Advertisement

ರಾಜ್ಯಕ್ಕೆ “ಮೋದಿ ಮಾದರಿ’; ಪ್ರಧಾನಿ ಹಾಕಿಕೊಟ್ಟ ಪ್ರಗತಿ ಪಥದಲ್ಲಿ ಆಡಳಿತ

10:50 PM Feb 10, 2023 | Team Udayavani |

ಬೆಂಗಳೂರು:“ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯದ “ಅಮೃತ ಕಾಲ’ದಲ್ಲಿ ಹಾಕಿಕೊಟ್ಟ ಪ್ರಗತಿಯ ಪಥದಲ್ಲಿ ಮುಂದಿನ 25 ವರ್ಷಗಳನ್ನು ಸರ್ಕಾರ ಯಶಸ್ವಿಯಾಗಿ ಕ್ರಮಿಸಲಿದೆ’ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ “ಮೋದಿ ಮಾದರಿ ಆಡಳಿತ’ವನ್ನು ಅನುಸರಿಸುವ ವಾಗ್ಧಾನ ಮಾಡಿದ್ದಾರೆ.

Advertisement

ಶುಕ್ರವಾರ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದ ಗೋಹತ್ಯಾ ನಿಷೇಧ ಕಾಯಿದೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಜತೆಗೆ ಗೋ ಸಂಪತ್ತನ್ನು ರಕ್ಷಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಮುಕ್ತ ಕಂಠದಿಂದ ಶ್ಲಾ ಸಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಪುಣ್ಯಕೋಟಿ ದತ್ತು ಯೋಜನೆಯನ್ನೂ ಅವರು ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿಯವರು ಹಾಕಿಕೊಟ್ಟ ಪ್ರಗತಿ ಪಥದಲ್ಲಿ ಮುಂದಿನ 25 ವರ್ಷವನ್ನು ಯಶಸ್ವಿಯಾಗಿ ಕ್ರಮಿಸುವ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಬಿಜೆಪಿ ಸರ್ಕಾರದ ಬೇರುಗಳು ಅಬಾಧಿತ ಎಂಬ ಸಂದೇಶ ನೀಡುವ ಪ್ರಯತ್ನ ನಡೆಸಿದ್ದಾರೆ.

ವಿಧಾನಸೌಧದ ಭವ್ಯ ಮೆಟ್ಟಿಲು ಮೂಲಕ ಆಗಮಿಸಿದ ರಾಜ್ಯಪಾಲರನ್ನು ಸಂಪ್ರದಾಯದಂತೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ, ಸಿಎಂ ಬಸವರಾಜ ಬೊಮ್ಮಾಯಿ, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಾಗತಿಸಿ ಸದನಕ್ಕೆ ಕರೆತಂದರು.

“ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ 34 ಪುಟಗಳ ಭಾಷಣವನ್ನು ಹಿಂದಿಯಲ್ಲಿ ವಾಚಿಸಿದರು. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮಾದರಿಯನ್ನು ನನ್ನ ಸರ್ಕಾರ ಅನುಸರಿಸುತ್ತಿದ್ದು, ರೈತರು, ಕಾರ್ಮಿಕರು, ಕಡು ಬಡವರು, ಅವಕಾಶ ವಂಚಿತರ ಕಲ್ಯಾಣದ ಜತೆಗೆ ಅಭಿವೃದ್ಧಿಗೆ ಬದ್ಧವಾಗಿ ವಿಕಾಸದ ಹಾದಿಯನ್ನು ನನ್ನ ಸರ್ಕಾರ ಮುನ್ನುಗುತ್ತಿದೆ’ ಎಂದು ಹೇಳಿದರು.

ಮೊದಲ ದಿನವೇ ನಿರುತ್ಸಾಹ, ಕುರ್ಚಿಗಳು ಖಾಲಿ ಖಾಲಿ!
ಅತ್ತ ರಾಜ್ಯಪಾಲರ ಭಾಷಣ, ಇತ್ತ ಶಾಸಕರ ನಿರಾಸಕ್ತಿ. ಯಾರಿಗೂ ಆಸಕ್ತಿಯೂ ಇಲ್ಲ, ಉತ್ಸಾಹವೂ ಇಲ್ಲ. ಸಂತಾಪ ವೇಳೆ ಕುರ್ಚಿಗಳು ಖಾಲಿ ಖಾಲಿ….

Advertisement

ಇದು ರಾಜ್ಯಪಾಲರ ಭಾಷಣ ಹಾಗೂ ಸಂತಾಪ ಸೂಚಕ ವೇಳೆ ವಿಧಾನಸಭೆಯಲ್ಲಿ ಕಂಡು ಬಂದ ದೃಶ್ಯ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರು ಕಲಾಪಕ್ಕೆ ಹಾಜರಾಗಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಜರಾದರೂ ರಾಜ್ಯಪಾಲರ ಭಾಷಣ ಮುಗಿಸಿ ಹೊರಟರು. ಉಳಿದಂತೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಬಹುತೇಕ ಸದಸ್ಯರು ಗೈರು ಹಾಜರಾಗಿದ್ದರು. ಸಂತಾಪ ವೇಳೆ ಬಿಜೆಪಿಯ 34, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 17 ಶಾಸಕರು ಮಾತ್ರ ಇದ್ದರು. ಕೆಲವರು ಬಂದು ಹೋಗುವುದು ಮಾಡುತ್ತಿದ್ದರು. ಹೀಗಾಗಿ, ಸದನ ಖಾಲಿ ಖಾಲಿಯಾಗಿತ್ತು. ರಾಜ್ಯಪಾಲರ ಭಾಷಣದ ವೇಳೆ ಜೆಡಿಎಸ್‌ನ ಡಾ.ಅನ್ನದಾನಿ ಕನ್ನಡದಲ್ಲೇ ಭಾಷಣ ಮಾಡಬೇಕು ಎಂದು ಘೋಷಣೆ ಕೂಗಲು ಕನ್ನಡ ಬಾವುಟ ಸಮೇತ ಎರಡು ಬಾರಿ ಎದ್ದರಾದರೂ ಪಕ್ಕದಲ್ಲೇ ಇದ್ದ ಸಾ.ರಾ.ಮಹೇಶ್‌ ಸುಮ್ಮನಾಗಿಸಿದರು. ಮತ್ತೂಂದೆಡೆ ಪರಿಷತ್‌ನಲ್ಲಿ ಸಂತಾಪ ಸಂದರ್ಭದಲ್ಲಿ 40ರಷ್ಟು ಸದಸ್ಯರು ಹಾಜರಿದ್ದರು.

ಚುನಾವಣೆಯದ್ದೆ ಚರ್ಚೆ
ಜಂಟಿ ಅಧಿವೇಶನ ಪ್ರಯುಕ್ತ ಬಂದಿದ್ದ ಶಾಸಕರು ಮುಂದಿನ ಚುನಾವಣೆ ಬಗ್ಗೆ ಹಾಗೂ ತಮ್ಮ ಎದುರಾಳಿಗಳ ಬಗ್ಗೆಯೇ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ನಮ್ಮ ಕ್ಷೇತ್ರದಲ್ಲಿ ಟಫ್ ಇದೆ, ನಮ್ಮಲ್ಲಿ ದುಡ್ಡು ಕಂತೆ ಹಿಡಿದು ಹೊಸಬರು ಬಂದಿದ್ದಾರೆ ಎಂಬ ಚರ್ಚೆಗಳು ನಡೆದಿತ್ತು. ರಾಜ್ಯಪಾಲರ ಭಾಷಣ ಮುಗಿಸಿ ಬಂದ ಸಚಿವರ ಸುತ್ತುವರಿದ ಶಾಸಕರು ತಮ್ಮ ಕ್ಷೇತ್ರಗಳ ಕೆಲಸಗಳ ಬಗ್ಗೆ ಪತ್ರ ಕೊಟ್ಟು ಮನವಿ ಮಾಡುತ್ತಿದ್ದರು.

ರಾಜ್ಯಪಾಲರು ಹೇಳಿದ್ದೇನು?
– ರಾಜಸ್ವ ಸಂಗ್ರಹದಲ್ಲಿ ಶೇ.93 ಗುರಿ ಸಾಧಿಸಲಾಗಿದೆ. ಸ್ವಂತ ರಾಜಸ್ವವು ಕಳೆದ ಸಾಲಿಗೆ ಹೋಲಿಸಿದರೆ ಶೇ.21ರಷ್ಟು ಹೆಚ್ಚಳವಾಗಿದೆ.
– ಅತಿವೃಷ್ಟಿಯಿಂದ ಬೆಳೆನಾಶ ಅನುಭವಿಸಿದ 14.63 ಲಕ್ಷ ರೈತ ಕುಟುಂಬಗಳಿಗೆ 2031 ಕೋಟಿ ರೂ. ಪರಿಹಾರ.
– ಕಳೆದ ನವೆಂಬರ್‌ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9,81,784 ಕೋಟಿ ರೂ. ಬಂಡವಾಳ ಆಕರ್ಷಿಸಲಾಗಿದೆ.
– ರಾಜ್ಯದ ಅಗತ್ಯತೆ ಪೂರೈಸಿ ಹೆಚ್ಚುವರಿಯಾದ 4326.45 ಮಿಲಿಯನ್‌ ಯುನಿಟ್‌ ವಿದ್ಯುತ್‌ ಮಾರಾಟ ಮಾಡಿ 2,500 ಕೋಟಿ ರೂ. ಗಳಿಸಲಾಗಿದೆ.
– 2022-23ನೇ ಸಾಲಿನಲ್ಲಿ 15,066 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ 20.19 ಲಕ್ಷ ರೈತರಿಗೆ ವಿತರಣೆ

Advertisement

Udayavani is now on Telegram. Click here to join our channel and stay updated with the latest news.

Next