ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರ್ಥ ಸಚಿವನಾಗಿ ತಮ್ಮ ಎಂಟನೆಯ ಬಜೆಟ್ ಮಂಡಿಸಿದ್ದಾರೆ. ಯಡಿಯೂರಪ್ಪ ಅವರೇ ಬಜೆಟ್ ಮಂಡನೆ ವೇಳೆ ಹೇಳಿದಂತೆ ಪ್ರಕೃತಿ ವಿಕೋಪಗಳು, ಧುತ್ತನೆ ಬಂದೆರಗಿದ ಕೊರೊನಾ ಸಾಂಕ್ರಾಮಿಕದ ದುಃಸ್ವಪ್ನದ ನಡುವೆಯೂ ವಿತ್ತೀಯ ಶಿಸ್ತು ಪಾಲನೆ ಮತ್ತು ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವುದು ಕತ್ತಿಯ ಅಲುಗಿನ ಮೇಲಿನ ನಡಿಗೆಯ ಅನುಭವ! ಈ ಸವಾಲಿನ ಹಾದಿಯನ್ನು ಸವೆಸಲು ಕಸರತ್ತು ನಡೆಸಿರುವುದು ವೇದ್ಯವಾಗಿದೆ.
ಅಭಿವೃದ್ಧಿ ಕಾರ್ಯಗಳನ್ನು, ಹೊಸ ಘೋಷಣೆಗಳನ್ನು ಯಾವುದೇ ಸರ್ಕಾರ ಮಾಡಬೇಕಾದರೆ, ವಿವಿಧ ತೆರಿಗೆಗಳ ಸಕಾಲಿಕ ಸಂಗ್ರಹದಿಂದ ಮಾತ್ರ ಸಾಧ್ಯ. ಇದುವರೆಗೆ ಸರ್ಕಾರಗಳು ತೆರಿಗೆಗಳನ್ನು ಜನಸಮಾನ್ಯರ ಮೇಲೆ ಹೊರಿಸಿ ತನ್ನ ವಿತ್ತೀಯ ಹೊರೆಯನ್ನು ತಗ್ಗಿಸಿಕೊಂಡಿ ರುವುದನ್ನು ಕಂಡಿದ್ದೇವೆ. ಆದರೆ, ರಾಜ್ಯ ಕಂಡ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಯಡಿಯೂರಪ್ಪ ಅವರು ಪೆಟ್ರೋಲ್, ಡೀಸೆಲ್ ಮೇಲೆ ಮಾರಾಟ ತೆರಿಗೆ ಸೇರಿದಂತೆ ಇನ್ಯಾವುದೇ ತೆರಿಗೆಗಳ ದರ ಹೆಚ್ಚಿಸದೆ ಆಯವ್ಯಯವನ್ನು ಮಂಡಿಸಿದ್ದಾರೆ. ರಾಜ್ಯ ಬೊಕ್ಕಸವನ್ನು ತುಂಬುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನೂ ಹೆಚ್ಚಿಸಿಲ್ಲ. ಕೆಳ ಮಧ್ಯಮ ವರ್ಗದವರ ಮನೆ ಖರೀದಿಗೆ ಉತ್ತೇಜಿಸಲು 35ರಿಂದ 45 ಲಕ್ಷ ರೂ. ವರೆಗಿನ ಫ್ಲಾಟ್‌ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕ ಶೇ.5ರಿಂದ ಶೇ.3ಕ್ಕೆ ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳಿಗೆ ಅನುದಾನ, ರೈಲ್ವೆ, ನೀರಾವರಿ, ಗ್ರಾಮೀಣಾಭಿವೃದ್ಧಿಯಂತಹ ಆದ್ಯತಾ ವಲಯಗಳಿಗೆ ಒತ್ತು ನಿಡುವ ಜತೆಯಲ್ಲೇ, ಒಕ್ಕಲಿಗರ ಅಭಿವೃದ್ಧಿ ನಿಗಮ ಘೋಷಣೆ ಸೇರಿದಂತೆ ಹಲವು ಜಾತಿ ನಿಗಮ/ಮಂಡಳಿಗಳನ್ನು ತೃಪ್ತಿ ಪಡಿಸಿರುವ ಯತ್ನ ಮಾಡಿದಂತಿದೆ. ತಮ್ಮ ಪಕ್ಷದ ನಿಲುವಿನಂತೆ ಗೋಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿ ಜಾರಿಗೆ ಜಿಲ್ಲೆಗೊಂದು ಗೋ ಶಾಲೆ ಘೋಷಿಸಲಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಅನುದಾನ, ಹೀಗೆ… ಅಭಿವೃದ್ಧಿ ಸಾಮಾಜಿಕ ನ್ಯಾಯ , ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಪಕ್ಷದ ಒತ್ತಾಸೆಗೂ ಸ್ಪಂದಿಸುವ ಕೈಚಳಕವನ್ನು ಯಡಿಯೂರಪ್ಪ ತೋರಿಸಿದ್ದಾರೆ.
ಎಲ್ಲ ವಲಯಗಳ, ಎಲ್ಲ ಕ್ಷೇತ್ರಗಳನ್ನು ತಲುಪಲು, ಮುಂದಕ್ಕೆ ಹೋಗದೆ, ಹಿಂದಕ್ಕೆ ಸರಿಯದೆ ಸಮತೋಲಿತ ಬಜೆಟ್ ಮಂಡನೆಗೆ ಮುಖ್ಯಮಂತ್ರಿಗಳು ಯತ್ನಿಸಿದ್ದಾರೆ. ಜನ”ಪ್ರಿಯ’ ಬಜೆಟ್ ಮಂಡಿಸಲು ಸಾಹಸಪಟ್ಟಿದ್ದಾರೆ. ಸಂಕಷ್ಟ ಕಾಲದಿಂದ ಇನ್ನೇನು ಹೊರಬರುತ್ತಿರುವ ಹೊತ್ತಿಗೆ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹ. ಆದರೆ, ಮುಂದೇನು ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.
ಕಷ್ಟ ಕಾಲದಲ್ಲಿ ಯಡಿಯೂರಪ್ಪ ಹೆಜ್ಜೆ ಹಿತ ಎನಿಸಿದರೂ, ಇದೊಂದು ಎಚ್ಚರಿಕೆ ಕರೆಗಂಟೆ ಎಂದರೆ ತಪ್ಪೇನಿಲ್ಲ. ಅನಿರ್ವಾಯತೆ ಇದೆ. ಹಾಗೆಂದು ರಾಜ್ಯವನ್ನು ಸಾಲದ ಹೊರೆಯಿಂದ ಸಂಕಷ್ಟಕ್ಕೆ ಈಡಾಗುವ ಮುನ್ನ ಸರ್ಕಾರ ಇನ್ನಷ್ಟು ಆದಾಯ ಸಂಗ್ರಹ ಕಾರ್ಯಕ್ರಮಗಳತ್ತ ಮುಖ ಮಾಡಬೇಕಿದೆ. ತೆರಿಗೆ ಸೋರಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು, ಬಳಕೆದಾರನ ಬಳಕೆ ಪ್ರಮಾಣ ಹೆಚ್ಚಿಸುವುದು, ಅದಕ್ಕಾಗಿ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿ ಮತ್ತಷ್ಟು ಆರ್ಥಿಕವಾಗಿ ಬಲಪಡಿಸುವತ್ತ ನೀತಿಗಳನ್ನು ರೂಪಿಸಬೇಕಿದೆ.
ಯಡಿಯೂರಪ್ಪ ಅವರ ಸದಾಶಯ ಈಡೇರಿಕೆಗೆ ಆದಾಯ ಸಂಗ್ರಹ ಕಾರ್ಯ, ಆದಾಯ ವೃದ್ಧಿ, ಅದಕ್ಕಾಗಿ ಅಭಿವೃದ್ಧಿ ಯಂತ್ರದ ಸಮಗ್ರ ಬಳಕೆ ಆಗಬೇಕಿದೆ. ಆಡಳಿತ ಯಂತ್ರ ಅತ್ಯಂತ ಚುರುಕು ಮತ್ತು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. “ಆಯ’ ಹೆಚ್ಚಿಸಿ “ವ್ಯಯ’ ತಗ್ಗಿಸಲು ಇನ್ನಷ್ಟು ಭರವಸೆ ತುಂಬಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಬೇಕಾಗಿದೆ.