಕ್ಷ ಬೈಂದೂರು-ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಜಯಸಾಧಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ನಾಯಕತ್ವಕ್ಕೆ ಮತ್ತಷ್ಟು ಬಂಡಾಯದ ಬಿಸಿ ಮುಟ್ಟುವಂತಾಗಿದೆ.

Advertisement

ಬಳ್ಳಾರಿಯಲ್ಲಿ ವಿಎಸ್ ಉಗ್ರಪ್ಪ ಜಯದ ದಾಖಲೆ:

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 6,20,977 ಭರ್ಜರಿ ಮತ ಪಡೆದು ಪ್ರತಿಸ್ಪರ್ಧಿ ಬಿಜೆಪಿಯ ಜೆ.ಶಾಂತಾ ಅವರು 3,79, 321ಮತ ಗಳಿಸಿ ಪರಾಜಯಗೊಂಡಿದ್ದಾರೆ. ಉಗ್ರಪ್ಪ 2,41,656 ಭಾರೀ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಜಯಭೇರಿ:

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಶಿವರಾಮೇಗೌಡರು 5,69,302 ಮತ ಪಡೆದು, ಬಿಜೆಪಿಯ ಸಿದ್ದರಾಮಯ್ಯ 2,44,377 ಮತಗಳಿಸಿ ಹೀನಾಯವಾಗಿ ಸೋಲುಂಡಿದ್ದಾರೆ. ಜೆಡಿಎಸ್ ನ ಶಿವರಾಮೇಗೌಡ 3,24,925 ಭಾರೀ ಮತಗಳ ಅಂತರದಿಂದ ಗೆಲುವಿನ ನಗು ಬೀರಿದ್ದಾರೆ.

Advertisement

ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ:

ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ 5,43,306 ಮತ ಪಡೆದಿದ್ದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತ ಗಳಿಸಿ ಸೋಲಿನ ರುಚಿ ಕಂಡಿದ್ದಾರೆ. ಬಿವೈ ರಾಘವೇಂದ್ರ 52,148 ಮತಗಳ ಅಂತರದಿಂದ ಗೆದ್ದಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾಗೆ ಸುಲಭ ಜಯ:

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ 1,25,043 ಮತ ಪಡೆದಿದ್ದರೆ, ಬಿಜೆಪಿಯ(ಕಣದಿಂದ ಹಿಂದೆ ಸರಿದಿದ್ದ) ಎಲ್.ಚಂದ್ರಶೇಖರ್ 15,906 ಮತ ಪಡೆಯಲು ಶಕ್ತರಾಗಿದ್ದಾರೆ. ಅನಿತಾ ಕುಮಾರಸ್ವಾಮಿ 1,09,137 ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಜಮಖಂಡಿ ವಿಧಾನಸಭಾ ಕ್ಷೇತ್ರ ಕೈ ವಶ:

ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಆನಂದ್ ನ್ಯಾಮಗೌಡ 97017 ಮತ ಪಡೆದಿದ್ದು, ಬಿಜೆಪಿಯ ಶ್ರೀಕಾಂತ ಕುಲಕರ್ಣಿ 57,537 ಮತಗಳಿಸಿ ಪರಾಭವಗೊಂಡಿದ್ದಾರೆ. ಆನಂದ್ ನ್ಯಾಮಗೌಡ 39,476 ಮತಗಳ ಅಂತರದಿಂದ ಜಯಲಕ್ಷ್ಮಿ ಒಲಿದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next