Advertisement
ಕೋವಿಡ್ ಹಿನ್ನೆಲೆಯಲ್ಲಿ ಸ್ವಂತ ತೆರಿಗೆ ಮೂಲದಿಂದ ಹೆಚ್ಚುವರಿ ಆದಾಯ ಸಂಗ್ರಹ ನಿರೀಕ್ಷೆ ಖಾತರಿಯಿಲ್ಲದ ಕಾರಣ ಬರೋಬ್ಬರಿ 71,332 ಕೋಟಿ ರೂ. ಸಾಲ ಪಡೆಯುವ ಗುರಿಯನ್ನು ಬಜೆಟ್‌ನಲ್ಲಿ ಹೊಂದಲಾಗಿದೆ. ಅಬಕಾರಿ ತೆರಿಗೆ ಹೊರತುಪಡಿಸಿದರೆ ಉಳಿದ ಮೂಲದಿಂದ ನಿರೀಕ್ಷಿತ ಆದಾಯ ಸಂಗ್ರಹ ಅಸಾಧ್ಯವೆಂಬುದು ಸರ್ಕಾರಕ್ಕೆ ಮನವರಿಕೆಯಾದಂತಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಕೆಲ ಸ್ವಂತ ತೆರಿಗೆ ಮೂಲದ ಆದಾಯ ಗುರಿಯನ್ನೇ ಇಳಿಕೆ ಮಾಡಿದರೆ ಕೆಲ ಆದಾಯದ ಗುರಿಯನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡಿರುವುದು ಕಾಣುತ್ತದೆ.
Related Articles
Advertisement
ಒಟ್ಟು ಜಮೆ 2.43 ಲಕ್ಷ ಕೋಟಿ ರೂ.ಮುಂದಿನ ಹಣಕಾಸು ವರ್ಷದಲ್ಲಿ 1,72,271 ಕೋಟಿ ರೂ. ರಾಜಸ್ವ, 71,332 ಕೋಟಿ ರೂ. ಸಾಲದ ಮೂಲಕ ಒಟ್ಟು 2,43,734 ಕೋಟಿ ರೂ. ಜಮೆಯಾಗುವ ಅಂದಾಜಿದೆ. ಇದರಲ್ಲಿ 1,87,405 ಕೋಟಿ ರೂ. ರಾಜಸ್ವ ವೆಚ್ಚ, 44,237 ಕೋಟಿ ರೂ. ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿಗೆ 14,565 ಕೋಟಿ ರೂ. ಸೇರಿದಂತೆ ಒಟ್ಟು ವೆಚ್ಚ 2,46,207 ಕೋಟಿ ರೂ. ಎಂಬುದಾಗಿ ಅಂದಾಜಿಸಲಾಗಿದೆ. ಸಾರಿಗೆ ತೆರಿಗೆ ಗುರಿ ತುಸು ಏರಿಕೆ: ಸಾರಿಗೆ ತೆರಿಗೆ ಮೂಲದಿಂದ 7115 ಕೋಟಿ ರೂ. ಸಂಗ್ರಹ ಗುರಿಯಿದ್ದರೂ ಜನವರಿ ಅಂತ್ಯಕ್ಕೆ ಸಂಗ್ರಹವಾಗಿರುವುದು 4294 ಕೋಟಿ ರೂ. ಮಾತ್ರ. ಹಾಗಿದ್ದರೂ ಮುಂದಿನ ಹಣಕಾಸು ವರ್ಷದಲ್ಲಿ 7515 ಕೋಟಿ ರೂ. ಸಾರಿಗೆ ತೆರಿಗೆ ಆದಾಯ ನಿರೀಕ್ಷಿಸಿರುವುದು ಅಚ್ಚರಿ ಮೂಡಿಸಿದೆ. ಸಂಪನ್ಮೂಲ ಕ್ರೋಡೀಕರಣ: 2021-22ನೇ ಸಾಲಿನಲ್ಲಿ ಜಿಎಸ್‌ಟಿ ಪರಿಹಾರ ಸೇರಿದಂತೆ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ 1,24,202 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 8,258 ಕೋಟಿ ರೂ., ಕೇಂದ್ರ ತೆರಿಗೆ ಪಾಲಿನಿಂದ 24,273 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ ಸಹಾಯಾನುದಾನದಿಂದ 15,538 ಕೋಟಿ ರೂ. ಸಂಗ್ರಹ ನಿರೀಕ್ಷೆ ಹೊಂದಲಾಗಿದೆ.