Advertisement
ರಾಜ್ಯ ಬಜೆಟ್ ಮಂಡನೆ ಮಾಡಿದ ಅವರು ಈಗಾಗಲೇ 15 ಜಿಲ್ಲೆಗಳಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ನ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಉಡುಪಿ, ದಾವಣಗೆರೆ, ವಿಜಯಪುರ, ಮೈಸೂರು, ಮಂಡ್ಯ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 187 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ಸಾಲಿನಲ್ಲಿ ಉಳಿದ 9 ಜಿಲ್ಲೆಗಳಲ್ಲಿಯೂ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಆಸ್ಪತ್ರೆಗಳಿಲ್ಲದ ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳನ್ನು 280 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು. ಆರೋಗ್ಯ ಇಲಾಖೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಮತ್ತು ಉನ್ನತೀಕರಣಕ್ಕೆ 75 ಕೋಟಿ ರೂ. ಗಳ ಅನುದಾನವನ್ನು ಒದಗಿಸಲಾಗುವುದು ಎಂದರು.
Related Articles
Advertisement
ಗ್ರಾಮೀಣ ಪ್ರದೇಶದ ಜನರಿಗೆ 24×7 ತುರ್ತು ಆರೋಗ್ಯ ಸೇವೆಯನ್ನು ನೀಡಲು ಮುಂದಿನ 2 ವರ್ಷಗಳಲ್ಲಿ 350 ಕೋಟಿ ರೂ.ಗಳ ವೆಚ್ಚದಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 15 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾನವ ಸಂಪನ್ಮೂಲದೊಂದಿಗೆ ಕಾರ್ಯಗತಗೊಳಿಸಲಾಗುವುದು ಎಂದರು.
ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಮತ್ತು ನಿರಂತರ ಅನುಸರಣೆಗಾಗಿ ಬಹುತೇಕ ಜಿಲ್ಲೆಗಳಲ್ಲಿ ಕಿಮೋ ಥೆರಪಿ ಚಿಕಿತ್ಸಾ ಕೇಂದ್ರಗಳು ಲಭ್ಯವಿರದ ಕಾರಣ, ಸರ್ಕಾರವು 20 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಡೇ-ಕೇರ್ ಕಿಮೋಥೆರಪಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಡಿಜಿಟಲ್ ಮ್ಯಾಮೊಗ್ರಫಿ ಯಂತ್ರಗಳನ್ನು ಮತ್ತು ಕೆ.ಸಿ. ಜನರಲ್ ಆಸ್ಪತ್ರೆ ಬೆಂಗಳೂರು ಹಾಗೂ ಉಡುಪಿ, ಕೋಲಾರ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಿಗೆ ಕಾಲ್ಪಸ್ಕೊಪಿ (Colposcopy) ಉಪಕರಣಗಳ ಖರೀದಿಗೆ ಒಟ್ಟಾರೆಯಾಗಿ 21 ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು ಎಂದರು.
ಇದನ್ನೂಓದಿ: Karnataka Budget: ರಾಜ್ಯ ಬಜೆಟ್ ನಲ್ಲಿ ಇಲಾಖಾವಾರು ಹಂಚಿಕೆ ಮಾಡಿದ ಅನುದಾನ ಎಷ್ಟು?