Advertisement

ಬಾಗಲಕೋಟೆಗೆ ಕೈ ಕೊಟ್ಟ ಬಜೆಟ್‌; ಹುಸಿಯಾದ ಭರವಸೆಗಳು

06:16 PM Jul 08, 2023 | Team Udayavani |

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 129 ಪುಟಗಳ ಬಜೆಟ್‌ ಪ್ರತಿಯಲ್ಲಿ ಬಾಗಲಕೋಟೆ ಹೆಸರು ಹುಡುಕಿ ಕೊಡಿ ಎಂಬ ಆಕ್ರೋಶದ ಮಾತು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ.

Advertisement

ಹೌದು, ಹಲವು ನಿರೀಕ್ಷೆ-ಭರವಸೆ ಹೊಂದಿದ್ದ ಜಿಲ್ಲೆಯ ಜನತೆಗೆ ಈ ಬಜೆಟ್‌ನಿಂದ ನಿರಾಶೆಯಾಗಿದೆ. ಆಡಳಿತ ಪಕ್ಷದವರು, ಅನಿವಾರ್ಯವಾಗಿ ಬಜೆಟ್‌ ಸ್ವಾಗತಿಸಿರಬಹುದು. ಅವರಲ್ಲೂ ಜಿಲ್ಲೆಗೆ ಏನೂ ಸಿಕ್ಕಿಲ್ಲ ಎಂಬ ಅಸಮಾಧಾನ ಇರುವುದು ನಿಜ ಎಂಬ ಮಾತು ಕೇಳಿ ಬರುತ್ತಿದೆ.

ಸ್ಪಷ್ಟತೆಯೇ ಇಲ್ಲ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿಸಿದ ನೀರಾವರಿ ಮತ್ತು ಪ್ರವಾಸೋದ್ಯಮ ಬಿಟ್ಟರೆ ಬೇರೇನೂ
ಪ್ರಸ್ತಾಪವಿಲ್ಲ. ಬಾಗಲಕೋಟೆಯಲ್ಲಿ ರಾಜಕೀಯವಾಗಿ ಅತ್ಯಂತ ಪ್ರತಿಷ್ಠೆಯಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಕನಿಷ್ಠ ಭೂಮಿ ಗುರುತಿಸುವ, 10 ಕೋಟಿ ಅನುದಾನವನ್ನಾದರೂ ನೀಡಿ, ಪ್ರಕ್ರಿಯೆ ಆರಂಭಿಸಬೇಕೆಂಬ ಕಾಂಗ್ರೆಸ್‌ನವರ ನಿಯೋಗಕ್ಕೂ ಇಲ್ಲಿ ಕೊಂಚವೂ ಬೆಲೆ ಸಿಕ್ಕಿಲ್ಲ. ಸುಮಾರು ಐದು ವರ್ಷಗಳವರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯೇ
ಮುಂದಿಟ್ಟುಕೊಂಡು ರಾಜಕೀಯ ಮಾಡಿದವರಿಗೆ ಇದು ಹಿನ್ನಡೆಯಾಗಿದಂತೂ ಸತ್ಯ.

ಇನ್ನು ಈಗಾಗಲೇ ಘೋಷಣೆಯಾಗಿರುವ, ಬಹುತೇಕ ಕಾಮಗಾರಿ ಆರಂಭದ ಹಂತದಲ್ಲಿರುವ ಕೆಲ ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅದರಲ್ಲಿ ಬಾಗಲಕೋಟೆ ತಾಲೂಕಿನ ತಿಮ್ಮಾಪುರ
ಏತ ನೀರಾವರಿ, ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ ಹಾಗೂ ಬೆಳಗಾವಿ ಜಿಲ್ಲೆಯ ಕೆಲ ಭಾಗಕ್ಕೆ ನೀರಾವರಿ ಒದಗಿಸುವ ಸಸಾಲಟ್ಟಿ-ಶಿವಲಿಂಗೇಶ್ವರ, ಮುಧೋಳ ತಾಲೂಕಿನ ಮಂಟೂರ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.

ಕೃಷ್ಣೆಗೆಷ್ಟು ಅನುದಾನ?: ಈ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 6252 ಕೋಟಿ ಮೀಸಲಿಡಲಾಗಿದೆ. 1.36 ಲಕ್ಷ ಎಕರೆ ಭೂಮಿ ಸ್ವಾಧೀನ, ಹಲವು ನೀರಾವರಿ ಉಪ ಯೋಜನೆಗಳು, 20 ಹಳ್ಳಿಗಳ ಸ್ಥಳಾಂತರದಂತಹ ಬೃಹತ್‌ ಯೋಜನೆಗೆ ಈಗಿನ ಯೋಜನಾ ವರದಿ ಪ್ರಕಾರ ಕನಿಷ್ಠ 1 ಲಕ್ಷ ಕೋಟಿ ಅನುದಾನ ಬೇಕಾಗುತ್ತದೆ. ಆದರೆ, ಬಜೆಟ್‌ನಲ್ಲಿ ನೀಡಿದ್ದು, 6 ಸಾವಿರ ಕೋಟಿ ಮಾತ್ರ.

Advertisement

ಇದರಿಂದ ಯಾವುದೇ ಯೋಜನೆ ಪೂರ್ಣಗೊಳಿಸಲೂ ಸಾಧ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ಬಾದಾಮಿ, ಬನಶಂಕರಿ ಪ್ರವಾಸಿತಾಣಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ. ಬಾದಾಮಿ ಗುಹೆಗಳ ಸುತ್ತಲೂ ರಾತ್ರಿ ವೇಳೆ ಪ್ರವಾಸಿಗರ ಭೇಟಿ ಉತ್ತೇಜಿಸಲು 3ಡಿ ಪ್ರೊಜೆಕ್ಷನ್‌, ಮಲ್ಟಿಮೀಡಿಯಾ, ಸೌಂಡ್‌ ಮತ್ತು ಲೈಟ್‌ ಷೋ ಯೋಜನೆ ರೂಪಿಸುವುದಾಗಿ ಘೋಷಿಸಲಾಗಿದೆ. ಪ್ರವಾಸೋದ್ಯಮ ದೃಷ್ಠಿಯಿಂದ ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ, ಗುಹೆಗಳಿಗೆ ಲೈಟಿಂಗ್‌ ವ್ಯವಸ್ಥೆ ಮಾಡುವ ಮೊದಲು, ಅಲ್ಲಿಗೆ ತೆರಳಲು ಒಂದು ಸುಂದರ ರಸ್ತೆ (ಇಕ್ಕಟ್ಟಾದ ರಸ್ತೆ ಇದೆ) ನಿರ್ಮಿಸುವ ಕಾರ್ಯ ನಡೆಯಬೇಕಿದೆ. ಗುಹೆ ಹಾಗೂ ಅಗಸ್ತ್ಯತೀರ್ಥ ಹೊಂಡದ ಸುತ್ತಲೂ ಇರುವ ತಟಕೋಟೆ ಗ್ರಾಮ ಸ್ಥಳಾಂತರ ಭರವಸೆ ನೆನೆಗುದಿಗೆ ಬಿದ್ದಿದೆ. ಇಂತಹ ಹಲವು ಮೂಲ ಯೋಜನೆಗಳ ಪೂರ್ಣಗೊಳಿಸುವ ಕಾರ್ಯದ ಕುರಿತು ಪ್ರಸ್ತಾಪಿಸಿಲ್ಲ ಎಂಬ ಕೊರಗು ಬಾದಾಮಿ ಜನರಲ್ಲಿದೆ.

ಪಟ್ಟು ಹಿಡಿಯದ ಆಡಳಿತ ಪಕ್ಷದ ಶಾಸಕರು: ತಮ್ಮ ರಾಜಕೀಯ, ಭಿನ್ನ ನಡೆ ಏನೇ ಇರಲಿ. ದಕ್ಷಿಣ ಕರ್ನಾಟಕದ, ಬೆಂಗಳೂರು ಮಹಾನಗರದ ಶಾಸಕರಂತೆ, ಉತ್ತರಕರ್ನಾಟಕ ಅಥವಾ ಜಿಲ್ಲೆಯ ಆಡಳಿತ ಪಕ್ಷದ ಶಾಸಕರು, ಒಟ್ಟಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ, ಇಲ್ಲವೇ ಇಂತಹ ಯೋಜನೆ ಜಾರಿಗೊಳಿಸಲೇಬೇಕೆಂದು ಪಟ್ಟು ಹಿಡಿಯುವ ಸಂಪ್ರದಾಯ ರೂಢಿಸಿಕೊಂಡಿಲ್ಲ. ಕೇವಲ ಸಾಹೇಬ್ರ ಎಂದು ಕೈಮುಗಿದು ನಿಂತರೆ, ಜಿಲ್ಲೆಯ ಜನರ ಭರವಸೆಗಳ ಈಡೇರಿಸುವ ಜವಾಬ್ದಾರಿ ಈಡೇರಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಹುಸಿಯಾದ ಭರವಸೆಗಳು
ಜಿಲ್ಲೆಗೆ ಜವಳಿ ಪಾರ್ಕ್‌, ಸರ್ಕಾರಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜು, ಯುಕೆಪಿಗೆ ಕನಿಷ್ಟ 25 ಸಾವಿರ ಕೋಟಿ
ಪ್ಯಾಕೇಜ್‌, ದೇಶದ 7 ತೋಟಗಾರಿಕೆ ವಿವಿಯಲ್ಲಿ ಮೊದಲ ಸ್ಥಾನದಲ್ಲಿರುವ ಬಾಗಲಕೋಟೆ ತೋಟಗಾರಿಕೆ ವಿವಿಗೆ ವಿಶೇಷ
ಅನುದಾನ, ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣದ ಭೂ ಸ್ವಾಧೀನಕ್ಕೆ ಅಗತ್ಯ ಅನುದಾನ, ಕೂಡಲಸಂಗಮ ಅಕ್ಷರಧಾಮ ಮಾದರಿ ನಿರ್ಮಾಣದ ಮೂಲ ಯೋಜನೆ ಪೂರ್ಣಗೊಳಿಸುವ, ಜಿಲ್ಲೆಯ ಸಮಗ್ರ ಕೆರೆಗಳಿಗೆ ನೀರು ತುಂಬಿಸುವ ಬದ್ಧತೆಯ ಕಲ್ಪನೆಯಾಗಲಿ, ಭರವಸೆಯಾಗಲಿ ಬಜೆಟ್‌ನಲ್ಲಿ ಸಿಕ್ಕಿಲ್ಲ. ಇದು ಜಿಲ್ಲೆಯ ಜನರನ್ನು ನಿರಾಶೆಗೊಳಿಸಿದೆ.

*ಶ್ರೀಶೈಲ ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next