ಬೆಂಗಳೂರು:2023-24ನೇ ಸಾಲಿನ ಮುಂಗಡಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ (ಫೆ.17) ವಿಧಾನಸಭೆಯಲ್ಲಿ ಮಂಡಿಸಿದ್ದು, ರಾಜ್ಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ಬೃಹತ್ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಲು ರಾಜ್ಯ ಸರ್ಕಾರ ಕೂಡಾ ಹೆಚ್ಚಿನ ಆದ್ಯತೆ ನೀಡುವುದಾಗಿ ಘೋಷಿಸಿದ್ದಾರೆ.
ರಾಜ್ಯದ ಹಣಕಾಸು ಪರಿಸ್ಥಿತಿ ಹೇಗಿದೆ?
2022-23ನೇ ಸಾಲಿನಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಸದೃಢವಾಗಿದ್ದು, ಉತ್ತಮ ಬೆಳವಣಿಗೆ ಕಂಡಿರುವುದಾಗಿ ತಿಳಿಸಿದೆ. ಆರ್ಥಿಕ ಚಟುವಟಿಕೆಗಳ ವೃದ್ಧಿಯಿಂದ ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ.
ವಾರ್ಷಿಕ ಜಿಎಸ್ ಟಿ ಸಂಗ್ರಹ ಏರಿಕೆ:
Related Articles
ಆರ್ಥಿಕ ಬೆಳವಣಿಗೆಯೊಂದಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ವಾರ್ಷಿಕ ಜಿಎಸ್ ಟಿ ಸಂಗ್ರಹಣೆಯು 2021-22ರ ಜನವರಿ ಅಂತ್ಯಕ್ಕೆ ಹೋಲಿಸಿದರೆ ಶೇ.26ರಷ್ಟು ಬೆಳವಣಿಗೆಯಾಗಿದೆ. ಅದೇ ರೀತಿ ಮೋಟಾರು ವಾಹನಗಳ ತೆರಿಗೆ ಮತ್ತು ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಹ ಹೆಚ್ಚಳವಾಗಿದೆ. ಒಟ್ಟಾರೆ ಆರ್ಥಿಕ ವರ್ಷ 2021-22ಕ್ಕೆ ಹೋಲಿಸಿದರೆ ಜನವರಿ ಅಂತ್ಯದವರೆಗೆ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹ ಶೇ.21ರಷ್ಟು ಹೆಚ್ಚಳವಾಗಿದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.
ರಾಜ್ಯಕ್ಕೆ ಕೇಂದ್ರದಿಂದ ಬಂದ ತೆರಿಗೆ ಪಾಲೆಷ್ಟು?
ಕೇಂದ್ರ ಸರ್ಕಾರದ ನೇರ ಮತ್ತು ಪರೋಕ್ಷ ತೆರಿಗೆಯ ಹೆಚ್ಚಳದಿಂದ ರಾಜ್ಯದ ತೆರಿಗೆ ಪಾಲು 4,813 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಅಲ್ಲದೇ ಕೇಂದ್ರ ಸರ್ಕಾರವು 2023-24ನೇ ಸಾಲಿಗೆ ರಾಜ್ಯಕ್ಕೆ 37,252 ಕೋಟಿ ರೂ.ಗಳ ತೆರಿಗೆ ಪಾಲನ್ನು ಅಂದಾಜಿಸಿದೆ. ಇದು 2022-23ರ ಆಯವ್ಯಯದ ಅಂದಾಜಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರವು ರಾಜ್ಯದ ತೆರಿಗೆ ಪಾಲನ್ನು ಹೆಚ್ಚಿಸಿರುವುದರಿಂದ ರಾಜ್ಯ ಸರ್ಕಾರವು ವಿತ್ತೀಯ ಸುಸ್ಥಿರತೆ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಬಜೆಟ್ ನಲ್ಲಿ ಉಲ್ಲೇಖಿಸಿದೆ.
ರಾಜ್ಯದ ಸ್ವಂತ ರಾಜಸ್ವ ಸಂಗ್ರಹಣೆ ಮತ್ತು ಕೇಂದ್ರ ಸರ್ಕಾರದ ತೆರಿಗೆ ಪಾಲಿನ ಹೆಚ್ಚಳವು 2022-23ರ ಪರಿಷ್ಕೃತ ಅಂದಾಜಿನಲ್ಲಿ ರಾಜ್ಯದ ರಾಜಸ್ವ ಕೊರತೆಯನ್ನು 8,703 ಕೋಟಿ ರೂ.ಗಳಷ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರೊಂದಿಗೆ ವಿತ್ತೀಯ ಸುಸ್ಥಿರತೆಯ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅಂದಾಜಿಸಿದ ಸಾಲವನ್ನು ಪೂರ್ಣಪ್ರಮಾಣದಲ್ಲಿ ಪಡೆಯದೆ ನಿಯಂತ್ರಿಸಲಾಗುವುದು ಎಂದು ಘೋಷಿಸಲಾಗಿದೆ.