ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಸಹಜವಾಗಿ ಜನಪರವಾಗಿಯೇ ಇದೆ. ತೆರಿಗೆ ಹೊರೆ ಹಾಕದೆ ಸಂಪನ್ಮೂಲ ಕ್ರೂಢೀಕರಣಕ್ಕೆ ದಾರಿ ಹುಡುಕಿಕೊಂಡು ಕಳೆದ ಬಾರಿಗಿಂತ ಹದಿನೈದು ಸಾವಿರ ಕೋಟಿ ರೂ. ಬಜೆಟ್ ಗಾತ್ರ ಹೆಚ್ಚಿಸಿಕೊಂಡಿರುವುದು ಬೊಮ್ಮಾಯಿ ಅವರದು ಜಾಣ್ಮೆ ನಡೆ.
ಸಹಕಾರ ಬ್ಯಾಂಕ್‌ಗಳಲ್ಲಿ ಐದು ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಸರ್ಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡುವ ಮೂಲಕ ಉಚಿತ ಶಿಕ್ಷಣ ನೀಡುವ ಮುಖ್ಯಮಂತ್ರಿಯವರ ವಿದ್ಯಾಶಕ್ತಿ ಯೋಜನೆ, ಶಾಲಾ -ಕಾಲೇಜು ವಿದ್ಯಾರ್ಥಿಗಳಿಗಾಗಿ ಮಕ್ಕಳ ಬಸ್ ಸೇವೆ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ.
ಶೂನ್ಯ ಬಡ್ಡಿ ದರದಲ್ಲಿ ಐದು ಲಕ್ಷ ರೂ.ವರೆಗೆ ಸಾಲ 30 ಲಕ್ಷ ರೈತರಿಗೆ, ಉಚಿತ ಉನ್ನತ ಶಿಕ್ಷಣ 8 ಲಕ್ಷ ವಿದ್ಯಾರ್ಥಿಗಳಿಗೆ, 19 ಲಕ್ಷ ವಿದ್ಯಾರ್ಥಿಗಳಿಗೆ ಬಸ್ ಸೇವೆ ಅನುಕೂಲವಾಗಲಿದೆ.ಬೀಜ, ಗೊಬ್ಬರ ಖರೀದಿಗೆ ಭೂಸಿರಿ ಎಂಬ ಹೊಸ ಯೋಜನೆಯಡಿ 10,000 ರೂ.ಸಹಾಯಧನ ಒದಗಿಸುವುದು ಹಾಗೂ ರೈತರ ಬದುಕಿಗೆ ಭದ್ರತೆ ಒದಗಿಸಲು 180 ಕೋಟಿ ರೂ.ವೆಚ್ಚದಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ ಜಾರಿಗೆ ತರುವುದು ಉತ್ತಮ ನಿರ್ಧಾರ. ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು ಆವರ್ತ ನಿಧಿ 3500 ಕೋಟಿ ರೂ.ಗೆ ಹೆಚ್ಚಳ ಸಹ ಉತ್ತಮ ತೀರ್ಮಾನ.
ಈ ನಡುವೆ, 77,750 ಕೋಟಿ ರೂ. ಸಾಲಕ್ಕೆ ಅವಕಾಶ ಮಾಡಿಕೊಂಡಿರುವುದು, ವರ್ಷಾಂತ್ಯಕ್ಕೆ ರಾಜ್ಯದ ಒಟ್ಟಾರೆ ಸಾಲದ ಹೊರೆ 5,64,846 ಲಕ್ಷ ಕೋಟಿಗೆ ತಲುಪುವುದು ಆತಂಕದ ವಿಷಯವಾದರೂ ಆದಷ್ಟೂ ಸಾಲ ಕಡಿಮೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿಯವರ ಬಜೆಟ್‌ನಲ್ಲಿ ಹೇಳಿರುವುದು ಸಮಾಧಾನಕರ. ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲವು ಜನಪ್ರಿಯ ಕಾರ್ಯಕ್ರಮ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರ ಅನುಷ್ಠಾನವಾಗಬೇಕಾದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಒಂದೊಮ್ಮೆ ಬೇರೆ ಪಕ್ಷದ ಸರ್ಕಾರ ಬಂದರೂ ಜನಪ್ರಿಯ ಕಾರ್ಯಕ್ರಮ ರದ್ದು ಮಾಡುವುದು ಕಷ್ಟ.
ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ವಲಯಕ್ಕೆ 2023-24ನೇ ಸಾಲಿನಲ್ಲಿ ಒಟ್ಟಾರೆಯಾಗಿ 3,458 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ಯ ನೀಡುವುದರ ಜತೆಗೆ ಗಡಿಪ್ರದೇಶದ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ನೀಡಲಾಗಿದೆ. ಬೆಂಗಳೂರಿನಲ್ಲಿ ಕನ್ನಡ ಮಾತೆ “ಭುವನೇಶ್ವರಿ’ ದೇವಿಯ ಬೃಹತ್ ಮೂರ್ತಿ ಹಾಗೂ ಥೀಮ್ ಪಾರ್ಕ್ ಘೋಷಣೆ ಮಾಡಲಾಗಿದ್ದು, ಈ ಮೂಲಕ ಕನ್ನಡ ನಾಡು ನುಡಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳಾದ ಖೋಖೋ, ಕುಸ್ತಿ, ಕಬಡ್ಡಿ, ಕಂಬಳ, ಎತ್ತಿನಗಾಡಿ ಓಟ ಮುಂತಾದವುಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಲು ಮತ್ತು ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾಂಗಣವನ್ನು ನರೇಗಾ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಬಗ್ಗೆ ಘೋಷಿಸಲಾಗಿದ್ದು, ಈ ಮೂಲಕ ಗ್ರಾಮೀಣ ಕ್ರೀಡೆಗಳ ಉಳಿಸಲು ಮುಂದಾಗಿದ್ದಾರೆ.
ಬಜೆಟ್‌ನಲ್ಲಿ ಕೃಷಿಕರು, ಮಹಿಳೆಯರು, ವಿದ್ಯಾರ್ಥಿಗಳು, ಬಡವರು, ದಲಿತರು ಹಾಗೂ ಅಸಂಘಟಿತ ವಲಯದ ಕಾರ್ಮಿಕರನ್ನು ಗುರಿಯಾರಿಸಿಕೊಂಡು ಯೋಜನೆ ಘೋಷಿಸಿರುವುದು. ಜತೆಗೆ ಶಿಕ್ಷಣ, ಆರೋಗ್ಯ, ನೀರಾವರಿಗೂ ಆದ್ಯತೆ ನೀಡಿರುವುದು ಅಭಿವೃದ್ಧಿ ಪರ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಲಾಗಿದೆ.
ಬಜೆಟ್‌ನಲ್ಲಿ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿ ವರ್ಗವನ್ನು ಗುರಿಯಾಗಿಸಿಕೊಂಡು ಬಸವರಾಜ ಬೊಮ್ಮಾಯಿ ಕೆಲವೊಂದು ಘೋಷಣೆ ಮಾಡಿದ್ದಾರೆ. ಯಾವುದೇ ಸರ್ಕಾರ ಇದ್ದರೂ ಈ ವರ್ಗದ ಬಗ್ಗೆ ಕಾಳಜಿ ತೋರಲೇಬೇಕು ಹಾಗೂ ರೂಪಿಸಿದ ಕಾರ್ಯಕ್ರಮ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಲೇಬೇಕು.