ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರದ ಹಣಕಾಸು ಖಾತೆ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಮಂಡಿಸಿರುವ ಬಜೆಟ್ ನಲ್ಲಿ ಪ್ರಾಥಮಿಕ ಸಹಕಾರಿ, ಎಲ್ಲಾ ರಾಷ್ಟ್ರೀಕೃತ, ಪ್ರಾದೇಶಿಕ, ರೈತ ಸೇವಾ ಸಹಕಾರ ಸಂಘಗಳಿಂದ, ಕಿಸಾನ್ ಕ್ರೆಡಿಟ್ ಕಾರ್ಡ್ ನಡಿ ಪಡೆದಿರುವ 2 ಲಕ್ಷ ರೂಪಾಯಿವರೆಗಿನ ರೈತರ ಸಾಲಮನ್ನಾ ಮಾಡಿರುವುದಾಗಿ ಘೋಷಿಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 34,000 ಕೋಟಿ ಹೊರೆಯಾಗಲಿದೆ. ಬೆಳೆ ಸಾಲ ಮನ್ನಾದಿಂದ 44.89 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ. ಇಂದು ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ಗಾತ್ರ 2 ಲಕ್ಷ 18 ಸಾವಿರ 488 ಕೋಟಿ ರೂ. ಆಗಿದೆ. ಮೊದಲ ಹಂತದಲ್ಲಿ 2017 ಡಿಸೆಂಬರ್ 31ರವರೆಗೆ ರೈತರು ಮಾಡಿದ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವ ರೈತರಿಗೂ ಸಹ ಅನುಕೂಲ ಮಾಡಿಕೊಡಲು ಸುಸ್ತಿದಾರರಲ್ಲದ ರೈತ ಸಾಲ ಖಾತೆಗಳಿಗೆ ಉತ್ತೇಜನಕಾರಿಯಾಗಿ ಪ್ರತಿ ಖಾತೆಗೆ ಅವರು ಮರುಪಾವತಿ ಮಾಡಿರುವ ಸಾಲದ ಮೊತ್ತ ಅಥವಾ 25,000 ರೂ. ಜಮಾ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಹಾಗೂ ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರುಗಳು ಹಾಗೂ ಇತರೆ ಅನರ್ಹ ಕೃಷಿ ಸಾಲಗಾರರು ಈ ಸಾಲ ಮನ್ನಾ ಯೋಜನೆಯಿಂದ ಹೊರಗೆ ಇರಲಿದ್ದಾರೆ. ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಯಲ್ಲಿ 2018-19 ಸಾಲಿನಲ್ಲಿ ಇಸ್ರೇಲ್ ಕೃಷಿ ಪದ್ಧತಿ. 7ಕೆಜಿ ಪಡಿತರ ಅಕ್ಕಿ 5ಕೆಜಿಗೆ ಇಳಿಕೆ. ಹಳೇ ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ರಾಮನಗರಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಪೆಟ್ರೋಲ್ ಮೇಲಿನ ಸೆಸ್ ಶೇ.20 ರಿಂದ ಶೇ.32ಕ್ಕೆ, ಡಿಸೇಲ್ ಮೇಲಿನ ಸೆಸ್ ಶೇ.19 ರಿಂದ ಶೇ.22ಕ್ಕೆ ಹೆಚ್ಚಳ, ಪ್ರತಿ ಯೂನಿಟ್ ವಿದ್ಯುತ್ 20 ಪೈಸೆ ಏರಿಕೆ, ಮದ್ಯದ ಮೇಲಿನ ತೆರಿಗೆ ಶೇ.4ರಷ್ಟು ಹೆಚ್ಚಳ ಮಾಡಲಾಗಿದೆ. ಮತ್ತೊಂದೆಡೆ ಇದೊಂದು ಅಣ್ಣ-ತಮ್ಮನ ಬಜೆಟ್ ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ. ರೈತ ಸಮುದಾಯಕ್ಕೆ ವಿಶ್ವಾಸದ್ರೋಹ ಎಸಗಿದ ಬಜೆಟ್ ಇದಾಗಿದ್ದು, ಕಾಂಗ್ರೆಸ್ ತನ್ನ ಬೆಂಬಲವನ್ನು ವಾಪಸ್ ಪಡೆಯಬೇಕು. 24 ಗಂಟೆಗಳಲ್ಲಿ 54 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೀರಿ ಎಂದು ಹೇಳಿದ್ದೀರಿ. ಆದರೆ ಈಗ 34ಸಾವಿರ ಕೋಟಿ ಸಾಲಮನ್ನಾ ಮಾಡಿ ಕುಮಾರಸ್ವಾಮಿ ಮಾತಿಗೆ ತಪ್ಪಿ, ನಂಬಿಕೆ ದ್ರೋಹ ಮಾಡಿದ ಬಜೆಟ್ ಮಂಡಿಸಿದ್ದಾರೆ ಎಂದು ಟೀಕಿಸಿದ್ದಾರೆ.