ರಾಜ್ಯ ಮುಂಗಡ ಪತ್ರದಲ್ಲಿ ಪರಿಶಿಷ್ಟರ ಏಳಿಗೆಗೆ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆ ಕಾಯ್ದೆಯ ಸೆಕ್ಷನ್ 7 (ಡಿ) ಪರಿಷ್ಕರಣೆ ಮಾಡಲಾಗುವುದೆಂದು ತಿಳಿಸಿರುವುದು ಸ್ವಾಗತಾರ್ಹ.
Advertisement
ಈ ಯೋಜನೆಗೆ ಒದಗಿಸಿರುವ ಅನುಪಾತದ ಅನುದಾನದ ಹೆಚ್ಚಳ ಗಮನಾರ್ಹ. ಗಂಗಾಕಲ್ಯಾಣ ಯೋಜನೆಗೆ ಅಗತ್ಯ ಸಹಾಯಧನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ವಸತಿಯೋಜನೆಗಳ ಘಟಕ ವೆಚ್ಚದ ಹೆಚ್ಚಳ, ಪರಿಶಿಷ್ಟ ಗುತ್ತಿಗೆದಾರರ ಕಾಮಗಾರಿಯ ಮೊತ್ತದ ಏರಿಕೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಹೆಚ್ಚಳ, ಪರಿಶಿಷ್ಟರ 6 ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನದಂಥ ಘೋಷಣೆಗಳು ಪ್ರಶಂಸನೀಯ.ಆದರೆ, ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಇನ್ನಷ್ಟು ಒತ್ತು ನೀಡಬೇಕಿತ್ತು.
Related Articles
Advertisement
ಪ್ರಸಕ್ತ ವರ್ಷ ಒಟ್ಟು 9,500 ಸಂಖ್ಯೆಯ ಪರಿಶಿಷ್ಟ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅವಕಾಶ ನೀಡಿರುವುದು ಕಡಿಮೆಯೆನಿಸುತ್ತದೆ. ಗುಣಮಟ್ಟದ ತರಬೇತಿ ಜೊತೆಗೆ, ಹಿಂದಿನ ವರ್ಷಗಳಲ್ಲಿ ಯಶಸ್ಸು ಕಂಡವರ ಕುರಿತು ಮಾಹಿತಿ ಇರಬೇಕಿತ್ತು. ಸಾಧ್ಯವಾದರೆ ಪರಿಣಾಮಕಾರಿ ಸಮೀಕ್ಷೆಯಿಂದ ಇಂತಹ ತರಬೇತಿಗಳ ಯಶಸ್ಸಿನ ಅಧ್ಯಯನವಾಗಬೇಕು. ಸರ್ಕಾರದ ವಿವಿಧ ಇಲಾಖೆ, ನಿಗಮ, ಮಂಡಳಿ, ವಿಶ್ವವಿದ್ಯಾಲಯಗಳಲ್ಲಿರುವ ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಹಿಂಬಾಕಿ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಬೇಕಿತ್ತು. ಕೋವಿಡ್ ಕಾಲದ ಆರ್ಥಿಕ ಮಿತವ್ಯಯಗಳ ನಂತರ ನೇಮಕಾತಿಯು ಕ್ಷೀಣಿಸಿರುವುದರಿಂದ, ಅದಕ್ಕೊಂದು ವೇಗ ನೀಡಲು ಹಿಂಬಾಕಿ ಹುದ್ದೆಗಳ ಕಾಲಮಿತಿ ಭರ್ತಿಯ ಘೋಷಣೆಯ ಅಗತ್ಯತೆಯಿತ್ತು.
ಮುಂಗಡಪತ್ರದಲ್ಲಿ ಕೆಲವು ಆಶಾದಾಯಕ ಅಂಶಗಳಿವೆ. ಅವು ಕೇವಲ ಕಾಗದದ ಮೇಲೆ ಅಂದಾಜು ಕಾರ್ಯಕ್ರಮಗಳಾಗಿ ಉಳಿಯದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ಇನ್ನಷ್ಟು ಬಲಪಡಿಸಬೇಕು. ಜೊತೆಗೆ, ಪರಿಶಿಷ್ಟ ಪಂಗಡ ನಿರ್ದೇಶನಾಲಯ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳೂ ಹೆಚ್ಚಿನ ಕಾರ್ಯಕ್ಷಮತೆಯಿಂದ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು.