Advertisement

ಆಂತರಿಕ ಉತ್ಪನ್ನ ಬೆಳವಣಿಗೆ, ಅಭಿವೃದ್ಧಿ ವೆಚ್ಚ ಏರಿಕೆ

09:53 PM Feb 17, 2023 | Team Udayavani |

ಬೆಂಗಳೂರು: ರಾಜ್ಯದ ಆಂತರಿಕ ಉತ್ಪನ್ನವು ಪ್ರಸಕ್ತ ಸಾಲಿನಲ್ಲಿ ಶೇ.14.ರಷ್ಟು ಬೆಳವಣಿಗೆ ಸಾಧಿಸಿದೆ ಮತ್ತು ರಾಜ್ಯದ ಅಭಿವೃದ್ಧಿ ವೆಚ್ಚ ಶೇ.65.47ರಷ್ಟು ಏರಿಕೆಯಾಗಿದೆ ಎಂದು 2022-23ನೇ ಸಾಲಿನ ಆರ್ಥಿಕ ಸಮೀಕ್ಷೆ ವಿಶ್ಲೇಷಿಸಿದೆ.

Advertisement

ರಾಜ್ಯ ಆಂತರಿಕ ಉತ್ಪನ್ನವು 2021- 22ನೇ ಸಾಲಿನಲ್ಲಿ ಪ್ರಸಕ್ತ ಬೆಲೆಗಳಲ್ಲಿ ರೂ. 19.62 ಲಕ್ಷ ಕೋಟಿಗಳಿದ್ದು, 2022-23ನೇ ಸಾಲಿನಲ್ಲಿ ಶೇ.14.2 ರ ಬೆಳವಣಿಗೆಯೊಂದಿಗೆ ರೂ.22.41 ಲಕ್ಷ ಕೋಟಿ ಗಳಷ್ಟು ಆಗುವ ನಿರೀಕ್ಷೆ ಇದೆ. ಇದೇ ಅವಧಿಯಲ್ಲಿ ರಾಜ್ಯ ಆಂತರಿಕ ಉತ್ಪನ್ನವು ಸ್ಥಿರ ಬೆಲೆಗಳಲ್ಲಿ ರೂ.13.26 ಲಕ್ಷ ಕೋಟಿಗಳಿದ್ದು, ಶೇ.7.9ರ ಬೆಳವಣಿಗೆಯೊಂದಿಗೆ ರೂ.13.26 ಲಕ್ಷ ಕೋಟಿ ಗಳಷ್ಟು ಆಗುವ ನಿರೀಕ್ಷೆ ಇದೆ.

2022-23ನೇ ಸಾಲಿನ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ದರ ಸ್ಥಿರ ಬೆಲೆಗಳಲ್ಲಿ ಶೇ.7.9ರಷ್ಟು ಹಾಗೂ ರಾಷ್ಟ್ರೀಯ ಆಂತರಿಕ ಉತ್ಪನ್ನದ ಬೆಳವಣಿಗೆ ದರ ಶೇ.7 ರಷ್ಟು ಆಗುವ ನಿರೀಕ್ಷೆಯಿದೆ.

ಕೃಷಿ -ಕೈಗಾರಿಕೆ ಬೆಳವಣಿಗೆ ದರ ಕುಸಿತ: ಕೃಷಿ ವಲಯದ ಬೆಳವಣಿಗೆ ದರ ಶೇ.8.7 ಕ್ಕೆ ಹೋಲಿಸಿದರೆ 2022-23ನೇ ಸಾಲಿಗೆ ಶೇ.5.5 ರಷ್ಟು ಬೆಳವಣಿಗೆ ಯಾಗಬಹುದೆಂದು ಅಂದಾಜಿಸಲಾಗಿದೆ. ಕೋವಿಡ್‌-19ರ ಪರಿಣಾಮಗಳಿಂದಾಗಿ, ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಕಾರ್ಮಿಕರು ವಲಸೆ ಹೊಗಿರುವುದು ಮತ್ತು ಕೃಷಿ ಪದಾರ್ಥಗಳ ಮೌಲ್ಯವರ್ಧನೆಯ ಸರಪಳಿಯ ಬಲವರ್ಧನೆಯಿಂದಾಗಿ ಕೃಷಿ ವಲಯದ ಬೆಳವಣಿಗೆ ದರ 2020-21ನೇ ಸಾಲಿನಲ್ಲಿ ಶೇ.15.2 ರಷ್ಟಿತ್ತು. ಮೀನುಗಾರಿಕೆ ವಲಯದ ಶೇ.16.6 ಹಾಗೂ ಜಾನುವಾರು ವಲಯದ ಶೇ.10ರ ಬೆಳವಣಿಗೆಯು ಪ್ರಸಕ್ತ ವರ್ಷದ ಕೃಷಿ ವಲಯದ ಬೆಳವಣಿಗೆ ದರ ಏರಿಕೆಯಾಗಲು ಪ್ರಮುಖ ಕಾರಣವಾಗಿರುತ್ತದೆ. ಕೈಗಾರಿಕಾ ವಲಯದ ಬೆಳವಣಿಗೆ ದರ 2021-22ರಲ್ಲಿ ಶೇ.10.3 ರಷ್ಟಿದ್ದು, 2022-23ನೇ ಸಾಲಿನಲ್ಲಿ ಶೇ.5.1 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

ಅಭಿವೃದ್ಧಿ ವೆಚ್ಚ ಏರಿಕೆ: ರಾಜ್ಯದ ಅಭಿವೃದ್ಧಿ ವೆಚ್ಚ ಶೇ.65.47ರಷ್ಟು ಏರಿಕೆಯಾಗಿದೆ ಎಂದು 2022-23ನೇ ಸಾಲಿನ ಆರ್ಥಿಕ ಸಮೀಕ್ಷೆ ವಿಶ್ಲೇಷಿಸಿದೆ. 2022-23ರ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿ ವೆಚ್ಚದ ಪಾಲು ಶೇ.65.21ರಿಂದ ಶೇ.65.47 ಆಗಿದೆ. ಆರ್ಥಿಕ ಸಮೀಕ್ಷೆ ಪ್ರಕಾರ ಅಭಿವೃದ್ಧಿ ವೆಚ್ಚವು 2021-22ರಲ್ಲಿ ರೂ. 1,63,825 ಕೋಟಿಗಳಿಂದ 2022-23ರಲ್ಲಿ ರೂ. 1,73,309 ಕೋಟಿಗಳಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಒಟ್ಟು ವೆಚ್ಚದಲ್ಲಿ ಅಭಿವೃದ್ಧಿ ವೆಚ್ಚದ ಪಾಲು ಶೇ. 65.21 ರಿಂದ ಶೇ. 65.47ಕ್ಕೆ ಸ್ವಲ್ಪ ಹೆಚ್ಚಾಗಿರುತ್ತದೆ. ಒಟ್ಟು ವೆಚ್ಚವು 2021-22 ರಲ್ಲಿ ರೂ. 2,53,165 ಕೋಟಿಯಷ್ಟಿದ್ದು, 2022-23 ರಲ್ಲಿ ರೂ. 2,65,720 ಕೋಟಿಗಳಿಗೆ ಏರಿಕೆಯಾಗಿದೆ. ತಲಾವಾರು ಅಭಿವೃದ್ಧಿ ವೆಚ್ಚವು 2021-22 ರಲ್ಲಿ ರೂ. 23,172 ರಷ್ಟು ಇದ್ದು 2022-23ರಲ್ಲಿ ರೂ. 24,171 ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿದೆ.

Advertisement

ಅದೇ ರೀತಿ 2021-22 ನೇ ಸಾಲಿನ ರಾಷ್ಟ್ರೀಯ ಆದಾಯಕ್ಕೆ ಹೋಲಿಸಿದಾಗ ರಾಜ್ಯ ಆದಾಯದ ಕೊಡುಗೆಯು ಶೇ.8.3 ರಷ್ಟಿದ್ದು, ಇದು 2022-23ರ ರಲ್ಲಿ ಶೇ.8.2 ರಷ್ಟಿರುತ್ತದೆ. 2022-23 ನೇ ಸಾಲಿನಲ್ಲಿ ರಾಜ್ಯದ ತಲಾ ಆದಾಯವು 3,01,673 ರೂಪಾಯಿಗಳಷ್ಟಿದ್ದು ಇದು ರಾಷ್ಟ್ರೀಯ ತಲಾ ಆದಾಯ ರೂ 1,70,620 ಕ್ಕಿಂತಲೂ ಶೇ. 77 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ರಾಜ್ಯದ ತಲಾದಾಯವು 2021-22ನೇ ಸಾಲಿನಲ್ಲಿ ಪ್ರಸಕ್ತ ಬೆಲೆಗಳಲ್ಲಿ ರೂ.2,65,623 ಇಂದ ಶೇ.13.6ರ ಬೆಳವಣಿಗೆಯೊಂದಿಗೆ ರೂ.3,01,673 ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ಇದೇ ಅವಧಿಯಲ್ಲಿ ಸ್ಥಿರ ಬೆಲೆಗಳಲ್ಲಿ ರೂ.1,64,471 ಇಂದ ಶೇ.7.2ರ ಬೆಳವಣಿಗೆಯೊಂದಿಗೆ ರೂ.1,76,383 ಕ್ಕೆ ಏರಿಕೆ ಆಗುವ ನಿರೀಕ್ಷೆಯಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next